ಪ್ರಭಾತ್ ಪಟ್ನಾಯಕ್
ಐದು ದೇಶಗಳೊಂದಿಗೆ ಆರಂಭವಾದ ‘ಬ್ರಿಕ್ಸ್’ ಈಗ 11 ದೇಶಗಳ ಗುಂಪಾಗಿ ವಿಸ್ತರಣೆಗೊಂಡಿದೆ. ಇನ್ನೂ ಸುಮಾರು 40 ದೇಶಗಳು ಇದನ್ನು ಸೇರಬಯಸುತ್ತಿವೆ ಸೇರಬಯಸುತ್ತಿವೆ ಎನ್ನಲಾಗಿದೆ. ಆದರೂ ಇದು ಸಾಮ್ರಾಜ್ಯಶಾಹಿ-ವಿರೋಧಿಯಾಗಿದ್ದರೂ, ಬಂಡವಾಳಶಾಹಿ-ವಿರೋಧಿ ಅಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ಭಾರತದ ಮೋದಿ, ಸೌದಿ ಅರೇಬಿಯಾದ ಎಂಬಿಎಸ್ ಮತ್ತು ಈಜಿಪ್ಟಿನ ಸಿಸಿಯವರಂತ ನಾಯಕರಿರುವ ಗುಂಪನ್ನು ಸಾಮ್ರಾಜ್ಯಶಾಹಿ-ವಿರೋಧಿ ಎಂದು ಕೂಡ ಬಹುಶಃ ಕರೆಯಲಾಗುವುದಿಲ್ಲ. ಆದಾಗ್ಯೂ, ಇದು ವಿಶ್ವ ಅರ್ಥವ್ಯವಸ್ಥೆಯ ಮೇಲೆ ಸಾಮ್ರಾಜ್ಯಶಾಹಿ ಸಂಸ್ಥೆಗಳ ಏಕಸ್ವಾಮ್ಯದ ಹಿಡಿತವನ್ನು ಸ್ವಲ್ಪ ಮಟ್ಟಿಗಾದರೂ ದುರ್ಬಲಗೊಳಿಸುವ, ಖಂಡಿತವಾಗಿಯೂ ಸಕಾರಾತ್ಮಕವಾದ ಬೆಳವಣಿಗೆ. ತಾನಾಗಿಯೇ ಇದು ಸಾಮ್ರಾಜ್ಯಶಾಹಿಯ ವಿರುದ್ಧದ ಹೊಡೆತವೇನಲ್ಲ, ಆದರೆ ಜಗತ್ತಿನ ದುಡಿಯುವ ಜನತೆಗೆ ಇದು ಸಾಮ್ರಾಜ್ಯಶಾಹಿಯ ವಿರುದ್ಧ ಹೊಡೆತವನ್ನುಕೊಡಲು ಹೆಚ್ಚು ಅನುಕೂಲಕರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ.
ಬ್ರಿಕ್ಸ್ ದೇಶಗಳ ಜೋಹಾನ್ಸ್ ಬರ್ಗ್ ಶೃಂಗಸಭೆಯಲ್ಲಿ, ಈ ಗುಂಪನ್ನು ಅದರ ಮೂಲ ಐದು, ಅಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಮೀರಿ ಇನ್ನೂ ಆರು ದೇಶಗಳನ್ನು ಸೇರಿಸಿಕೊಂಡು ವಿಸ್ತರಿಸಲು ನಿರ್ಧರಿಸಲಾಯಿತು. ಅವುಗಳೆಂದರೆ: ಅರ್ಜೆಂಟೀನಾ, ಈಜಿಪ್ಟ್, ಇರಾನ್, ಇಥಿಯೋಪಿಯಾ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ಬ್ರಿಕ್ಸ್ ಗುಂಪಿಗೆ ಸೇರಲು ಉತ್ಸುಕರಾಗಿದ್ದ ಇಪ್ಪತ್ತೆರಡು ದೇಶಗಳ ಪಟ್ಟಿಯಿಂದ ಈ ಆರು ದೇಶಗಳನ್ನು ಆಯ್ಕೆ ಮಾಡಲಾಗಿದೆ. ಅದಕ್ಕಿಂತ ಹೆಚ್ಚಾಗಿ, ಪ್ರಸ್ತುತ ಬ್ರಿಕ್ಸ್ ನ ಅಧ್ಯಕ್ಷ ದೇಶವಾಗಿರುವ ದಕ್ಷಿಣ ಆಫ್ರಿಕಾದ ಸರ್ಕಾರಿ ಮೂಲಗಳು 40 ದೇಶಗಳು ಗುಂಪಿಗೆ ಸೇರಲು ಆಸಕ್ತಿ ಹೊಂದಿವೆ ಎಂದು ಬಹಿರಂಗಪಡಿಸಿವೆ. ಪ್ರಶ್ನೆಯು ಸ್ವಾಭಾವಿಕವಾಗಿ ಉದ್ಭವಿಸುತ್ತದೆ: ಬ್ರಿಕ್ಸ್ ಇದ್ದಕ್ಕಿದ್ದಂತೆ ಏಕೆ ಇಷ್ಟು ಜನಪ್ರಿಯವಾಗಿದೆ?
ಅನೇಕರು ಬ್ರಿಕ್ಸ್ ಅನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳ “ಎತ್ತರದ ಮೇಜಿ” ನಿಂದ ಹೊರಗಿಡಲ್ಪಟ್ಟ ಕೆಲವು ದೊಡ್ಡ ದೇಶಗಳು, ವಿಶ್ವ ವ್ಯವಹಾರಗಳಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಲು ತಾವು ಅರ್ಹರು ಎಂದು ಪ್ರತಿಪಾದಿಸುವ ಪ್ರಯತ್ನವಾಗಿ ನೋಡಿದ್ದಾರೆ, ಆದರೆ ಬ್ರಿಕ್ಸ್ ಒಂದು ಬಹಳ ಭಿನ್ನವಾದ ಸಂಸ್ಥೆಯಾಗಿದೆ: ರಷ್ಯಾ ಮತ್ತು ಚೀನಾ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರಾಗಿದ್ದಾರೆ, ವೀಟೋ ಅಧಿಕಾರವನ್ನು ಹೊಂದಿದ್ದಾರೆ, ಅವುಗಳಲ್ಲಿ ಒಂದು ಪ್ರಸ್ತುತ “ಎತ್ತರದ ಮೇಜಿ”ನ ದೇಶಗಳೊಂದಿಗೆ ಯುದ್ಧದಲ್ಲಿ ತೊಡಗಿದೆ ಮತ್ತು ಇನ್ನೊಂದನ್ನು “ಮುಖ್ಯ ಶತ್ರು” ಎಂದು ನಿಂದಿಸಲಾಗುತ್ತಿದೆ; ಆದ್ದರಿಂದ ಅವನ್ನು “ಹೊರಗಿಡಲಾಗಿದೆ” ಎಂಬ ಪ್ರಶ್ನೆಯು ಉದ್ಭವಿಸುವುದೇ ಇಲ್ಲ. ಮತ್ತು ಉಳಿದ ಸದಸ್ಯರಿಗೆ ಸಂಬಂಧಿಸಿದಂತೆ, ಬ್ರಿಕ್ಸ್, ಒಂದು ಸಂಸ್ಥೆಯಾಗಿ, ಅದರ ರಚನೆಯ ನಂತರ ಯಾವುದೇ ವಿಶ್ವ ಪರಿಸ್ಥಿತಿಯಲ್ಲಿ ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಲ್ಲ; ಆದ್ದರಿಂದ, ಈ ಉಳಿದ ಸದಸ್ಯರು ಕೂಡ ಪ್ರಪಂಚದ ವ್ಯವಹಾರಗಳಲ್ಲಿ ದೊಡ್ಡ ಪಾತ್ರದ ಆಕಾಂಕ್ಷಿಗಳು ಎಂದೇನೂ ಕಾಣಿಸುತ್ತಿಲ್ಲ (ಹಾಗಿದ್ದಿದ್ದರೆ, ಅವರು ಹೆಚ್ಚು ಸಕ್ರಿಯವಾಗಿರುತ್ತಿದ್ದರು). ಅಂತೆಯೇ, ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದೇ ಅನೇಕ ದೇಶಗಳು ಬ್ರಿಕ್ಸ್ ಗೆ ಸೇರಲು ಬಯಸುತ್ತಿರುವ ಹಿಂದಿನ ಉದ್ದೇಶವಾಗಿರುವುದಿಲ್ಲ. ಬ್ರಿಕ್ಸ್
ಅಲ್ಲದೆ ಇಂತಹ ವಿವರಣೆಯಲ್ಲಿನ ಸಮಸ್ಯೆಯೆಂದರೆ, ಪ್ರಸ್ತುತ ಪ್ರಪಂಚದ ಪರಿಸ್ಥಿತಿಯ ಬುಡದಲ್ಲಿರುವ ರಾಜಕೀಯ ಆರ್ಥಿಕತೆಯ ಪರಿಜ್ಞಾನವೇ ಇಲ್ಲದಿರುವುದು. ಈಗಿರುವುದು ವಿಶ್ವ ಬಂಡವಾಳಶಾಹಿಯು ಆರ್ಥಿಕ ಬಿಕ್ಕಟ್ಟಿಗೊಳಗಾಗಿರುವುದು ಕಾಣಿಸುತ್ತಿರುವ, ಅದನ್ನು ಸಂಪ್ರದಾಯಶರಣ ಮತ್ತು ಆಳುವ ವ್ಯವಸ್ಥೆಯ ಅರ್ಥಶಾಸ್ತ್ರಜ್ಞರು ಸಹ “ಎಂದಿನ ಸ್ಥಗಿತತೆ” ಎಂದು ಕರೆಯುತ್ತಿರುವ ಪರಿಸ್ಥಿತಿ.
ಭರವಸೆ ಮೂಡಿಸುವ ನಾವೀನ್ಯತೆಯಾಗಿ..
ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಹಳೆಯ ಅಂತರರಾಷ್ಟ್ರೀಯ ಸಂಸ್ಥೆಗಳು ಏಕ್‌ದಂ ಅಸಮರ್ಪಕವಾಗಿ ಕಂಡುಬರುತ್ತಿವೆ ಮತ್ತು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಪರಿಸ್ಥಿತಿಯನ್ನು ನಿಭಾಯಿಸಲು ಅವುಗಳನ್ನು ಮಾರ್ಪಡಿಸಲು, ಅಥವಾ ಅವುಗಳನ್ನು ಬದಲಾಯಿಸಲು ಅಥವಾ ಹೊಸ ಸಾಂಸ್ಥಿಕ ಆವಿಷ್ಕಾರಗಳನ್ನು ಮಾಡಲು ಬಹಳಷ್ಟು ಅಸಮರ್ಥವಾಗಿರುವಂತೆ ಕಾಣಿಸುತ್ತಿದೆ.ಇಂತಹ ಸನ್ನಿವೇಶದಲ್ಲಿ ಬ್ರಿಕ್ಸ್ ಭರವಸೆ ಮೂಡಿಸುವ ನಾವೀನ್ಯತೆಯಾಗಿ ಕಾಣಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬ್ರಿಕ್ಸ್ ನ ಜನಪ್ರಿಯತೆಯು ಬಿಕ್ಕಟ್ಟಿನ ಅಭಿವ್ಯಕ್ತಿಯಾಗಿದೆ, ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಇದುವರೆಗೆ ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿದಿಲ್ಲ ಎಂಬುದರ ಅಭಿವ್ಯಕ್ತಿಯಾಗಿದೆ. ಹಾಗಂದ ಮಾತ್ರಕ್ಕೆ ಬ್ರಿಕ್ಸ್ ಅನ್ನು “ಸಾಮ್ರಾಜ್ಯಶಾಹಿ-ವಿರೋಧಿ” ಗುಂಪು ಎನ್ನಲಾಗದು; ನಿಜ, ಅದರೊಳಗಿನ ಕೆಲವು ದೇಶಗಳು ಸಾಮ್ರಾಜ್ಯಶಾಹಿ-ವಿರೋಧಿಯಾಗಿವೆ. ಇದರಲ್ಲಿ ಸಂದೇಹವಿಲ್ಲ ಆದರೆ ಈಜಿಪ್ಟ್, ಇಥಿಯೋಪಿಯಾ, ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೇಶಗಳು ಸಾಮ್ರಾಜ್ಯಶಾಹಿಯ ವಿರುದ್ಧ ಬಂಡಾಯಕ್ಕಾಗಿ ಬ್ರಿಕ್ಸ್ ಸೇರುತ್ತವೆ ಎಂದು ಯಾವುದೇ ರೀತಿಯಲ್ಲೂ ಊಹಿಸಲು ಸಾಧ್ಯವೇ ಇಲ್ಲ. ಸಾಮ್ರಾಜ್ಯಶಾಹಿ-ವಿರೋಧಿಗಳು ಆಗಿರದಿರುವಾಗಲೇ, ಅವರು ಒಂದು ಭರವಸೆಯ ಪರ್ಯಾಯ ವ್ಯವಸ್ಥೆಯ ಹುಡುಕಾಟದಲ್ಲಿ, ಅದು ಮುಂದಿನ ದಿನಗಳಲ್ಲಿ ತಮಗೆ ನಿರ್ಣಾಯಕ ಬೆಂಬಲವನ್ನು ನೀಡುತ್ತದೆ ಎಂದು ಭಾವಿಸುತ್ತಿದ್ದಾರೆ.
ಇದನ್ನೂ ಓದಿ:‘ರೋಜ್‌ಗಾರ್ ಮೇಲಾ’ಗಳೂ, ಎಲ್‌ಪಿಜಿ ದರ ಕಡಿತವೂ
ಈಗ ಅಸ್ತಿತ್ವದಲ್ಲಿರುವ ವಿಸ್ತೃತ ಬ್ರಿಕ್ಸ್ ನಲ್ಲಿ ಮೂರು ವಿಭಿನ್ನ ರೀತಿಯ ( ಆದರೆ ಸಂಪೂರ್ಣವಾಗಿ ವಿಭಿನ್ನ ಎನ್ನಲಾಗದ) ದೇಶಗಳಿವೆ. ಸಾಮ್ರಾಜ್ಯಶಾಹಿಯಿಂದ ಏಕಪಕ್ಷೀಯ “ನಿರ್ಬಂಧಗಳು” ಅಥವಾ ದಂಡನಾತ್ಮಕ ರಕ್ಷಣಾ ಕ್ರಮಗಳಿಗೆ ಒಳಪಟ್ಟಿರುವ ದೇಶಗಳು; ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದಿಸುವ ದೇಶಗಳು; ಮತ್ತು ಪ್ರಸ್ತುತ ವಿಶ್ವ ಬಿಕ್ಕಟ್ಟಿನ ಮಧ್ಯೆ ಈಗಾಗಲೇ ಸಂಕಷ್ಟಗಳನ್ನು ಅನುಭವಿಸುತ್ತಿರುವ ಅಥವಾ ಮುಂಬರುವ ದಿನಗಳಲ್ಲಿ ಅಂತಹ ಭಯದಸಾಧ್ಯತೆ ಇರುವ ದೇಶಗಳು. ಚೀನಾ, ರಷ್ಯಾ ಮತ್ತು ಇರಾನ್ ಮೊದಲ ವಿಧಕ್ಕೆ ಉದಾಹರಣೆಯಾಗಿವೆ; ರಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಎರಡನೆಯದಕ್ಕೆ ಉದಾಹರಣೆಯಾಗಿವೆ; ಮತ್ತು ಈಜಿಪ್ಟ್, ಇಥಿಯೋಪಿಯಾ, ಅರ್ಜೆಂಟೀನಾ ಮೂರನೇ ವಿಧದವು (ಬ್ರೆಜಿಲ್ ಮತ್ತು ಭಾರತ ಅನಾವರಣ ಗೊಳ್ಳುತ್ತಿರುವ ಬಿಕ್ಕಟ್ಟಿನ ಬಗ್ಗೆ ಚಿಂತಿತವಾಗಿದ್ದು, ಪರ್ಯಾಯ ವ್ಯವಸ್ಥೆಗಳ ಬಗ್ಗೆ ಉತ್ಸುಕವಾಗಿವೆ).
ಯಾವುದೇ ಭದ್ರತಾ ಮಂಡಳಿಯ ಅನುಮತಿಯಿಲ್ಲದೆಯೂ ಏಕಪಕ್ಷೀಯ ಸಾಮ್ರಾಜ್ಯಶಾಹಿ ನಿರ್ಬಂಧಗಳಿಗೆ ಒಳಪಟ್ಟಿರುವ ದೇಶಗಳಿಗೆ ಬ್ರಿಕ್ಸ್ ಈ ನಿರ್ಬಂಧಗಳನ್ನು ಬದಿಗೊತ್ತಬಲ್ಲ ಸಂಭಾವ್ಯ ವ್ಯವಸ್ಥೆಯನ್ನು ಒದಗಿಸುತ್ತದೆ. ಆ ಅರ್ಥದಲ್ಲಿ ಬ್ರಿಕ್ಸ್ ನಲ್ಲಿ ಇರಾನಿನ ಸೇರ್ಪಡೆಯು ಬಹುಶಃ ಜೋಹಾನ್ಸ್ ಬರ್ಗ್ ಶೃಂಗಸಭೆಯಲ್ಲಿ ಅಳವಡಿಸಿಕೊಂಡ ಯಾವುದೇ ಕ್ರಮಕ್ಕಿಂತ ಹೆಚ್ಚು ಮಹತ್ವದ್ದಾಗಿದೆ. ಇರಾನ್ ತೀವ್ರ ನಿರ್ಬಂಧಗಳಿಗೆ ಒಳಪಟ್ಟಿದೆ ಮಾತ್ರವಲ್ಲದೆ, ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಾವೇ ರೂಪಿಸಿದ ಆಟದ ಬಂಡವಾಳಶಾಹಿ ನಿಯಮಗಳಿಗೆ ಸ್ಪಷ್ಟವಾಗಿಯೂ ವಿರುದ್ಧವಾಗಿ, ಮೆಟ್ರೋಪಾಲಿಟನ್ ಬ್ಯಾಂಕ್‌ಗಳಲ್ಲಿ ಇಡಲಾಗಿರುವ ತನ್ನದೇ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸದಂತೆ ಹೊರಗಿಡಲ್ಪಟ್ಟ ಮೊದಲ ದೇಶವಾಗಿದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಶಿಯಾ ಇತ್ತೀಚಿನ ಬಲಿಪಶುವಾಗಿದ್ದು, ಅಂತರರಾಷ್ಟ್ರೀಯ “ದರೋಡಕೋರತನ”ದ ಇಂತಹ ಕೃತ್ಯಗಳು ಈಗ ಸಾಕಷ್ಟು ಸಾಮಾನ್ಯವಾಗಿದೆ: ರಷ್ಯಾಕ್ಕೆ ಕೂಡ ಬ್ಯಾಂಕುಗಳಲಿರುವ ತನ್ನ ಸ್ವಂತ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸಲು ಬಿಡುತ್ತಿಲ್ಲ. ಬ್ರಿಕ್ಸ್ ಗೆ ಸೇರುವುದರಿಂದ ಸಾಮ್ರಾಜ್ಯಶಾಹಿಯು ಬಲೆಗೆ ಬೀಳಿಸಲು ಬಯಸುವ ಈ “ನಿರ್ಬಂಧಿತ” ದೇಶಗಳು ಅಂತಹ ದುಷ್ಕೃತ್ಯದಿಂದ ಹೊರಬರಲು ಅನುವಾಗುತ್ತದೆ.
ಯುಎಸ್ ಪ್ರಾಬಲ್ಯದಿಂದ ತಪ್ಪಿಸಿಕೊಳ್ಳಲು
ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದಕ ದೇಶಗಳು ವಿಶ್ವದ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ತಮ್ಮ ಉತ್ಪನ್ನಗಳ ಬೆಲೆಗಳು ಕುಸಿಯುತ್ತಿರುವುದನ್ನು ಕಾಣುತ್ತಿವೆ ಮತ್ತು ಕಡಿಮೆಯಾದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಉತ್ಪಾದನೆಯನ್ನು ಮೊಟಕುಗೊಳಿಸುವ ಮೂಲಕ ಈ ಬೆಲೆಗಳನ್ನು ಎತ್ತಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನ ಸ್ಪಷ್ಟ ಪಡಿಸಿರುವ ಆಶಯಗಳಿಗೆ ವಿರುದ್ಧವಾಗಿದೆ.
ವಾಸ್ತವವಾಗಿ, ಒಂದು ಸಂದರ್ಭದಲ್ಲಿ, ಅದು ಮುಂಬರುವ ಒಪೆಕ್+ ಸಭೆಯಲ್ಲಿ ಉತ್ಪಾದನೆ ಕಡಿತವನ್ನು ವಿರೋಧಿಸಲು ಸೌದಿ ಅರೇಬಿಯಾಕ್ಕೆ ವಿನಂತಿಸಲು ಸ್ವತಃ ಬಿಡೆನ್ ಸೇರಿದಂತೆ ಹಲವಾರು ದೂತರನ್ನು ಕಳುಹಿಸಿದೆ; ಆದರೆ ಈ ಯುಎಸ್ ಒತ್ತಡವು ಕೆಲಸ ಮಾಡಲಿಲ್ಲ. ಅಲ್ಲಿಂದೀಚೆಗೆ ಒಪೆಕ್+ ಉತ್ಪಾದನಾ ಕಡಿತವನ್ನು ಘೋಷಿಸಿದ ಸಂದರ್ಭಗಳು ಬಹಳಷ್ಟು. ತೈಲ ಉತ್ಪಾದಕರು ಭವಿಷ್ಯದಲ್ಲಿ ಯುಎಸ್ ಇಚ್ಛೆಗೆ ವಿರುದ್ಧವಾಗಿ ತೈಲ ಉತ್ಪಾದನೆಯನ್ನು ನಿರ್ಧರಿಸಲು ಸಾಕಷ್ಟು ಸ್ವಾಯತ್ತತೆಯನ್ನು ಹೊಂದಬೇಕಾದರೆ, ಅವು ತಮ್ಮ ಸಂಬಂಧಗಳನ್ನು ವೈವೀಧ್ಯೀಕರಿಸಬೇಕಾಗುತ್ತದೆ, ಯುಎಸ್‌ನೊಡನೆ ವೈಷಮ್ಯವಿಲ್ಲದೆಯೇ, ಅದರ ಮೇಲೆಯೇ ವಿಶೇಷವಾದ ಅವಲಂಬನೆಯಿಂದ ದೂರ ಸರಿಯುವುದು ಅಗತ್ಯವಾಗುತ್ತದೆ. ಬ್ರಿಕ್ಸ್ ಗೆ ಸೇರುವುದು ಅವರಿಗೆ, ಅಂತಹ ವೈವಿಧ್ಯೀಕರಣದ ಸಾಧನವಾಗಿದೆ.
ಮೂರನೇ ಗುಂಪಿನ ದೇಶಗಳಿಗೆ, ಅಂದರೆ ಈಜಿಪ್ಟ್, ಅರ್ಜೆಂಟೀನಾ ಮತ್ತು ಇಥಿಯೋಪಿಯಾ ತೀವ್ರವಾಗಿ ಅಸ್ವಸ್ಥಗೊಂಡಿರುವ ಆರ್ಥಿಕತೆಗಳನ್ನು ಹೊಂದಿರುವವುಗಳು ಮತ್ತು ಆರ್ಥಿಕತೆಗಳು ಅನಾರೋಗ್ಯದಿಂದ ಕೂಡಿದ್ದರೂ, ಕಡಿಮೆ ತೀವ್ರವಾಗಿ ಬಾಧಿತವಾಗಿರುವ ಬ್ರೆಜಿಲ್, ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಬ್ರಿಕ್ಸ್ ನ ಆಕರ್ಷಣೆಯು ಬೇರೆಯೇ ಆಗಿದೆ. ಅಂದರೆ ಡಾಲರ್ ಅನ್ನು ಬದಿಗಿಟ್ಟು ಸ್ಥಳೀಯ-ಕರೆನ್ಸಿಯಲ್ಲಿ ವ್ಯಾಪಾರ ನಡೆಸುವ ಸಾಧ್ಯತೆ. ಬ್ರೆಜಿಲ್ ಮತ್ತು ಚೀನಾ ಇತ್ತೀಚೆಗೆ ಅಂತಹ ಸ್ಥಳೀಯ-ಕರೆನ್ಸಿ ವ್ಯಾಪಾರ ವ್ಯವಸ್ಥೆಯನ್ನು ಮಾಡಿಕೊಂಡಿವೆ; ಭಾರತ ಮತ್ತು ಯುಎಇ ಕೂಡ ಮಾಡಿಕೊಂಡಿವೆ ಮತ್ತು ಮುಂಬರುವ ದಿನಗಳಲ್ಲಿ ಬ್ರಿಕ್ಸ್ ಸದಸ್ಯರಲ್ಲಿ ಇಂತಹ ಇನ್ನಷ್ಟು ವ್ಯವಸ್ಥೆಗಳು ಏರ್ಪಡುವ ಸಾಧ್ಯತೆಗಳಿವೆ, ಇದು ಬ್ರಿಕ್ಸ್ ಗೆ ಸೇರಲು ಪ್ರಮುಖ ಆಕರ್ಷಣೆಯಾಗಿದೆ.
ಅಂತಹ ವ್ಯವಸ್ಥೆಗಳನ್ನು ಏರ್ಪಡಿಸಿಕೊಳ್ಳುವ ದೇಶಗಳ ನಡುವಿನ ಸಾಪೇಕ್ಷ ಕರೆನ್ಸಿ ಮೌಲ್ಯಗಳು ಸ್ಥಿರವಾಗಿರುತ್ತವೆ ಮತ್ತ್ಷು ಅಲ್ಲಿ ಲೆಕ್ಕಾಚಾರದ ಘಟಕವಾಗಿಯಾಗಲೀ ಅಥವ ಅವುಗಳ ನಡುವಿನ ವ್ಯಾಪಾರದಲ್ಲಿ ಚಲಾವಣೆಯ ಮಾಧ್ಯಮವಾಗಿ ಡಾಲರ್‌ನ ಅಗತ್ಯವಿರುವುದಿಲ್ಲ. ಅಂತಹ ವ್ಯವಸ್ಥೆಗಳು, ಈ ದೇಶಗಳ ನಡುವೆ ಚಲಾವಣೆ ಪಡೆದಿರುವ ಮಾಧ್ಯಮದ ಲಭ್ಯತೆಯನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಮೂಲಕ ಮತು ಇಂತಹ ವಿಸ್ತರಣೆಯನ್ನು ಈ ದೇಶಗಳು ತಮ್ಮದೇ ನಿರ್ಧಾರಗಳ ಮೂಲಕ ಮಾಡುವುದು (ಇದು ಅವು ಬಯಸಿದಂತೆ ಅವರ ಹಣದ ಪೂರೈಕೆಯನ್ನು ಹೆಚ್ಚಿಸಬಹುದು), ವ್ಯಾಪಾರವನ್ನು ಸುಗಮಗೊಳಿಸುತ್ತದೆ, ಅದು ಇನ್ನು ಮುಂದೆ ಯಾವುದೇ ಡಾಲರ್ ಕೊರತೆಯಿಂದ ನಿರ್ಬಂಧಿತವಾಗಿರುವುದಿಲ್ಲ.
ಆದಾಗ್ಯೂ ಇದು ಅರ್ಧದಷ್ಟು ಸಮಸ್ಯೆಗೆ ಮಾತ್ರ ಉತ್ತರಿಸುತ್ತದೆ; ಇದರ ಜೊತೆಗೇ, ಅಂತಹ ದೇಶಗಳ ನಡುವಿನ ವ್ಯಾಪಾರ ಬಾಕಿಯನ್ನು ಅದನ್ನು ಹೆಚ್ಚುವರಿಯಾಗಿ ಉಳ್ಳ ದೇಶವು ಕೊರತೆಯಾಗಿರುವ ದೇಶದಿಂದ ಸರಕು ಮತ್ತು ಸೇವೆಗಳನ್ನು ತಕ್ಷಣವೇ ಅಲ್ಲದಿದ್ದರೂ ಒಂದುಷ್ಟು ಸಮಯಮಿತಿಗೊಳಗಾದರೂ ಖರೀದಿಸುವ ಮೂಲಕ ಇತ್ಯರ್ಥ ಪಡಿಸಬೇಕಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸ್ಥಳೀಯ-ಕರೆನ್ಸಿ ವ್ಯಾಪಾರವು ವಿಶ್ವ ಆರ್ಥಿಕತೆಯಲ್ಲಿ ದ್ರವ್ಯತೆಯ ಸಂಗ್ರಹವನ್ನು ಹೆಚ್ಚಿಸುತ್ತದೆ ಆದರೆ ಅಂತಹ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳುವ ದೇಶಗಳ ನಡುವಿನ ವ್ಯಾಪಾರದಿಂದ ಉಂಟಾಗುವ ಬಾಹ್ಯ ಸಾಲದ ಸಮಸ್ಯೆಯನ್ನು ನಿವಾರಿಸುವುದಿಲ್ಲ.
ನಿಜವಾದ ಪರ್ಯಾಯವಾಗಬೇಕಾದರೆ..
ಬ್ರಿಕ್ಸ್ ಅಂತಹ ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಗಳನ್ನು ಪ್ರೋತ್ಸಾಹಿಸಿದಾಗ, ಕೊರತೆಯಿರುವ ದೇಶದ ಪಾವತಿ ಬಾಕಿಗಳನ್ನು ಸಾಲವನ್ನು ಹೆಚ್ಚಿಸುವ ಮೂಲಕ ಇತ್ಯರ್ಥ ಮಾಡುವ ಬದಲು, ಆ ದೇಶದಿಂದ ಹೆಚ್ಚಿನ ಸರಕುಗಳನ್ನು ಖರೀದಿಸುವ ಮೂಲಕ ಇತ್ಯರ್ಥಗೊಳಿಸುವಂತಾದರೆ, ಅದು ವಿಶ್ವ ಆರ್ಥಿಕತೆಯ ಕಾರ್ಯ ನಿರ್ವಹಣೆಯನ್ನು ಉತ್ತಮಪಡಿಸುವಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಬಹುದು. ಆಗ ಅದು ಸಾಮ್ರಾಜ್ಯಶಾಹಿ ಪ್ರಾಬಲ್ಯದ ವಿಶ್ವ ಆರ್ಥಿಕ ವ್ಯವಸ್ಥೆಗೆ ನಿಜವಾದ ಪರ್ಯಾಯವಾಗುತ್ತದೆ.
ಇದನ್ನೂ ಓದಿ:ಆರ್ಥಿಕ ಹಿಂಜರಿತ ಮತ್ತು ಅಭಿವೃದ್ಧಿ : ನಿಜ ಭ್ರಮೆಗಳಾಚೆ
ಬ್ರಿಕ್ಸ್ ಬ್ಯಾಂಕ್‌ನ ಹೊಸ ನಿರ್ದೇಶಕಿ, ಬ್ರೆಜಿಲ್‌ನ ಮಾಜಿ ಅಧ್ಯಕ್ಷರಾದ ದಿಲ್ಮಾ ರೌಸೆಫ್ ಅವರು, ಬ್ಯಾಂಕ್‌ಗೆ ಸಾಲದ ಇತ್ಯರ್ಥಕ್ಕಾಗಿ ಅಥವಾ ಸಾಲದ ಬಡ್ಡಿ ಪಾವತಿಗಾಗಿ ಒಟ್ಟಾರೆಯಾಗಿ ಮೂರನೇ ಜಗತ್ತಿಗೆ ಅಥವಾ ಸದಸ್ಯ ರಾಷ್ಟ್ರಗಳಿಗೆ ಸಾಲವನ್ನು ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದ್ದರಿಂದ ಇದು ಈ ಉದ್ದೇಶಕ್ಕಾಗಿ ಮೂರನೇ ಜಗತ್ತಿನ ದೇಶಗಳು ಐಎಂಎಫ್‌ಗೆ ಹೋಗುವ ಮತ್ತು ಅದು ವಿಧಿಸಿದ “ಬಿಗು” ಕ್ರಮದಿಂದ ಬಳಲುವುದನ್ನು ಕಡಿಮೆ ಮಾಡುವುದಿಲ್ಲ. ಆದರೆ ಅವರು ಸ್ಥಳೀಯ-ಕರೆನ್ಸಿ ವ್ಯಾಪಾರವನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ ಮತ್ತು ತೃತೀಯ ಜಗತ್ತಿನ ದೇಶಗಳಿಗೆ ಮೂಲಸೌಕರ್ಯ ಸಾಲವನ್ನು ಒದಗಿಸಲು ಉತ್ಸುಕರಾಗಿದ್ದಾರೆ, ಇದು ಸಾಮ್ರಾಜ್ಯಶಾಹಿ ಪ್ರಾಬಲ್ಯದ ಸಂಸ್ಥೆಗಳ ಹಿಡಿತವನ್ನು ಸಡಿಲಗೊಳಿಸುವಲ್ಲಿ ಸ್ವಲ್ಪಮಟ್ಟಿಗೆ ಸಹಾಯಕವಾಗುತ್ತದೆ.ಬ್ರಿಕ್ಸಿನಿಂದಾಗಿ ನಿಖರವಾಗಿ ಸಾಮ್ರಾಜ್ಯಶಾಹಿಗೆ ಏನಾಗುತ್ತದೆ ಎಂಬುದರ ಕುರಿತು ಅದರ ಸದಸ್ಯ ರಾಷ್ಟ್ರಗಳಲ್ಲಿನ ಎಡಪಂಥೀಯ ವಲಯಗಳಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಇದು ಸಾಮ್ರಾಜ್ಯಶಾಹಿ-ವಿರೋಧಿಯಾಗಿದ್ದರೂ, ಬಂಡವಾಳಶಾಹಿ-ವಿರೋಧಿ ಅಲ್ಲ ಎಂದು ಕೆಲವರು ವಾದಿಸುತ್ತಾರೆ; ಆದರೆ ಅದನ್ನು ಸಾಮ್ರಾಜ್ಯಶಾಹಿ-ವಿರೋಧಿ ಎಂದು ಕರೆಯುವುದು ಸಹ ಅತಿಶಯೋಕ್ತಿಯಾಗುತ್ತದೆ. ಭಾರತದ ಮೋದಿ, ಸೌದಿ ಅರೇಬಿಯಾದ ಎಂಬಿಎಸ್ ಮತ್ತು ಈಜಿಪ್ಟಿನ ಸಿಸಿಯವರಂತ ನಾಯಕರಿರುವ ಗುಂಪನ್ನು ಸಾಮ್ರಾಜ್ಯಶಾಹಿ-ವಿರೋಧಿ ಎಂದು ಬಹುಶಃ ಕರೆಯಲಾಗುವುದಿಲ್ಲ. ಆದಾಗ್ಯೂ, ವಿಶ್ವ ಅರ್ಥವ್ಯವಸ್ಥೆಯ ಮೇಲೆ ಸಾಮ್ರಾಜ್ಯಶಾಹಿ ಸಂಸ್ಥೆಗಳ ಏಕಸ್ವಾಮ್ಯದ ಹಿಡಿತವನ್ನು ಸ್ವಲ್ಪ ಮಟ್ಟಿಗಾದರೂ ಇದು ದುರ್ಬಲಗೊಳಿಸುತ್ತದೆ; ಮತ್ತು ಇದು ಖಂಡಿತವಾಗಿಯೂ ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ತಾನಾಗಿಯೇ ಇದು ಸಾಮ್ರಾಜ್ಯಶಾಹಿಯ ವಿರುದ್ಧದ ಹೊಡೆತವೇನಲ್ಲ, ಆದರೆ ಜಗತ್ತಿನ ದುಡಿಯುವ ಜನತೆಗೆ ಇದು
ಸಾಮ್ರಾಜ್ಯಶಾಹಿಯ ವಿರುದ್ಧ ಹೊಡೆತವನ್ನು ಹಾಕಲು ಹೆಚ್ಚು ಅನುಕೂಲಕರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಬ್ರಿಕ್ಸ್
(ಅನು: ಕೆ.ವಿ.)