ಬಿಎಸ್​ವೈ ನೆರಳಿನಲ್ಲಿಯೇ ಬೊಮ್ಮಾಯಿ ಇದ್ದಾರೆ: ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿ.ಎಸ್. ಯಡಿಯೂರಪ್ಪ ನೆರಳಿನಲ್ಲೇ ಇದ್ದು, ಇವರ ಬಗ್ಗೆ ದೊಡ್ಡ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್​​​ನಲ್ಲೂ ಜನತಾ ಪರಿವಾರದ ಮುಖ್ಯಮಂತ್ರಿ, ಬಿಜೆಪಿಯಲ್ಲೂ ಜನತಾ ಪರಿವಾರದ ಮುಖ್ಯಮಂತ್ರಿ, ಇವರಿಬ್ಬರ ಬೆಂಬಲದಿಂದ ಜನತಾ ಪರಿವಾರದ ಕುಮಾರಸ್ವಾಮಿ ಕೂಡಾ ಎರಡು ವರ್ಷ ಸಿಎಂ ಅಗಿದ್ದು, ಜನಸಾಮಾನ್ಯರು ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿಗಳನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಕೃಷ್ಣ ಕಚೇರಿಯಲ್ಲಿ ಜನಸಾಮಾನ್ಯರ ಸಮಸ್ಯೆ ಕೇಳುತ್ತಿದ್ದೆ. ಈಗ ಆ ಪರಿಸ್ಥಿತಿ ಇಲ್ಲ ಎಂದರು.

ಶಾಸಕ ಅರವಿಂದ್ ಬೆಲ್ಲದ್ ಮುಖ್ಯಮಂತ್ರಿಯಾಗಿ ಆಯ್ಕೆ ಆಗುತ್ತೇನೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಕಳೆದ ಎರಡು ತಿಂಗಳಲ್ಲಿ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರಗಳ ಕಡತಗಳನ್ನು ಸಹ ಅವರು ತರಿಸಿಕೊಂಡಿದ್ದರಂತೆ. ಇನ್ನೇನು ಸಿಎಂ ಆಗಿಯೇ ಬಿಡುತ್ತೇನೆಂದು ಬೆಲ್ಲದ್ ಅವರು ಈ ರೀತಿ ಮಾಡಿದರಂತೆ ಎಂಬ ವಿಷಯ ಮಾಧ್ಯಮವೊಂದರಲ್ಲಿ ನೋಡಿದೆ. ಬಿಜೆಪಿಯಲ್ಲಿ ಅವರವರ ಮಧ್ಯೆಯೇ ಸಮನ್ವಯತೆ ಇಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇತ್ತೀಚೆಗೆ ಹದಗೆಡುತ್ತಿದೆ. ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇವಲ ಇನ್ನೂರು, ಮುನ್ನೂರು ರೂ.ಗೆ ಕೊಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಜೊತೆಗೆ ಸರಗಳ್ಳತನ ಹೆಚ್ಚಳವಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *