ರಾಜೀನಾಮೆ ಸುಳಿವು ನೀಡಿದ ಸಿಎಂ ಯಡಿಯೂರಪ್ಪ ?!

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆ ಮೇರೆಗೆ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಾಯಕತ್ವ ಬದಲಾವಣೆಯ ಕುರಿತು ಮೌನ ಮುರಿದಿದ್ದಾರೆ.

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ಜುಲೈ 25ಕ್ಕೆ ಹೈಕಮಾಂಡ್ ನಿಂದ ಸೂಚನೆ ಬರುತ್ತದೆ, ಅದರಂತೆ ನಡೆದುಕೊಳ್ಳುತ್ತೇನೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದಿನ ಎರಡು ವರ್ಷ ಪಕ್ಷಕ್ಕಾಗಿ ಸಾಕಷ್ಟು ದುಡಿದು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು  ಮಾಧ್ಯಮಗಳಿಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಮಾಡುವ ಬಗ್ಗೆ ಚರ್ಚೆ ತಾರಕಕ್ಕೇರಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಬೇಡ ಎಂದು ಬಿಎಸ್‌ವೈ ಪರ ಹಲವು ಮಾಠಾಧೀಶರು ಬ್ಯಾಟಿಂಗ್ ಮಾಡಿದ್ದಾರೆ. ಈಗ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಗೆ ಸ್ವತಃ ಒಪ್ಪಿಕೊಂಡ್ರಾ ಎನ್ನುವ ಪ್ರಶ್ನೆ,ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿವೆ.

ತಮ್ಮ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ನಿನ್ನೆ ರಾತ್ರಿ ಟ್ವೀಟ್‌ ಮೂಲಕ ಮಹತ್ವದ ನಿರ್ಣಯದ ಸುಳಿವು ಕೊಟ್ಟಿದ್ದಾರೆ.  ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ನಾಯಕತ್ವ ಬದಲಾವಣೆಯಾಗುವುದು ಪಕ್ಕಾ ಎನ್ನುವಂತಾಗಿದ್ದು, ತಾವು ಸಹ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಮುಂಚಿತವಾಗಿ ಬಿಎಸ್‌ವೈ, ಯಾವುದೇ ಪ್ರತಿಭಟನೆ ಮಾಡಬಾರದು ಎಂದು ಅಭಿಮಾನಿ ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದಂತೆ ಕಾಣುತ್ತಿದೆ ಎಂದು ಬಿಜೆಪಿಯಲ್ಲೆ ಕೇಳಿ ಬರುತ್ತಿರುವ ಮಾತಾಗಿದೆ.

ಒಟ್ಟಾರೆ ಸದ್ಯದ ಬೆಳವಣಿಗೆ ನೋಡೊದರೆ ಯಡಿಯೂರಪ್ಪ ರಾಜೀನಾಮೆ ನೀಡುವುದು ಮತ್ತಷ್ಟು ಖಚಿತವಾಗುತ್ತಿದೆ. ಆದರೆ ಅವರು ವಿಧಿಸಬಹುದಾದ ಷರತ್ತುಗಳ ಗುಟ್ಟು ಮಾತ್ರ ರಟ್ಟಾಗುತ್ತಿಲ್ಲ.  ಹೈಕಮಾಂಡ್‌ ಏನೂ ಮಾಡಬಹುದು ಎಂಬ ಕುತೂಹಲ ಈಗ ಮತ್ತೆ ಗರಿಗೆದರಿದೆ.

Donate Janashakthi Media

Leave a Reply

Your email address will not be published. Required fields are marked *