ಆದಿವಾಸಿಗಳ ಭೂಮಿ ಕಸಿದುಕೊಂಡು ಹೋರಾಟಗಾರರನ್ನೇ ಬಂಧಿಸಿದ ಸರ್ಕಾರ: ಬೃಂದಾ ಕಾರಟ್ ಆಕ್ರೋಶ

ಮಧ್ಯಪ್ರದೇಶ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಆದಿವಾಸಿ ಜನರ ಮೇಲೆ ಬಿಜೆಪಿ ಸರ್ಕಾರ ಅಪ್ರಕಟಿತ ಯುದ್ಧ ನಡೆಸುತ್ತಿದೆ ಎಂದು ಸಿಪಿಐ(ಎಂ) ನಾಯಕಿ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಬೃಂದಾ ಕಾರಟ್ ಗಂಭೀರವಾಗಿ ಆರೋಪಿಸಿದ್ದಾರೆ. ಕೆನ್–ಬೆಟ್ವಾ ನದಿ ಜೋಡಣೆ ಯೋಜನೆಯಿಂದ ಸಂತ್ರಸ್ತರಾಗಿರುವ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಇದು ಕೇವಲ ಆದಿವಾಸಿಗಳ ಹಕ್ಕುಗಳ ಪ್ರಶ್ನೆಯಲ್ಲ; ಗಂಭೀರವಾದ ಸಾಂವಿಧಾನಿಕ ಹಕ್ಕುಗಳ ಪ್ರಶ್ನೆಯೂ ಆಗಿದೆ ಎಂದು ಹೇಳಿದ್ದಾರೆ.

ಪನ್ನಾ ಜಿಲ್ಲೆಯ ಅಜಯ್‌ಗಢ ಪ್ರದೇಶದಲ್ಲಿ ರುಂಜ್ ಮತ್ತು ಮಜ್ಗಾಯ್ ಯೋಜನೆಗಳಿಂದ ನಿರಾಶ್ರಿತರಾಗಿರುವ ಆದಿವಾಸಿಗಳನ್ನು ಬೃಂದಾ ಕಾರಟ್ ಭೇಟಿ ಮಾಡಿದರು. ಈ ಯೋಜನೆಗಳ ಪರಿಣಾಮವಾಗಿ ತಮ್ಮ ಮನೆ, ಭೂಮಿ ಮತ್ತು ಬದುಕನ್ನು ಕಳೆದುಕೊಳ್ಳುತ್ತಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

40 ದಿನಗಳ ಪ್ರತಿಭಟನೆ, 25 ದಿನಗಳ ಉಪವಾಸ ಸತ್ಯಾಗ್ರಹ

ಮಜ್ಗಾಯ್ ಯೋಜನೆಯ ವ್ಯಾಪ್ತಿಯಲ್ಲಿರುವ ಬಹನ್ನರಿ ತಪರಿಯನ್ ಗ್ರಾಮದಲ್ಲಿ ಆದಿವಾಸಿಗಳು ನಡೆಸುತ್ತಿದ್ದ 40 ದಿನಗಳ ಪ್ರತಿಭಟನೆ ಭಾನುವಾರ ಅಂತ್ಯಗೊಂಡಿದೆ. ಈ ಹೋರಾಟಕ್ಕೆ ಜೈ ಕಿಸಾನ್ ಸಂಘಟನೆಯ ನಾಯಕ ಅಮಿತ್ ಭಟ್ನಾಗರ್ ಬೆಂಬಲ ನೀಡಿದ್ದರು. ಅವರು 25 ದಿನಗಳಿಂದ ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಪ್ರತಿಪಕ್ಷದ ನಾಯಕ ಉಮಂಗ್ ಸಿಂಘಾರ್ ತೆಂಗಿನ ನೀರು ನೀಡಿ ಅಂತ್ಯಗೊಳಿಸಿದರು.

ಆದರೆ, ಪ್ರತಿಭಟನೆಗೆ ನಾಯಕತ್ವ ನೀಡುತ್ತಿದ್ದ ದಿವ್ಯ ಅಹಿರ್ವಾರ್ ಅವರನ್ನು ಪೊಲೀಸರು ಪ್ರತಿಭಟನಾ ಸ್ಥಳದಿಂದಲೇ ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ದಿವ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನೂ ಓದಿ : ಸೌಜನ್ಯ ಪ್ರಕರಣ | ಪ್ರಮುಖ ವ್ಯಕ್ತಿಗೆ ಎಸ್‌ಐಟಿ ನೋಟಿಸ್ ಸಾಧ್ಯತೆ?

ಅಪ್ರಾಪ್ತ ಬಾಲಕಿಯನ್ನು ಮಧ್ಯರಾತ್ರಿ ಎಬ್ಬಿಸಿ ಕಿರುಕುಳ: ಪೊಲೀಸರ ವಿರುದ್ಧ ಆರೋಪ

ಪೊಲೀಸರ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೃಂದಾ ಕಾರಟ್, ಸಂತ್ರಸ್ತ ಕುಟುಂಬವೊಂದರ ತಾಯಿ ನೀಡಿದ ಮಾಹಿತಿ ಆಧರಿಸಿ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 17 ವರ್ಷದ ಬಾಲಕಿಯನ್ನು ಪೊಲೀಸರು ಮಧ್ಯರಾತ್ರಿ ಬಲವಂತವಾಗಿ ಎಬ್ಬಿಸಿ, ಇತರರನ್ನು ಗುರುತಿಸುವ ನೆಪದಲ್ಲಿ ಇಡೀ ಗ್ರಾಮದಲ್ಲಿ ಸುತ್ತಾಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆಯರನ್ನು ಪುರುಷ ಪೊಲೀಸರು ಮುಟ್ಟುವುದು, ಅಸಭ್ಯ ಭಾಷೆ ಬಳಸುವುದು ಹಾಗೂ ಲಾಠಿಗಳಿಂದ ಹಲ್ಲೆ ನಡೆಸುವುದು ಸೇರಿದಂತೆ ಹಲವು ಕಿರುಕುಳದ ಘಟನೆಗಳು ನಡೆದಿವೆ ಎಂದು ಬೃಂದಾ ಕಾರಟ್ ಆರೋಪಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಲವಂತವಾಗಿ ತೆರವುಗೊಳಿಸಿ, ಹೋರಾಟದ ನಾಯಕಿ ದಿವ್ಯ ಅಹಿರ್ವಾರ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪರಿಹಾರ ನೀಡದೆ ಜನರನ್ನು ನಿರಾಶ್ರಿತರನ್ನಾಗಿಸಿದ ಸರ್ಕಾರ

ಯೋಜನೆಗಳಿಗಾಗಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುತ್ತಿರುವ ಆದಿವಾಸಿಗಳಿಗೆ ಸೂಕ್ತ ಪರಿಹಾರ ನೀಡದೆ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ಬೃಂದಾ ಕಾರಟ್ ಆರೋಪಿಸಿದ್ದಾರೆ. ಯೋಜನೆ ಆರಂಭಿಸುವ ಆರು ತಿಂಗಳ ಮೊದಲೇ ಸಂಪೂರ್ಣ ಪರಿಹಾರ ಪಾವತಿಸಬೇಕು ಎಂಬ ಸಾಂವಿಧಾನಿಕ ನಿಯಮವಿದ್ದರೂ, ಪನ್ನಾ ಜಿಲ್ಲೆಯಲ್ಲಿ ಪರಿಹಾರ ನೀಡುವ ಮೊದಲೇ ಜನರನ್ನು ನಿರಾಶ್ರಿತರನ್ನಾಗಿಸಲಾಗಿದೆ. ಹಲವು ಮನೆಗಳು ಮತ್ತು ಗ್ರಾಮಗಳು ನೀರಿನಲ್ಲಿ ಮುಳುಗಿವೆ ಎಂದು ಅವರು ಹೇಳಿದ್ದಾರೆ.

ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಬದಲು ಪೊಲೀಸರು ಮನೆಗಳಿಗೆ ರಾತ್ರಿ ವೇಳೆ ಬಲವಂತವಾಗಿ ನುಗ್ಗಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೋರಾಟವನ್ನು ಭೋಪಾಲ್, ದೆಹಲಿಗೆ ಕೊಂಡೊಯ್ಯಲು ನಿರ್ಧಾರ

ಆದಿವಾಸಿಗಳ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಭೋಪಾಲ್‌ನಲ್ಲಿರುವ ಪಕ್ಷದ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೃಂದಾ ಕಾರಟ್ ತಿಳಿಸಿದ್ದಾರೆ. ಸಂತ್ರಸ್ತರಿಗೆ ಕಾನೂನು ನೆರವು ಒದಗಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದರ ಜೊತೆಗೆ ಈ ವಿಷಯವನ್ನು ದೆಹಲಿ ಮಟ್ಟದಲ್ಲಿಯೂ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಬಳಿಕ ಜೈಲಿಗೆ ತೆರಳಿ ಬಂಧಿತ ಹೋರಾಟಗಾರ್ತಿ ದಿವ್ಯ ಅಹಿರ್ವಾರ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ.

ಜೈ ಕಿಸಾನ್ ಸಂಘಟನೆಯ ನಾಯಕ ಅಮಿತ್ ಭಟ್ನಾಗರ್ ಕೂಡ ಪ್ರತಿಭಟನೆಯು ಸ್ಥಳೀಯ ಹೋರಾಟದ ಹಂತವನ್ನು ಮೀರಿ ಪ್ರಾದೇಶಿಕ ಮಟ್ಟಕ್ಕೆ ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ. ಆದಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಭೋಪಾಲ್ ಮತ್ತು ದೆಹಲಿಯಲ್ಲಿಯೂ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ದಾರೆ.

ಕೆನ್–ಬೆಟ್ವಾ ಯೋಜನೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಆದಿವಾಸಿಗಳ ಭೂಮಿ, ಮನೆ ಮತ್ತು ಬದುಕಿನ ಮೇಲೆ ಪರಿಣಾಮ ಬೀರುತ್ತಿರುವ ಕ್ರಮಗಳು, ಪರಿಹಾರ ವಿತರಣೆ ಹಾಗೂ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮಗಳು ಈಗ ಪನ್ನಾದಲ್ಲಿ ಪ್ರಮುಖ ವಿವಾದವಾಗಿ ಮುನ್ನೆಲೆಗೆ ಬಂದಿವೆ.

ಇದನ್ನೂ ನೋಡಿ : ಎಸ್‌ಐಆರ್‌ ಕರ್ನಾಟಕ | ಪತ್ತೆಯಾದ ವಿದೇಶಿ ಪ್ರಜೆಗಳೆಷ್ಟು? ಬಾಂಗ್ಲಾದೇಶದವರು ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *