ಉಡುಪಿ: ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಕೆಲಸದಿಂದಲೇ ತೆಗೆದು ಹಾಕಲಾಗಿದೆ. ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಸಿಬ್ಬಂದಿ ಈಗ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.
ಬಿ.ಆರ್.ಶೆಟ್ಟಿ ಆಸ್ಪತ್ರೆ ಸಿಬ್ಬಂದಿಗಳು ತಮಗೆ ಸರಕಾರದಿಂದ ಬರುತ್ತಿರುವ ಸಂಬಳವನ್ನಾದರೂ ಸರಿಯಾಗಿ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಏಕಾಏಕಿಯಾಗಿ ವಜಾ ಮಾಡಲಾಗಿದೆ.
ಯಾವ ಸೂಚನೆಯನ್ನು ನೀಡದೇ ತಮ್ಮನ್ನು ವಜಾ ಮಾಡಿರುವ ಬಗ್ಗೆ ಕಾರಣ ತಿಳಿಸಲು ಪಟ್ಟು ಹಿಡಿದಿರುವ ಸಿಬ್ಬಂದಿಗಳು ಬಿ.ಆರ್.ಶೆಟ್ಟಿ ಆಸ್ಪತ್ರೆಯ ಮುಂದೆ ಸಿಬ್ಬಂದಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಉಚಿತ ಆಸ್ಪತ್ರೆಯಲ್ಲಿ ನೌಕರರಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡದೆ ತಡೆ ಹಿಡಿಯಲಾಗಿದೆ.
ಈ ಹಿಂದೆ ಸರ್ಕಾರದ ಹೆರಿಗೆ ಆಸ್ಪತ್ರೆಯನ್ನು ತಾನು ನಡೆಸುತ್ತೇನೆ ಎಂದು ಅಬುದಾಬಿಯ ಉದ್ಯಮಿ ಬಿ.ಆರ್. ಶೆಟ್ಟಿ ಮುಂದೆ ಬಂದಿದ್ದರು. ಹೀಗಾಗಿ 200 ಬೆಡ್ನ ಉಚಿತ ಹೆರಿಗೆಯ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ನಿರ್ವಹಣೆ ಮಾಡುವುದು ಮತ್ತು ಇದಕ್ಕೆ ಬದಲಾಗಿ 400 ಬೆಡ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಸರ್ಕಾರದ 4.7 ಎಕರೆ ಭೂಮಿಯನ್ನು ಬಿ.ಆರ್. ಶೆಟ್ಟಿ ಅವರಿಗೆ ಕೊಡುವುದು ಎಂದು ಎಂಓಯು ಆಗಿತ್ತು. ಆದರೆ ಶೆಟ್ಟರ ಸಾಮ್ರಾಜ್ಯ ಮುಳುಗಿದೆ. ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಈಗ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಎನ್‌ಎಂಸಿ ಹೆಲ್ತ್ ಎನ್ನುವ ಬೃಹತ್ ಖಾಸಗಿ ಆರೋಗ್ಯ ಸಂಸ್ಥೆಯನ್ನು ಯುಎಇಯಲ್ಲಿ ಕಟ್ಟಿದ ಬಿ. ಆರ್. ಶೆಟ್ಟಿ ತಮ್ಮ ತವರು ನೆಲದಲ್ಲಿಯೂ ತಂದೆ-ತಾಯಿ ಹೆಸರಿನಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿದರು. ಆದರೆ ಈಗ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಸೆಂಟ್ರಲ್ ಎಸಿ ಅಳವಡಿಸಿರುವ ಈ ಬಹುಮಹಡಿ ಕಟ್ಟಡವನ್ನು ಸರಕಾರವೇ ಆರೋಗ್ಯ ಇಲಾಖೆಯಿಂದ ನಿರ್ವಹಿಸಬೇಕಿದೆ ಆದರೆ ಇಷ್ಟು ದೊಡ್ಡ ಆಸ್ಪತ್ರೆಯನ್ನು ನಿರ್ವಹಿಸುವುದು ಹಾಗೂ ಆಸ್ಪತ್ರೆಯ 250 ಸಿಬ್ಬಂದಿಗಳಿಗೆ ಈ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿ ಎಂದು ಕೆಲವರ ಆರೋಪವಾಗಿದೆ.
ಕೋವಿಡ್ ಸಂದರ್ಭದಲ್ಲಿ ಅಡಚಣೆ ಉಂಟುಮಾಡುತ್ತಿದ್ದಾರೆ ಎಂದು ಕಾರಣ ನೀಡಿ ನೌಕರರನ್ನು ವಜಾಗೊಳಿಸಿರುವ ಬಗ್ಗೆ ಮಂಗಳವಾರ ಆಸ್ಪತ್ರೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಇಬ್ಬರು ಕರ್ತವ್ಯ ನಿರತ ವೈದ್ಯರು, ಇಬ್ಬರು ಸ್ವಾಗತಕಾರರು, ನಿರ್ವಹಣೆ ವಿಭಾಗದ 3 ಮಂದಿ, ಹೌಸ್ ಕೀಪಿಂಗ್ ವಿಭಾಗದ 2 ಮಂದಿ, ಭದ್ರತಾ ವಿಭಾಗದ ಇಬ್ಬರು ಸಿಬ್ಬಂದಿ ಸೇರಿ 16 ನೌಕರರನ್ನು ವಜಾಗೊಳಿಸಿದೆ. ಇದನ್ನು ಖಂಡಿಸಿ ಬುಧವಾರದಂದು ಆಹೋರಾತ್ರಿ ಪ್ರತಿಭಟನೆಗೆ ನೌಕರರು ಮುಂದಾದರು.
ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುವ ಐವರು ವೈದ್ಯರು ಸೇರಿದಂತೆ 180 ಮಂದಿಗೆ ಮೇ, ಜೂನ್, ಜುಲೈ ತಿಂಗಳ ಸಂಬಳ ಪಾವತಿಯಾಗಿಲ್ಲ. ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್‌ನಿಂದ 50 ಲಕ್ಷ ಬಿಡುಗಡೆ ಮಾಡಿ ಸಿಬ್ಬಂದಿಗೆ ವೇತನ ನೀಡುವಂತೆ ಸೂಚಿಸಲಾಗಿತ್ತು. ಆದರೆ ಶೇ 60ರಷ್ಟು ಮಾತ್ರ ವೇತನ ನೀಡಿ ಉಳಿದಿದ್ದನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಸರ್ಕಾರವನ್ನು ಆಗ್ರಹಿಸಿದ್ದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಜೊತೆ ಈ ಕುರಿತು ಮಾಹಿತಿ ಪಡೆದಿದ್ದರು. ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿತ್ತು. ಪತ್ರ ವ್ಯವಹಾರಗಳು ಅಂತಿಮಗೊಂಡ ಬಳಿಕ ಆಸ್ಪತ್ರೆಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಒಪ್ಪಿಗೆ ಕೊಡಲಾಗಿದೆ.
ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ ಸಿಬ್ಬಂದಿ ಜೊತೆಯಾಗಿದ್ದು ಆಸ್ಪತ್ರೆಯ ಮೇಲಧಿಕಾರಿಗಳ ಮೇಲೆ ಒತ್ತಡ ಹೇರಿ ವಜಾ ಮಾಡಿರುವ ಆದೇಶ ವಾಪಸ್ಸು ಪಡೆಯಬೇಕು ಹಾಗೂ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.