ಬಿಎಸ್‌ಎನ್‌ಎಲ್ ಗೆ ಬೃಹತ್ ‘ಪುನರುಜ್ಜೀವನ ಪ್ಯಾಕೇಜ್‌’: ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ

ಬಿಎಸ್‌ಎನ್‌ಎಲ್ ಗೆ 1.64 ಲಕ್ಷ ಕೋಟಿ ರೂ.ಗಳ ಒಂದು ಬೃಹತ್ ‘ಪುನರುಜ್ಜೀವನ’ ಪ್ಯಾಕೇಜ್‌ನ್ನು ಕೇಂದ್ರ ಸಂಪುಟ ಮಂಜೂರು ಮಾಡಿರುವುದಾಗಿ ದೂರಸಂಪರ್ಕ ಮಂತ್ರಿಗಳು ಹೇಳಿದ್ದಾರೆ. 2019ರಲ್ಲಿ ಕೂಡ ಕೇಂದ್ರ ಸಂಪುಟ ರೂ.70,000 ಕೋಟಿ ಪ್ಯಾಕೇಜನ್ನು ಮಂಜೂರು ಮಾಡಿತ್ತು. ಅದರಿಂದಾಗಿ ಅದು ಚೇತರಿಸಿಕೊಂಡು ಒಂದು ಸ್ಥಿರತೆ ಹೊಂದಿರುವ ಕಂಪನಿಯಾಗಿದೆ ಎಂಬ ವಿಶ್ವಾಸ ಮೂಡಿದೆ. ಈ ಎರಡನೇ ಪ್ಯಾಕೇಜಿನಿಂದ ಅದು ಸಮರ್ಥ ಕಂಪನಿಯಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಇದು ನಿಜವೇ? ಅಥವ ಸತ್ಯೋತ್ತರ ಕಾಲದ ಇನ್ನೊಂದು ಜುಮ್ಲಾವೇ?

ಕೇಂದ್ರ ಸರಕಾರ ನಿಜವಾಗಿಯೂ ಬಿಎಸ್‌ಎನ್‌ಎಲ್ ಒಂದು ಸಮರ್ಥ ಕಂಪನಿಯಾಗ ಬಯಸುತ್ತಿದೆಯೇ? ಈ ಸಂದೇಹ ಮೂಡಲು ಒಂದು ಪ್ರಮುಖ ಕಾರಣ ಏರ್‌ಟೆಲ್, ರಿಲಯಂಸ್ ಜಿಯೊ, ವೊಡಾಫೋನ್ ಇಂಡಿಯ ಮುಂತಾದ ಖಾಸಗಿ ಕಂಪನಿಗಳು 5ಜಿ ಬಗ್ಗೆ ಮಾತಾಡುತ್ತಿರುವವಾಗ ಈ ‘ಎರಡನೇ ಪುನರುಜ್ಜೀವನ’ ಪ್ಯಾಕೇಜ್ ಕೂಡ 2019ರ ಮೊದಲ ಪ್ಯಾಕೇಜಿನಲ್ಲಿಯೂ ಹೇಳಿದ್ದ 4ಜಿಯ ಬಗ್ಗೆಯೇ ಮಾತಾಡುತ್ತಿದೆ. 5ಜಿಯ ಪ್ರಸ್ತಾಪವೂ ಇಲ್ಲ.

ವಾಸ್ತವವಾಗಿ ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ (ಬಿಎಸ್‌ಎನ್‌ಎಲ್‌ಯು) ಜುಲೈ 28ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಸರಕಾರ ಇಂತಹ ತಪ್ಪು ಸಂದೇಶವನ್ನು ಏಕೆ ಕೊಡುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದೂ ಅದು ಹೇಳಿದೆ. ಅರ ಪ್ರಕಾರ ನಿಜ ಸಂಗತಿಯೆಂದರೆ ಈ 1.64 ಲಕ್ಷ ಕೋಟಿ ರೂ.ಗಳಲ್ಲಿ 4ಜಿಗೆ  ಸರಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ, ಉಳಿದ ಮೊತ್ತದಲ್ಲಿಯೂ ಒಂದು ಪೈಸೆಯೂ ಸರಕಾರೀ ಖಜಾನೆಯಿಂದ ಬರುವುದಿಲ್ಲ.

4ಜಿ ಒದಗಿಸಲು 1.13ಲಕ್ಷ ಕೋಟಿ ರೂ. ಎಷ್ಟು ನಿಜ?

23 ಅಕ್ಟೋಬರ್‌ನ ಮೊದಲ ಪ್ಯಾಕೇಜಿನಲ್ಲಿ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರ ಕೊಡಲು ಸರಕಾರ ರೂ. 23,814 ಕೋಟಿ ಖರ್ಚು ಮಾಡಲಿದೆ ಎಂದು ಹೇಳಲಾಗಿತ್ತು. ನಂತರ ಫೆಬ್ರುವರಿ 2022ರ ಬಜೆಟ್ ಭಾಷಣದಲ್ಲಿ ಬಿಎಸ್‌ಎನ್‌ಎಲ್‌ನ ತಂತ್ರಜಾನವನ್ನು ಮೇಲ್ದರ್ಜೆಗೇರಿಸಲು ರೂ.44,000 ಕೋಟಿ ವ್ಯಯ ಮಾಡಲಾಗುವುದು ಎಂದು ಹೇಳಲಾಯಿತು. ಈಗ ಎರಡನೇ ಪ್ಯಾಕೇಜಿನಲ್ಲಿ 4ಜಿ ಒದಗಿಸಲು ರೂ. 4,4,993 ಕೋಟಿ ಕೊಡಲಾಗುವುದು ಎನ್ನಲಾಗಿದೆ. ಅಂದರೆ ಒಟ್ಟಾಗಿ ರೂ.1,12,807 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಬಿಎಸ್‌ಎನ್‌ಎಲ್‌ಗೆ 4ಜಿ ಕೊಡಿಸಲು ಖರ್ಚು ಮಾಡಲಾಗುತ್ತಿದೆ ಎಂಬ ಸಂದೇಶ ಕೊಡಲಾಗಿದೆ. ಸಹಜವಾಗಿಯೇ ಬಿಎಸ್‌ಎನ್‌ಎಲ್‌ನ ಪುನರುಜ್ಜೀವನಕ್ಕಾಗಿ ಸರಕಾರೀ ಖಜಾನೆಯಿಂದ ತೆರಿಗೆದಾರರ ಅಪಾರ ಹಣದ ದುಂದುವೆಚ್ಚ  ಏಕೆ ಎಂದು ಜನರಲ್ಲಿ ಪ್ರಶ್ನೆ ಏಳುವಂತಾಗಿದೆ. ಇದು ತಪ್ಪು ಸಂದೇಶ ಎನ್ನುತ್ತದೆ ಬಿಎಸ್‌ಎನ್‌ಎಲ್ ನೌಕರರ ಸಂಘ. ವಾಸ್ತವವಾಗಿ ಸರಕಾರ ತೆರಿಗೆದಾರರ ಹಣದಲ್ಲಿ ಒಂದು ಪೈಸೆಯನ್ನೂ ಬಿಎಸ್‌ಎನ್‌ಎಲ್‌ಗೆ 4ಜಿ ಗಾಗಿ ಖರ್ಚು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಅದು ಹೇಳಿದೆ.

ಕಾಗದದಲ್ಲೇ ಉಳಿದಿದೆ

ಮೊದಲನೆ ‘ಪುನರುಜ್ಜೀವನ’ ಪ್ಯಾಕೇಜ್ ಇನ್ನೂ ಕೇವಲ ಕಾಗದದಲ್ಲೇ ಉಳಿದಿದೆ. ಈ ಪ್ಯಾಕೇಜಿನಲ್ಲಿದ್ದ ಒಂದೇ ಒಂದು ಅಂಶವನ್ನು ಸರಕಾರ ಜಾರಿಗೆ ತಂದಿದೆ. ಅದೆಂದರೆ, 80,000 ನೌಕರರನ್ನು ವಿಆರ್‌ಎಸ್(ಸ್ವಯಂ ನಿವೃತ್ತಿ) ಮೂಲಕ ಹೊರ ಕಳಿಸಿದ್ದು! 4ಜಿ ಒದಗಿಸುವ ಮಾತು ಕಾಗದದಲ್ಲೇ ಉಳಿದಿದೆ. ಏಕೆಂದರೆ ಸರಕಾರವೇ ಬಿಎಸ್‌ಎನ್‌ಎಲ್ 4ಜಿ ತರಂಗಾಂತರವನ್ನು ಬಳಸಲಿಕ್ಕೇ ಬಿಟ್ಟಿಲ್ಲ!

ಬಿಎಸ್‌ಎನ್‌ಎಲ್ 4ಜಿ ಯನ್ನು ಆರಂಭಿಸದಂತೆ ಸರಕಾರವೇ ಎರಡು ತಡೆಗೋಡೆಗಳನ್ನು ನಿರ್ಮಿಸಿತು ಎನ್ನುತ್ತದೆ ನೌಕರರ ಸಂಘ. ಮೊದಲನೆಯ ತಡೆ ಎಂದರೆ ಬಿಎಸ್‌ಎನ್‌ಎಲ್ ಬಳಿ ಇದ್ದ ಸಾಧನ-ಉಪಕರಣಗಳನ್ನು ಮೇಲ್ದರ್ಜೆಗೇರಿಸಲು ಅನುಮತಿಯನ್ನು ನಿರಾಕರಿಸಿದ್ದು. ಬಿಎಸ್‌ಎನ್‌ಎಲ್ ಬಳಿ ಸುಮಾರು 50,000,  3ಜಿ ಸಾಧನಗಳು ಇದ್ದವು, ಅವನ್ನು ತಂತ್ರಾಂಶವನ್ನು ಮೇಲ್ದರ್ಜೆಗೇರಿಸುವ ಮೂಲಕ 4ಜಿ ಸಾಧನಗಳಾಗಿ ಪರಿವರ್ತಿಸಲು ಸಾಧ್ಯವಿತ್ತು. ಅದಕ್ಕೆ ಅನುಮತಿ ಕೊಡಲಿಲ್ಲ. ಈ ಅನುಮತಿಯನ್ನು ಕೊಟ್ಟಿದ್ದರೆ, ಎರಡು ವರ್ಷಗಳ ಹಿಂದೆಯೇ ಬಿಎಸ್‌ಎನ್‌ಎಲ್ 4ಜಿ ಸೇವೇಗಳನ್ನು ದೇಶಾದ್ಯಂತ ಒದಗಿಸಲು ಸಾಧ್ಯವಿತ್ತಂತೆ.

ಎರಡನೇ ತಡೆ ಎಂದರೆ, 4ಜಿ ಸಾಧನಗಳನ್ನು ಜಾಗತಿಕ ಟೆಂಡರ್ ಮೂಲಕ ಪಡೆಯಲು ಅನುಮತಿ ನಿರಾಕರಿಸಿದ್ದು. ಏರ್‌ಟೆಲ್, ವೊಡಾಫೋನ್, ಜಿಯೋ ಮೊದಲಾದವುಗಳು ತಮಗೆ ಬೇಕಾದ ಸಾಧನಗಳನ್ನು ಜಾಗತಿಕ ಮಾರುಕಟ್ಟೆಯಿಂದ ಪಡೆಯಲು ಅವಕಾಶ ಕೊಡಲಾಗಿತ್ತು. ಆದರೆ ಬಿಎಸ್‌ಎನ್‌ಎಲ್ ಮಾರ್ಚ್ 2020ರಲ್ಲಿ 50,000 ಸಾಧನಗಳನ್ನು ಪಡೆಯಲು ಜಾಗತಿಕ ಟೆಂಡರ್ ಪ್ರಕಟಿಸಿದಾಗ, ಅದನ್ನು ರದ್ದು ಮಾಡಲು ಹೇಳಿ, ಕೇವಲ ಭಾರತೀಯ ಉಪಕರಣ ತಯಾರಕರಿಂದ ಮಾತ್ರ ಖರೀದಿಸಬೇಕು ಎಂದು ಸರಕಾರ ನಿರ್ದೇಶನ ಕೊಟ್ಟಿತು. ಇದಕ್ಕೆ ಟಿಸಿಎಸ್ ನ್ನು 4ಜಿ ಉಪಕರಣಗಳ ಪೂರೈಕೆದಾರ ಎಂದು ಗುರುತಿಸಲಾಯಿತು. ಆದರೆ ಟಿಸಿಎಸ್ ಇದುವರೆಗೂ ತನಗೆ ಈ ಉಪಕರಣಗಳನ್ನು ಒದಗಿಸುವ ಸಾಮರ್ಥ್ಯ ಇದೆ ಎಂದು ಸಾಬೀತು ಪಡಿಸಲಾಗಿಲ್ಲ.

ಈಗಲೂ ಖಾಸಗಿ ಟೆಲಿಕಾಂ ಕಂಪನಿಗಳಿಗೆ 5ಜಿ ಉಪಕರಣಗಳನ್ನು ನೋಕಿಯ, ಎರಿಕ್ಸನ್ ಮುಂತಾದವರಿಂದ ಖರೀದಿಸಲು ಅವಕಾಶ ಇದೆ, ಆದರೆ ಬಿಎಸ್‌ಎನ್‌ಎಲ್‌ಗೆ ಮಾತ್ರ ಅದನ್ನು ನಿರಾಕರಿಸಲಾಗಿದೆ. ಇದನ್ನು ಬಿಎಸ್‌ಎನ್‌ಎಲ್ 4ಜಿ ಸೇವೆಗಳನ್ನು ಆರಂಭಿಸದಂತೆ ತಡೆಯುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ಹೇಳಿದೆ.

ದೂರಸಂಪರ್ಕ ಕ್ಷೇತ್ರದಲ್ಲಿ ತಂತ್ರಜ್ಞಾನ ಶೀಘ್ರ ಗತಿಯಲ್ಲಿ ಮೇಲ್ದರ್ಜೆಗೇರುತ್ತದೆ. ಎಲ್ಲ ಖಾಸಗಿ ಕಂಪನಿಗಳು 5ಜಿ ಗೆ ಸಿದ್ಧವಾಗುತ್ತಿವೆ. ಆದರೆ ಈ ಎರಡನೇ ಪ್ಯಾಕೇಜಿನಲ್ಲಿ 5ಜಿ ಯ ಪ್ರಸ್ತಾಪವೂ ಇಲ್ಲ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ಖೇದ ವ್ಯಕ್ತಪಡಿಸಿದೆ.

ಬಂಡವಾಳ ವೆಚ್ಚದ ವಿಷಯ.

ಈ ‘ಪುನರುಜ್ಜೀವನ’ ಪ್ಯಾಕೇಜಿನಲ್ಲಿ ಮುಂದಿನ ನಾಲ್ಕು ವರ್ಷ, ಬಿಎಸ್‌ಎನ್‌ಎಲ್‌ಗೆ ಸರಕಾರ ರೂ.22,471 ಕೋಟಿ ರೂ. ಕೊಡುತ್ತದೆ ಎನ್ನಲಾಗಿದೆ. ಆದರೆ ನಿಜಸಂಗತಿಯೆಂದರೆ, ಇದು ಸರಕಾರದ ಖಜಾನೆಯಿಂದ, ತೆರಿಗೆದಾರರ ಹಣದಿಂದ ಬರಬೇಕಾಗಿಲ್ಲ. ಏಕೆಂದರೆ ಸರಕಾರವೇ ಬಿಎಸ್‌ಎನ್‌ಎಲ್‌ಗೆ ವಿವಿಧ ಬಾಬ್ತುಗಳಲ್ಲಿ ಒಟ್ಟು ರೂ.38,540 ಕೋಟಿ ರೂ. ಕೊಡಬೇಕಾಗಿದೆ. ಇಷ್ಟೇ ಅಲ್ಲ, ಸರಕಾರ ‘ಪೆನ್ಶನ್ ವಂತಿಗೆ’ಯೆಂದು ಬಿಎಸ್‍ಎನ್‍ಎಲ್‍ನಿಂದ ಸುಲಿಯುತ್ತಿದೆ, ಇದೂ ಬಿಎಸ್‌ಎನ್‌ಎಲ್‌ನ ಹಣಕಾಸು ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ಹೇಳಿದೆ.

ಸಮರ್ಥತೆಯ ಅಂತರ ತುಂಬಲು ನಿಧಿ’

ಬಿಎಸ್‌ಎನ್‌ಎಲ್‌ನ್ನು ಸಮರ್ಥಗೊಳಿಸಲು ಬೇಕಾಗುವ ನಿಧಿಯಲ್ಲಿನ ಕೊರತೆಯನ್ನು ತುಂಬಲು ಬಿಎಸ್‌ಎನ್‌ಎಲ್‌ಗೆ ರೂ. 13,789 ಕೋಟಿ ರೂ.ಗಳನ್ನು “viability gap fund” ಎಂದು ಈ ಪ್ಯಾಕೇಜಿನಲ್ಲಿ ಕೊಡಲಾಗುವುದು ಎನ್ನಲಾಗಿದೆ. ಏನಿದು viability gap funding? ಬಿಎಸ್‌ಎನ್‌ಎಲ್ ಭಾರತ ಸರಕಾರದ ಪರವಾಗಿ ದೇಶದ ಹಿಂದುಳಿದ ಮತ್ತು ದೂರ-ದೂರದ ಸ್ಥಳಗಳಲ್ಲಿ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತದೆ. ಇವು ವಾಣಿಜ್ಯ ದೃಷ್ಟಿಯಿಂದ ನಷ್ಟದ ಬಾಬತ್ತು. ಆದ್ದರಿಂದ ಖಾಸಗಿ ಕಂಪನಿಗಳು ಅದರತ್ತ ಕಣ್ಣೆತ್ತ್ತಿಯೂ ನೋಡುವುದಿಲ್ಲ. ಬಿಎಸ್‌ಎನ್‌ಎಲ್‌ಗೆ ಈ ಮೂಲಕ ಆಗುವ ನಷ್ಟವನ್ನು ತುಂಬಿ ಕೊಡುವುದಾಗಿ ಸರಕಾರ ಈ ಮೊದಲೇ ಹೇಳಿದೆ. 2015ರಿಂದ 2019ರ ವರೆಗಿನ ಅವಧಿಯಲ್ಲಿ ಈ ಬಾಬ್ತಿನಲ್ಲಿ ಬಿಎಸ್‌ಎನ್‌ಎಲ್‌ಗೆ ರೂ.13,789 ಕೊಡಬೇಕಾಗಿತ್ತು. ಅದನ್ನು ಇನ್ನೂ ಕೊಟ್ಟಿಲ್ಲ. ಈಗ ಅದನ್ನೇ ಪುನರುಜ್ಜೀವನ ಪ್ಯಾಕೇಜಿನ ಭಾಗ ಎಂದು ಪ್ರಕಟಿಸಲಾಗಿದೆ! ಇದು ಸರಿಯಲ್ಲ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ಹೇಳಿದೆ.

ಸಾಲ ಎತ್ತಲು ಸರಕಾರದ ಗ್ಯಾರಂಟಿ

ಈ ಪುನರುಜ್ಜೀವನ ಪ್ಯಾಕೇಜಿನ ಒಂದು ಸ್ವಾಗತಾರ್ಹ ಅಂಶ ಎಂದರೆ, ಬಿಎಸ್‌ಎನ್‌ಎಲ್ ಮಾರುಕಟ್ಟೆಯಿಂದ ಬಾಂಡುಗಳ ಮೂಲಕ ರೂ. 40,399 ಕೋಟಿ ಸಾಲ ಎತ್ತಲು ‘ಸಾರ್ವಭೌಮ ಖಾತ್ರಿ’ ಅಂದರೆ ಸರಕಾರ ಗ್ಯಾರಂಟಿ ಕೊಡುತ್ತದೆ. ಇಲ್ಲಿಯೂ ಗಮನಿಸಬೇಕಾದ ಸಂಗತಿಯೆಂದರೆ ಇದೂ ಕುಡ ಸರಕಾರೀ ಖಜಾನೆಯಿಂದ, ತೆರಿಗೆದಾರರ ಹಣದಿಂದ ಬರುತ್ತಿಲ್ಲ, ಬಿಎಸ್‌ಎನ್‌ಎಲ್ ತನ್ನ ಆದಾಯದ ಮೂಲಕವೇ ಇದನ್ನು ತೀರಿಸಬೇಕು ಎಂಬ ಸಂಗತಿಯತ್ತ ನೌಕರರ ಸಂಘ ಗಮನ ಸೆಳೆದಿದೆ.

ಒಟ್ಟಿನಲ್ಲಿ, ಆರಂಭದಲ್ಲೇ ಹೇಳಿದಂತೆ, ಬಿಎಸ್‌ಎನ್‌ಎಲ್ ನೌಕರರ ಸಂಘ ಕೊಟ್ಟಿರುವ ವಿವರಗಳಿಂದ ತಿಳಿದುಬರುವ ಸಂಗತಿಯೆಂದರೆ, ಈ 1.64 ಲಕ್ಷ ಕೋಟಿ ರೂ.ಗಳಲ್ಲಿ 4ಜಿಗೆ ಈ ಸರಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ, ಉಳಿದ ಮೊತ್ತದಲ್ಲಿಯೂ ಒಂದು ಪೈಸೆಯೂ ಸರಕಾರೀ ಖಜಾನೆಯಿಂದ ಬರುವುದಿಲ್ಲ.

 

Donate Janashakthi Media

Leave a Reply

Your email address will not be published. Required fields are marked *