- ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾವು ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಲು ತೀರ್ಮಾನ ಮಾಡಿದ್ದೇವೆ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಯಡಿಯೂರಪ್ಪನವರ ಮಗ, ಮೊಮ್ಮಗ, ಅಳಿಯ ಎಲ್ಲಾ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೆಡಿಕಲ್, ಲ್ಯಾಪ್‌ಟಾಪ್, ಟ್ರಾನ್ಸ್ಫಾರ್ಮ್ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ, ಅಭಿವೃದ್ಧಿ ಕುಂಟಿತ, ಆರ್ಥಿಕ ಅಧೋಗತಿಗೆ ಹೋಗುತ್ತಿದೆ ಎಂದಿದ್ದಾರೆ.
ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ವಿರೋಧ ಕಾನೂನು ತಂದಿದ್ದಾರೆ. ಒಂದು ವರ್ಷ ನಾಲ್ಕು ತಿಂಗಳಲ್ಲಿ ರಾಜ್ಯ ಅಧೋಗತಿಗೆ ಹೋಗಿದೆ. ಯಡಿಯೂರಪ್ಪನವರ ಸರ್ಕಾರ ಒಂದು ಲಕ್ಷ, ಒಂದು ಸಾವಿರ ಕೋಟಿ ಸಾಲ ಮಾಡಿದೆ. ಯಡಿಯೂರಪ್ಪ ಮಂತ್ರಿ ಮಂಡಲದ ವಿಶ್ವಾಸ ಕಳೆದುಕೊಂಡಿದೆ. ಈಗಾಗಲೇ ಅವಿಶ್ವಾಸ ಮಂಡನೆಗೆ ನೋಟೀಸ್ ಕೊಟ್ಟಿದ್ದೆ. ನಾವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೇರ ಕಾರಣ. ಸಿಎಂ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಹೋರಾಟ ನಡೆಸುವ ಬಗ್ಗೆಯೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಬಿಜೆಪಿ ಶಾಸಕರಿಗೆ ಸಿಎಂ ಯಡಿಯೂರಪ್ಪನವರ ಮೇಲೆ ವಿಶ್ವಾಸ ಇಲ್ಲ. ಸಚಿವರ ಇಲಾಖೆಯಲ್ಲಿ ವಿಜಯೇಂದ್ರ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿರಿಯ ಸಚಿವರಿಂದಲೇ ಈ ಬಗ್ಗೆ ಅಸಮಾಧಾನ ಇದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ಗೂ ದೂರು ಹೋಗಿದೆ. ಈಗ ಅವಿಶ್ವಾಸ ನಿರ್ಣಯ ಮಂಡಿಸಲು ಸೂಕ್ತ ಸಮಯ ಎಂದು ಸಿದ್ದರಾಮಯ್ಯ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.