ಚಿತ್ರದುರ್ಗ: ವಿಶೇಷ ದಿನಗಳಂದು ಆಯೋಜಿಸುವ ಸಾಂಸ್ಕೃತಿಕ ಹಾಗೂ ವೇಷಭೂಷಣ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಸಾಮಾನ್ಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಈ ಬಾರಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಘಟನೆ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬಗ್ಗೆ ನಾವೆಲ್ಲಾ ಕೇಳಿದ್ದೇವೆ, ಓದಿದ್ದೇವೆ, ಭಗತ್ ಸಿಂಗ್ ಜೀವನ ಅನೇಕರಿಗೆ ಸ್ಪೂರ್ತಿಯಾಗಿದೆ. ಬ್ರಿಟಿಷರಿಗೆ ಶರಣಾಗದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಧೀರ ಭಗತ್‌ಸಿಂಗ್. ಭಗತ್ ಸಿಂಗ್ ಪಾತ್ರದ ಅಭ್ಯಾಸದಲ್ಲಿದ ಶಾಲಾ ಬಾಲಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಕನನ್ನು ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಎಂದು ಗುರುತಿಸಲಾಗಿದೆ.
ಎಸ್‌ಎಲ್‌ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್ ಎಂಬ ಶಾಲೆಯಲ್ಲಿಯೂ ಭಗತ್ ಸಿಂಗ್ ಪಾತ್ರದ ಕುರಿತು ಭಾರೀ ಸಿದ್ಧತೆ ನಡೆಸುತ್ತಿದ್ದ ಬಾಲಕ ನೆನ್ನೆ(ಅಕ್ಟೋಬರ್ 29) ಮನೆಗೆ ಆಗಮಿಸಿ ಭಗತ್ ಸಿಂಗ್ ಪಾತ್ರದ ಕುರಿತು ಅಭ್ಯಾಸ ಮಾಡಿಕೊಳ್ಳುವ ವೇಳೆ ನೇಣಿಗೆ ಕೊರಳಡ್ಡಿ ನಿಧನ ಹೊಂದಿದ್ದಾನೆ.
ಅಭ್ಯಾಸ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿಂದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲಿಯೇ ಸಂಜಯ್ ಸಾವನ್ನಪ್ಪಿದ್ದಾನೆ.
ಮನೆಗೆ ಬಂದ ಪೋಷಕರು ಮಗ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ, ಬಾಲಕ ಮರಣ ಹೊಂದಿದ್ದಾನೆ. ಇದೀಗ ಈ ಸಂಬಂಧ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.