ಹಾಸನ: ಇಂದು ಭ್ರಷ್ಟಾಚಾರಕ್ಕಿಂತ ವ್ಯಾಪಕವಾಗಿ ಕೋಮು ವಿಚಾರಗಳು ವ್ಯಾಪಕಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ಮುಚ್ಚಿಹಾಕಲು ಕೋಮುವಾದ ಮುನ್ನಲೆಗೆ ತರಲಾಗುತ್ತಿದೆ. ಇವತ್ತು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಮುಚ್ಚಿಕೊಳ್ಳುವ ಸಲುವಾಗಿ ಕೋಮುವಾದ ಮುನ್ನಲೆಗೆ ತರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮುನ್ನಲೆಗೆ ತರಲಾಗುತ್ತಿದೆ. ಕೇಂದ್ರದಲ್ಲಿ 8 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಅವರ ಸಾಧನೆ ಏನಿದೆ ಎಂದ ಸಿದ್ಧರಾಮಯ್ಯ ಅವರು, ನಾವು ಹಿಂದೂ ಪರ ವಿರೋಧವೂ ಅಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ ಪರ ವಿರೋಧ ಅಲ್ಲ. ಎಲ್ಲರನ್ನು ಸಮಾನತೆಯಿಂದ ಕಾಣುವುದು ಕಾಂಗ್ರೆಸ್ ಪಕ್ಷದ ಧ್ಯೇಯ ಎಂದರು.
ಹುಬ್ಬಳ್ಳಿಯಲ್ಲಿ ಯಾರೇ ಗಲಭೆ ಮಾಡಿದರೂ ತಪ್ಪಿತಸ್ಥರು ತಪ್ಪಿತಸ್ಥರೇ. ನನಗೇ ಆ ಬಗ್ಗೆ ಪೂರ್ಣವಾಗಿ ಗೊತ್ತಿಲ್ಲ, ಆದರೆ ನಿರಾಪರಾಧಿಗಳನ್ನು ಬಂಧಿಸಬಾರದು. ತಪ್ಪು ಮಾಡದವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಸರ್ಕಾರದ್ದು, ಇಂದು ಹಿಜಬ್ ಅಥವಾ ಹಲಾಲ್, ಭಗವದ್ಗೀತೆ ಸಮಸ್ಯೆಗಳನ್ನಾಗಲಿ, ದೇವಸ್ಥಾನ ಬಳಿ ವ್ಯಾಪಾರ ಇವುಗಳನ್ನೆಲ್ಲಾ ಮಾಡಿದವರು ಯಾರು. ಈ ಎಲ್ಲಾ ಸಮಸ್ಯೆಗಳಲ್ಲಿ ನಾವು ಯಾರ ಪರ ಇಲ್ಲ. ಸಂವಿಧಾನದವನ್ನು ನಾವು ನಂಬುತ್ತೇವೆ. ಸಂವಿಧಾನ ಬಹುತ್ವ ದೇಶ ಅನ್ನುತ್ತದೆ. ಎಲ್ಲಾ ಧರ್ಮ ಭಾಷೆ ಒಟ್ಟಿಗೆ ಹೊಗಬೇಕೆನ್ನುತ್ತದೆ.
ಸರ್ಕಾರ ಯಾವುದೇ ಧರ್ಮದ ಸರ್ಕಾರ ಅಲ್ಲ. ನಾವು ಸಂವಿಧಾನ ಪರ ಇದ್ದೇವೆ. ಅದನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಆ ಕೆಲಸ ನಾವು ಮಾಡುತ್ತೇವೆ. ನಾವು ಹಿಂದೂ ಪರ-ವಿರೋಧವೂ ಅಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ ಪರ-ವಿರೋಧ ಅಲ್ಲ ಎಂದರು.