ಥಾಣೆ:ಜೋಶಿ ಬೇಡೇಕರ್ ಕಾಲೇಜಿನ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ (ಎನ್‌ಸಿಸಿ) ಕಿರಿಯ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೈಹಿಕ ತರಬೇತಿ ನಡೆಯುತ್ತಿರುವ ವೇಳೆ ಎಂಟು ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿ ಹಲ್ಲೆ ನಡೆಸಿದ್ದನು. ವಿದ್ಯಾರ್ಥಿಗಳ ಕೈಯನ್ನು ಹಿಂದಕ್ಕೆ ಕಟ್ಟಿ,ಕೆಸರಿನಲ್ಲಿ ತಲೆ ಬಾಗಿಸಿ ಕೋಲಿನಿಂದ ಅಮಾನುಷವಾಗಿ ಹೊಡೆದಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು,ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಶುಕ್ರವಾರ ರಾತ್ರಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ವಿದ್ಯಾರ್ಥಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧಪಟ್ಟಂತೆ ಹಲ್ಲೆ ನಡೆಸಿದ ಹಿರಿಯ ವಿದ್ಯಾರ್ಥಿಯನ್ನು ಅಮಾನತ್ತುಗೊಳಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.