ಪಾಟ್ನಾ: ನದಿ ದಾಟಲು ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 206 ಮೀಟರ್ ಉದ್ದದ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಕುಸಿದು ಬಿದ್ದಿರುವ ಘಟನೆಯೊಂದು ನಡೆದಿದೆ.
ಬಿಹಾರದ ಬೇಗುಸರಾಯ್ ಗಂಡಕ್ ನದಿ ಮೇಲೆ ನಿರ್ಮಾಣ ಮಾಡಲಾಗಿದ್ದು, ಇದು 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಸಂಪೂರ್ಣ ಕಾಮಗಾರಿ 2017ರಲ್ಲಿಯೇ ಪೂರ್ಣಗೊಂಡಿದ್ದರೂ ಸಹ ಉದ್ಘಾಟನೆಗೊಂಡಿರಲಿಲ್ಲ. ಆ ಬಳಿಕ ಕೆಲದಿನಗಳ ಹಿಂದೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ ಕುಸಿದು ಬಿದ್ದಿದೆ.
ಸಾಹೇಬ್‍ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‍ಪುರ ನಡುವೆ ಸಂಪರ್ಕ ಕಲ್ಪಿಸಲು 206 ಮೀಟರ್ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದ್ದರಿಂದ ಭಾರೀ ಅನಾಹುತದಿಂದ ಜನರು ಪಾರಾಗಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಗುಜರಾತ್‍ನ ಮೊರ್ಬಿಯಲ್ಲಿ ಉದ್ಘಾಟನೆಗೊಂಡು 5 ದಿನಗಳಾಗಿರಲಿಲ್ಲಿ ಕೇಬಲ್ ಸೇತುವೆ ಕುಸಿದುಬಿದ್ದು ಹಲವು ಜನರ ಸಾವು-ನೋವಿಗೆ ಕಾರಣವಾಗಿತ್ತು.