ಬೆಂಗಳೂರು: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಅದಕ್ಕಾಗಿ ಪ್ರಾಣ ತೆತ್ತ ಅಮರ ವೀರರನ್ನು ನೆನೆಯುವುದು ಭಾರತೀಯರೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ! ಚಳವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಗುಂಡೇಟಿಗೆ ಎದೆಯೊಡ್ಡಿ ಹುತಾತ್ಮರಾದ ನಾಲ್ವರು ವಿದ್ಯಾರ್ಥಿಗಳ ನೆನಪಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆ ಹಾಗೂ ಜನಪರ ಸಂಘಟನೆಗಳು ಆಗಸ್ಟ್ 09ರ ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಹುತಾತ್ಮ ಸ್ತೂಪದ ಬಳಿ ಸ್ಮರಣೆ ಕಾರ್ಯಕ್ರಮ ನಡೆಸಿದರು.
1942ರ ಆಗಸ್ಟ್ 9ರ ದಿನ ಬೆಂಗಳೂರಿನ ಮೈಸೂರು ಬ್ಯಾಂಕ್ ಚೌಕದಲ್ಲಿ ಪ್ರತಿಭಟನಾ ನಿರತರಾಗಿದ್ದ ದೇಶಪ್ರೇಮಿ ಯುವಜನರ ಮೇಲೆ ಬ್ರಿಟಿಷರು ಗುಂಡುಗಳ ಮಳೆಗೈದಿದ್ದರು. ಅಂದು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಶಾಮಣ್ಣ ಬೇಟೆರಂಗಪ್ಪ, ಜಿ.ವಿ.ತಿರುಮಲಯ್ಯ, ಪ್ರಹ್ಲಾದ ಶೆಟ್ಟಿ, ಹಾಗೂ ಗುಂಡಪ್ಪ ಎಂಬ ನಾಲ್ವರು ಸ್ವಾತಂತ್ರ್ಯ ವೀರರು ಹುತಾತ್ಮರಾಗಿದ್ದರು.
ಆ ಯುವಚೇತನಗಳ ನೆನಪಿನಲ್ಲಿ ಅದೇ ಜಾಗದಲ್ಲಿ ಹುತಾತ್ಮ ಸ್ತೂಪವನ್ನು ನಿರ್ಮಿಸಲಾಗಿದೆ. ಆದರೆ, ಆ ಹುತಾತ್ಮ ಸ್ಮಾರಕದ ಸುತ್ತ ಇತ್ತೀಚಿನ ವರ್ಷಗಳಲ್ಲಿ ಎದ್ದಿರುವ ಅನಧಿಕೃತ ಕಟ್ಟಡದ ಪರಿಣಾಮ ಅಲ್ಲಿರುವ ‘ಹುತಾತ್ಮ ಸ್ಮಾರಕ’ವೇ ಸಾರ್ವಜನಿಕವಾಗಿ ಮರೆಯಾಗಿ ಹೋಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ಹುತಾತ್ಮ ಸ್ಮಾರಕವನ್ನು ಸಂರಕ್ಷಿಸಬೇಕು ಮತ್ತು ಮೈಸೂರು ಬ್ಯಾಂಕ್ ವೃತ್ತವನ್ನು ‘ಹುತಾತ್ಮ ವೃತ್ತ’ವೆಂದು ಘೋಷಿಸಬೇಕೆಂದು ಕಾರ್ಯಕ್ರಮದಲ್ಲಿ ಆಗ್ರಹಿಸಲಾಯಿತು.