ಬುದ್ಧನಿಲ್ಲದ ನೆಲದಲಿ

ಕೆ.ಮಹಾಂತೇಶ್

ಬಡವರ ಮನೆಗಳಲಿ
ದೀಪ ಬೆಳಗಿಸಲು
ಬುದ್ದ ತುಳಿದ ಹಾದಿಗೆ
ಎದುರಾಗಿದ್ದವು ನೂರಾರು
ತೊಡರುಗಳು

ಬದ್ದನನು ಕೆಳಗಿಳಿಸಿ
ಗಹಗಹಿಸಿ ನಕ್ಕವರೆಷ್ಟೋ
ಪೈಪೋಟಿಗೆ ಬಿದ್ದು ಕಲ್ಲ ಮೇಲೆ ಕಲ್ಲು
ಎಸೆದವರೆಷ್ಟೋ
ಬುದ್ದನ ಬದಲು ಪ್ರಬುದ್ಧ ಸಮಾಜ‌ದ
ಭ್ರಮೆಯನು ಜನರ‌ ಮನದಲಿ ಬಿತ್ತಿ
ಲಾಭ ಪಡೆದವರೆಷ್ಟೋ

ಬುದ್ಧ ಕೆಳಗಿಳಿದ‌ರು ನಿಜ
ಬಳಿಕ ನಡೆದಿದ್ದೇನು..?
ದೀನರ ಮನೆಯಲಿ
ದೀಪ ಬೆಳಗುವುದು ಬಿಡಿ
ಬುದ್ದನ ಇಳಿಸಲು ಪಣ ತೊಟ್ಟವರ
ತಲೆಗಳೇ ನೆಲಕ್ಕುರುಳಿದವು

ಸರ್ಕಾರವ ಬದಲಿಸಲು
ಟೊಂಕಟ್ಟಿದವರ ಜೈಲು
ಪಲಾಗಿದ್ದು ಈಗ ಇತಿಹಾಸ
ಕೆಲಸಕ್ಕಾಗಿ ಹಾತೊರೆದ ಕೈಗಳಿಗೆ ಎರಡೆಲೆಯ ಹೂಗಳ ಬಾವುಟ
ಸಿಕ್ಕಿದ್ದು ಬಿಟ್ಟರೆ ಮತ್ತೇನೂ ಇಲ್ಲ

ಭೂ ಸುಧಾರಣೆ ಫಲವುಂಡವರ
ಮನದಲ್ಲಿ ವಿಷಗಾಳಿ ತುಂಬಿ
ಹುಸಿಯ ಬಲೂನು ಹಾರಿಸಿದ್ದು
ಭವಿಷ್ಯದ‌‌ ಕನಸು‌ ಕಂಡ ಯುವಜನರು
ಊರು ತೊರೆಯುವ ವಲಸಿಗರಾಗಿ
ಮಾಡಿದ್ದಷ್ಟೇ ಈಗವರ ಸಾಧನೆ..!

ಈಗ ಬುದ್ದನಿಲ್ಲ
ದಶಕಗಳ ಕಾಲ ಬೆಳಕ ನೀಡಿದ
ಜ್ಯೋತಿಯೂ ಇಲ್ಲ
ಆದರೆ
ಕತ್ತಲ ತುಂಬಿದ ಬಡವರ
ಮನೆಗಳಲ್ಲಿ ದೀಪ ಹೊತ್ತಿತೇ?
ಪುರಾತನ‌ ನಗರಿಯ ನೆಲದಲಿ
ಓಡಾಡುತ್ತಿರುವ ನನಗೀಗ ಕಾಡುತ್ತಿದೆ
ಈ ಪ್ರಶ್ನೆ ಇದು

ಕತ್ತಲಿನಿಂದ ಬೆಳಕಿನಡೆಗೆ ಎನ್ನುವ ಹುಸಿನಗೆಯ ಚೆಲ್ಲಿದವರ ಬಣ್ಣವೆಲ್ಲ
ಈಗ ಬಯಲಾಗಿದೆ
ಭಾವನೆಗಳ ವಿಷ ಭಿತ್ತಿದವರಿಗಷ್ಟೇ
ಸಮೃದ್ಧ ಫಸಲಿನ ಲಾಭ ದಕ್ಕಿದೆ

ಅಂದು ಎಡರಂಗದ ವಿರುದ್ದ
ಬೀದಿಗಿಳಿದವರ ಹೊಟ್ಟೆಯ ಮೇಲೆ ಭಾಷಣಗಳ ಸುರಿಮಳೆ
ಚುನಾವಣೆಗಳ‌ ಮೇಲೆ ಚುನಾವಣೆಗಳು ಬಂದೋಗಿವೆ
ಆದರೆ ಬದಲಾಗಿಲ್ಲ
ಬಡಜನರ ಉದರದ ಬಯಕೆಗಳು

ಬಂಗಾಳದ ಕಡಲ ನೀರಲಿ
ಮರೆಯಾಗಿದೆ ಈಗ ಬುದ್ದನ ಚಿತ್ರ
ಬುದ್ದನನು ಇಲ್ಲವಾಗಿಸಿ ಸಂಭ್ರಮಿಸಿದ
ತೃಣದ ಬುಡಕ್ಕೆ ಈಗ ಫ್ಯಾಸಿಸ್ಟರ ಸವಾಲು
ಶ್ರಮಿಕರ ಬದುಕನ್ನೇ ತೃಣವಾಗಿಸಿ ಬೆಳೆದ
ಪ್ರಭುತ್ವ ಈಗ ಜನರ ಬದುಕನ್ನು ಪಣಕ್ಕಿಟ್ಟಿದೆ

ಬುದ್ದ ನಂಬಿದ ಸಿದ್ದಾಂತಕೆ
ಸಾವೆಂಬುದಿಲ್ಲ
ಭವಿಷ್ಯದ ಬೆಳಕಿನ‌ ಶ್ರಮಿಕರ
ಅಲೆಯೊಂದು ಮತ್ತೊಮ್ಮೆ ಎದ್ದುಬರಲಿ
ಬಂಗಾಳದ ಕಡಲ ತೀರದಿಂದ
ಪೃಜ್ವಲಿಸುವ ಸೂರ್ಯನುದಯಿಸಿ
ಕತ್ತಲೆಯ ಪರದೆಯ ಸೀಳಲಿ
ಎನ್ನುವ ಮಹಾದಾಸೆ ನನ್ನದು

 

Donate Janashakthi Media

Leave a Reply

Your email address will not be published. Required fields are marked *