– ಈಗಾಗಲೇ 79,000 ಉದ್ಯೋಗಿಗಳು ಕಂಪನಿಯಿಂದ ನಿರ್ಗಮನ
ಹೊಸದಿಲ್ಲಿ: ಸಾರ್ವಜನಿಕ ವಲಯದ ಭಾರತ್ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಎಲ್ಲ ಗುತ್ತಿಗೆ ಕೆಲಸಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದ್ದು, ಇದರ ಪರಿಣಾಮ 20,000 ಗುತ್ತಿಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳ ಯೂನಿಯನ್ ತಿಳಿಸಿದೆ.
ಬಿಎಸ್‌ಎನ್‌ಎಲ್‌ನಲ್ಲಿ 30,000 ಗುತ್ತಿಗೆ ಕಾರ್ಮಿಕರನ್ನು ಈಗಾಗಲೇ ಕೈಬಿಡಲಾಗಿದೆ. ಕಳೆದೊಂದು ವರ್ಷದಿಂದಲೂ ಇವರಿಗೆ ವೇತನ ಪಾವತಿಸಿಲ್ಲ. ವಿಆರ್‌ಎಸ್ ಜಾರಿಯಾದ ನಂತರ ಕಂಪನಿಯ ಚಟುವಟಕೆಗಳು ಬಿಗಡಾಯಿಸಿವೆ. ನೆಟ್‌ವರ್ಕ್ ಸಮಸ್ಯೆಗಳು ತೀವ್ರವಾಗಿವೆ. ನಾನಾ ನಗರಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. 13 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳ ಯೂನಿಯನ್ ಆರೋಪಿಸಿದೆ.
ಈ ಬಗ್ಗೆ ಬಿಎಸ್‌ಎನ್‌ಎಲ್ ಪ್ರತಿಕ್ರಿಯಿಸಿಲ್ಲ. ಬಿಎಸ್‌ಎನ್‌ಎಲ್ ತಲ್ಲಾ ಎಲ್ಲಾ ಘಟಕಗಳಿಗೆ ಖರ್ಚು ಕಡಿತಗೊಳಿಸಲು ಗುತ್ತಿಗೆ ಕಾಮಗಾರಿಗಳನ್ನು ನಿಯಂತ್ರಿಸುವಂತೆ ಸೆಪ್ಟೆಂಬರ್ 1 ರಂದು ನಿರ್ದೇಶನ ನೀಡಿದೆ. ಇದರಿಂದ ಗುತ್ತಿಗೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ.ಅಭಿಮನ್ಯು ತಿಳಿಸಿದ್ದಾರೆ.
ವಿಆರ್‌ಎಸ್ ಜಾರಿಯಾದ ನಂತರ ಈಗಾಗಲೇ 79,000 ಉದ್ಯೋಗಿಗಳು ಕಂಪನಿಯಿಂದ ನಿರ್ಗಮಿಸಿದ್ದಾರೆ.