ಬೆಂಗಳೂರು : ಲಂಚ ಸ್ವೀರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಹಾಗೂ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಶಾಂತ್ ಮಾಡಾಳ್, ಸಿದ್ದೇಶ್, (ಸಂಬಂಧಿ), ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್ (ದುಡ್ಡು ಕೊಡಲು ಬಂದವನು) ಅವರನ್ನ ಬಂಧಿಸಿಸಲಾಗಿತ್ತು.ಶುಕ್ರವಾರ ಬೆಳಗ್ಗೆ ಈ ಎಲ್ಲಾ ಆರೋಪಿಗಳನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಶಾಂತ್ ಸೇರಿದಂತೆ ಐವರರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದರು.
ಗುರುವಾರ ಸಂಜೆ ಬೆಂಗಳೂರಿನ ಕ್ರಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ವ್ಯಕ್ತಿಯಿಂದ 40 ಲಕ್ಷ ರೂ ನಗದು ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಗುರುವಾರ ಸಾಯಂಕಾಲ ಅವರ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿ 40 ಲಕ್ಷ ರೂಪಾಯಿ ನಗದು ಸ್ವೀಕರಿಸುವ ವೇಳೆ ಮಾಡಾಳ್ ಪ್ರಶಾಂತ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ನಂತರ ನಡೆಸಿದ ತೀವ್ರ ಶೋಧ ಬೆಳಗಿನ ಜಾವದವರೆಗೂ ಮುಂದುವರಿದು ಅವರ ನಿವಾಸ ಮತ್ತು ಕಚೇರಿಯಿಂದ ಬರೋಬ್ಬರಿ 6 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳು ಹಣದ ಮೂಲ ಮತ್ತು ಯಾವ ಯಾವ ಟೆಂಡರ್ ಗಾಗಿ ಹಣ ಪಡೆಯಲಾಗಿತ್ತು ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಕಚೇರಿ ಶೋಧನೆ ವೇಳೆ 1.6 ಕೋಟಿ ರೂ. ಪತ್ತೆಯಾಗಿತ್ತು. ನಂತರ ಬೆಂಗಳೂರಿನ ಸಂಜಯ್ ನಗರ ಮನೆಯಲ್ಲಿ ಗುರುವಾರ ರಾತ್ರಿ ಇಡೀ ಶೋಧ ಕಾರ್ಯ ನಡೆಸಲಾಗಿತ್ತು. ಮನೆಯಲ್ಲಿ ಆರು ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಈ ಮೂಲಕ ಒಟ್ಟಾರೆ ಕಚೇರಿ ಮತ್ತು ಮನೆ ಸೇರಿ 7.6 ಕೋಟಿ ಹಣವನ್ನು ಲೋಕಾಯುಕ್ತ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಅವರ ಒಡೆತನದ ಮಾನ್ಷಿಯನ್ ಮೇಲೆ ದಾಳಿ ಮುಂದುವರೆದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗಿದೆ.
ಹಣದ ಬ್ಯಾಗ್ ಗಳು ಪತ್ತೆ :
2008ರಲ್ಲಿ ತಂದೆ ಆದಾಯ ಕೇವಲ 1.2 ಲಕ್ಷ ರೂಪಾಯಿ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿ ಕೆಎಎಸ್ನಲ್ಲಿ ತೇರ್ಗಡೆ ಆಗಿದ್ದ ಮಾಡಾಳ್ ಪ್ರಶಾಂತ್ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ. ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು, ಮೂವರು ಗಂಡು ಮಕ್ಕಳ ಪೈಕಿ ಪ್ರಶಾಂತ್ ಎರಡನೇ ಪುತ್ರ. ಈ ಹಿಂದೆ ನಡೆದಿರುವ ಟೆಂಡರನಲ್ಲೂ ಅವ್ಯವಹಾರ ಶಂಕೆ ವ್ಯಕ್ತವಾಗಿದೆ. ಕಚೇರಿಯಲ್ಲಿರುವ ಎಲ್ಲ ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೇಳಿ ಕೇಳಿ ಇದು ವಿಧಾನಸಭೆ ಚುನಾವಣೆ ಸಮಯ ಭ್ರಷ್ಟಾಚಾರ, 40% ಕಮಿಷನ್ ಆರೋಪಗಳು ಗುತ್ತಿಗೆದಾರರ ಸಂಘದಿಂದ, ವಿರೋಧ ಪಕ್ಷಗಳಿಂದ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಪದೇ ಪದೇ ಕೇಳಿಬರುತ್ತಿದೆ. ಇದೀಗ ಅದೇ ಪಕ್ಷದ ಶಾಸಕರ ಮನೆ ಮತ್ತು ಅವರ ಪುತ್ರನ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಬಿಜೆಪಿ ಸರ್ಕಾರಕ್ಕೆ ಭಾರೀ ಇರಿಸು ಮುರಿಸು ತಂದಂತಾಗಿದೆ.
ಏನಿದು ಆರೋಪ ?
ಟೆಂಡರ್ ಕೊಡಿಸುವ ವಿಚಾರದಲ್ಲಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 40 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ 2 ಸಾವಿರ ರೂಪಾಯಿ ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಕಚೇರಿಯಲ್ಲಿ ಈ ರೀತಿ ಕಂತೆಕಂತೆ ಹಣ ಸಿಕ್ಕಿದ್ದು ಇದೇ ಕಚೇರಿಯೋ ಇಲ್ಲ ಬ್ಯಾಂಕ್ ಕಚೇರಿಯೋ ಎಂದು ಜನಸಾಮಾನ್ಯರು ಹೌಹಾರುವಷ್ಟು ನಗದು ಸಿಕ್ಕಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ನಿಗಮದ ಅಧ್ಯಕ್ಷ ಮತ್ತು ಪುತ್ರನ ಮನೆ ಮೇಲೆ ದಾಳಿ ಬೆನ್ನಲ್ಲೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ನಗರದ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದಾಳಿ ಮಾಡಿದ್ದಾರೆ.ಆದರೆ, ಮಹೇಶ್ ಅವರ ಮನೆಯಲ್ಲಿ ಅಂತಹ ಯಾವುದೇ ದಾಖಲೆಗಳು, ಹಣ ಪತ್ತೆಯಾಗಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.