ಮಣಿಪುರ ಘಟನೆ ಖಂಡಿಸಿದ ಲೈಂಗಿಕ ಕಿರುಕುಳ ಆರೋಪ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್!

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜಾಮೀನಿನಲ್ಲಿರುವ ಬ್ರಿಜ್ ಭೂಷಣ್

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತೀಯ ರೆಸ್ಲಿಂಗ್ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಬಗ್ಗೆ ಮಾತನಾಡಿದ್ದು, ‘ಘಟನೆ ದುರದೃಷ್ಟಕರ ಮತ್ತು ಖಂಡನೀಯ’ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದನೂ ಆಗಿರುವ ಬ್ರಿಜ್ ಭೂಷಣ್ ಸಿಂಗ್, “ಇದು ಬಹಳ ದುಃಖಕರ ಘಟನೆಯಾಗಿದ್ದು, ಖಂಡನೀಯವಾಗಿದೆ. ಸ್ವತಂತ್ರ ಭಾರತ, ಅದರಲ್ಲೂ ಭಾರತದ ಒಂದು ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಪ್ರಧಾನ ಮಂತ್ರಿ ಇದನ್ನು ಮನಗಂಡಿದ್ದು, ಅವರ ಮಾತನನ್ನು ನೀವೆಲ್ಲರೂ ಕೇಳಿದ್ದೀರಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ

ಭಾರತೀಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಈಗಾಗಲೆ ಎಫ್‌ಐಆರ್‌ ದಾಖಲಾಗಿದೆ. ಆದರೆ ಅವರ ಬಂಧನ ಈವರೆಗೂ ನಡೆದಿಲ್ಲ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಳೆದ ತಿಂಗಳು ದೇಶದ ಅತ್ಯುನ್ನತ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ತೀವ್ರವಾಗಿ ಪ್ರತಿಭಟಿಸಿದ್ದರು. ಅದಾಗ್ಯೂ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್‌ಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಗುರುವಾರ ಸಾಮಾನ್ಯ ಜಾಮೀನು ನೀಡಿದೆ.

ಮಣಿಪುರದಲ್ಲಿ ಇಬ್ಬರು ಯುವತಿರನ್ನು ಬೆತ್ತಲೆ ಮೆರವಣಿಗೆ ಮಾಡಿದ ಎರಡು ತಿಂಗಳ ಹಳೆಯ ವಿಡಿಯೋ ಬುಧವಾರ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಮರುದಿನ (ಮೇ 4 ರಂದು ) ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ವಿಡಿಯೋ ಜಗತ್ತಿನಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Manipur Violence | ಹಿಂಸಾಚಾರ ಆರಂಭವಾಗಿ 79 ದಿನಗಳ ನಂತರ ಮೌನ ಮುರಿದ ಪ್ರಧಾನಿ ಮೋದಿ!

ಈ ನಡುವೆ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ)ಗೆ ಆಗಸ್ಟ್ 12 ರಂದು ಚುನಾವಣೆ ಘೋಷಿಸಲಾಗಿದೆ. ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಮೇಲೆ ಜಾಮೀನು ಪಡೆದಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆ ನಡೆಸಲು ಮೇಲುಸ್ತುವಾರಿ ಸಮಿತಿಯನ್ನು ನೇಮಿಸಿದ ನಂತರ ತಕ್ಷಣವೇ ಜಾರಿಗೆ ಬರುವಂತೆ ಡಬ್ಲ್ಯುಎಫ್‌ಐ ತನ್ನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕ್ರೀಡಾ ಸಚಿವಾಲಯ ಆದೇಶಿಸಿತ್ತು.

ಅಧ್ಯಕ್ಷರಾಗಿ 12 ವರ್ಷಗಳನ್ನು ಪೂರೈಸಿರುವ ಬ್ರಿಜ್ ಭೂಷಣ್ ಅವರು ಕ್ರೀಡಾ ಸಂಹಿತೆಯ ಮಾರ್ಗಸೂಚಿಗಳ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ಉತ್ತರ ಪ್ರದೇಶ ವ್ರೆಸ್ಲಿಂಗ್ ಅಸೋಸಿಯೇಷನ್ ಮುಖ್ಯಸ್ಥರಾಗಿರುವ ಅವರ ಪುತ್ರ ಕರಣ್ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದೇಶದ 24 ರಾಜ್ಯ ಸಂಸ್ಥೆಗಳಿಂದ ಮತದಾನದ ಹಕ್ಕು ಹೊಂದಿರುವ 48 ಸದಸ್ಯರನ್ನು ಡಬ್ಲ್ಯುಎಫ್‌ಐ ಹೊಂದಿದೆ. ಆಗಸ್ಟ್ 1 ರಂದು ನಾಮಪತ್ರ ಸಲ್ಲಿಸಲಾಗುತ್ತದೆ. ನಾಮಪತ್ರಗಳ ಪರಿಶೀಲನೆ ನಡೆದ ನಂತರ ಆಗಸ್ಟ್ 7 ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಒಂದು ವೇಳೆ ಚುನಾವಣೆ ಅಗತ್ಯವಿದ್ದರೆ ಆಗಸ್ಟ್ 12 ರಂದು ಮತದಾನ ನಡೆಯಲಿದೆ.

ವಿಡಿಯೊ ನೋಡಿ: ಬೇಟಿ ಬಚಾವೋ ಅಂದ್ರೆ ಬೆತ್ತಲೆ ಮಾಡೋದಾ ಪ್ರಧಾನಿಗಳೆ? ಕೇಂದ್ರದ ವಿರುದ್ದ ಕೆರಳಿದ ಪ್ರತಿಭಟನೆಕಾರರು 

Donate Janashakthi Media

Leave a Reply

Your email address will not be published. Required fields are marked *