ಬೆಂಗಳೂರು: ಬಾಷ್ ಕಂಪನಿ (ಮೈಕೋ ಕಾರ್ಖಾನೆ) ಕಾರ್ಖಾನೆಯಲ್ಲಿ ಎಂಇಎ ನಾಯಕತ್ವದ ಚುನಾವಣೆಯ ಪ್ರಚಾರ ನಡೆಯುತ್ತಿತ್ತು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಬೆಂಬಲಿತ ʻಆನೆ ತಂಡʼ ಕಾರ್ಮಿಕರ ಮಧ್ಯೆ ಹಿಂದಿನ ಚುನಾಯಿತ ಪ್ರತಿನಿಧಿಗಳ ಕಾರ್ಯವೈಖರಿ ಹಾಗೂ ಕಂಪನಿಯಲ್ಲಿ ಕಾರ್ಮಿಕ ವಿರೋಧಿ ನೀತಿಗಳ ಅನುಸರಿಸುತ್ತಿರುವ ವಿರುದ್ಧ ಪ್ರಚಾರ ಹಮ್ಮಿಕೊಂಡಿದ್ದಾರೆ.
ಮತದಾನ ಪ್ರಕ್ರಿಯೆಯು ಬಿಡದಿಯ ಬಾಷ್ ಘಟಕದಲ್ಲಿ ಆಗಸ್ಟ್ 5ರಂದು ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಹೊರಬೀಳಲಿದೆ.
ಮೈಕೋ ಕಾರ್ಖಾನೆಯಲ್ಲಿ ದಶಕಗಳ ಕಾಲದ ಚಳುವಳಿಯ ಅನುಭವ ಇರುವ ಕಾರ್ಮಿಕರಲ್ಲಿ ಕಾರ್ಮಿಕ ನಾಯಕ ದಿವಂಗತ ಎಸ್ ಸೂರ್ಯನಾರಾಯಣರಾವ್ ಅವರ ನೇತೃತ್ವದಲ್ಲಿ ಸಮರಶೀಲ ಹೋರಾಟವನ್ನು ನಡೆಸಿ ಕಾರ್ಖಾನೆಯ ಕಾರ್ಮಿಕರಿಗೆ ಅಷ್ಟೇ ಅಲ್ಲದೆ, ಬೆಂಗಳೂರು ಸೇರಿದಂತೆ ವಿವಿದೆಡೆ ದುಡಿಯುವ ವರ್ಗಕ್ಕೆ ಕಾರ್ಮಿಕ ಹಕ್ಕುಗಳನ್ನು ಸಾಧಿಸಿಕೊಳ್ಳಲು ಸಾಧ್ಯವಾಗಿತ್ತು.
ಕಾರ್ಖಾನೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹಾರಕ್ಕೆ ಬೇಡಿಕೆವೆ. ಅದರಲ್ಲಿ ಪ್ರಮುಖವಾಗಿ ಖಾಯಂ ಕಾರ್ಮಿಕರಿಗೆ ಸರಿಯಾದ ಕೆಲಸವನ್ನು ನೀಡದೆ ಟ್ರೈನಿಗಳಿಗೆ ಮಣೆ ಹಾಕಲಾಗುತ್ತಿದೆ. ಯಾವುದೇ ಉದ್ಯೋಗ ಭದ್ರತೆಗಳಿಲ್ಲದೆ ಸಾವಿರಾರು ಟ್ರೈನಿಗಳ ಗುಂಪುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿದ್ದು, ಕಾರ್ಮಿಕರಿಗೆ ಇದ್ದಂತಹ ಹಲವು ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಇದರೊಂದಿಗೆ ಇನ್ನು ಕೆಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ಆನೆ ತಂಡವು ಚುನಾವಣಾ ಪ್ರಚಾರ ಕೈಗೊಂಡಿದೆ.
ಆನೆ ತಂಡವು ಬಾಷ್ ಕಾರ್ಮಿಕರು ಕಳೆದುಕೊಂಡಿರುವ ಸ್ವಾತಂತ್ರ ಮತ್ತು ಹಕ್ಕುಗಳನ್ನು ಪುನರ್ ಸ್ಥಾಪಿಸುವ ಬಗ್ಗೆ, ಎಬಿಪಿ ಮತ್ತು ಐಎಂಬಿಗಳನ್ನೂ ಸತತವಾಗಿ ಪಡೆಯಲು, ಜಿ03 ಕಾರ್ಮಿಕರ ಗ್ರೇಡ್ ಮತ್ತು ಎಬಿಪಿ ತಾರತಮ್ಯವನ್ನು ನ್ಯಾಯಯುತವಾಗಿ ಸರಿಪಡಿಸಲು, ಕಡಿವಾಣವಿಲ್ಲದ ಎಫ್‌ಟಿಸಿ ಮತ್ತು ನೀಮ್-ಟಿಗಳನ್ನು ನಿಯಂತ್ರಿಸಲು, ಎಂಇಎ ಕಾರ್ಮಿಕ ಸಂಘ ಮತ್ತು ಕಾರ್ಮಿಕರನ್ನು ಉಳಿಸಲು, ಅತ್ಯುತ್ತಮವಾದ ವೇತನ ಒಪ್ಪಂದ ಮಾಡಲು, ಹಿಂದಿನ ಕಾರ್ಮಿಕ ವಿರೋಧಿ ಒಪ್ಪಂದವನ್ನು ಸರಿಪಡಿಸಲು, ಕದ್ದು ಮುಚ್ಚಿ ನಡೆಯುವ 2(P) ಟೋಪಿ ಒಪ್ಪಂದಗಳನ್ನು ತಡೆಯಲು, ವಜಾಗೊಂಡಿರುವ ಕಾರ್ಮಿಕರಿಗೆ ನ್ಯಾಯ ಕೊಡಿಸಲು ರುಚಿ ಮತ್ತು ಶುಚಿಯಾದ ಕ್ಯಾಂಟೀನ್ ವ್ಯವಸ್ಥೆಯನ್ನು ಪಡೆಯಲು, ನಿರಂತರವಾಗಿ ಕಾರ್ಖಾನೆಗೆ ಭೇಟಿಮಾಡಲು ಸಿದ್ಧವಿರುವ ಅಧ್ಯಕ್ಷರ ಪ್ರಮುಖ ಬೇಡಿಕೆಗಳನ್ನು ಒಟ್ಟುಕೊಂಡು ಎಂಇಎ ನಾಯಕತ್ವಕ್ಕೆ ಚುನಾವಣಾ ಕಣದಲ್ಲಿರುವ ಆನೆ ತಂಡದ ಅಭ್ಯರ್ಥಿಗಳು ಪ್ರಚಾರ ಕೈಗೊಂಡಿದ್ದಾರೆ.
ಚುನಾವಣೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಿಜೆಕೆ ನಾಯರ್ ನೇತೃತ್ವದ ಸಿಐಟಿಯು ಬೆಂಬಲಿತ ಆನೆ ತಂಡದ ಪರವಾಗಿ ಆಧ್ಯಕ್ಷ ಸ್ಥಾನಕ್ಕೆ ಶೇಷಾದ್ರಿ ಎಸ್., ಉಪಾಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ ರೆಡ್ಡಿ. ಬಿ.ಆರ್. ಮತ್ತು ಅನಿಲ್‌ಕುಮಾರ್ ಬಿ.ಪಿ., ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಂಜುನಾಥ ಆರ್.(ವಿಆರ್‌ಎಲ್), ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಅನ್ಬಳಗನ್ ಎನ್., ಸಹ ಕಾರ್ಯದರ್ಶಿ ಸ್ಥಾನಕ್ಕೆ ಆನಂದ ಬಿ.ಕೆ., ಖಜಾಂಚಿ ಸ್ಥಾನಕ್ಕೆ ಶಂಕರ್ ಪಾಟೀಲ್ ಸ್ಪರ್ಧಿಸಿದ್ದಾರೆ.
ಅಲ್ಲದೆ, ಕ್ಯಾಂಟೀನ್ ಕಮಿಟಿ ಸೇರಿದಂತೆ 17 ವಿಭಾಗದ ಕ್ಷೇತ್ರ ಮಟ್ಟದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಸಿಐಟಿಯು ಬೆಂಬಲಿತ ಆನೆ ತಂಡವು ಪ್ರಚಾರ ಕೈಗೊಂಡಿದೆ. ಒಂದು ಅಂದಾಜಿನ ಪ್ರಕಾರ ಆನೆ ತಂಡವು ಭಾರೀ ಬಹುಮತದೊಂದಿಗೆ ಎಂಇಎ ನಾಯಕತ್ವವನ್ನು ವಹಿಸಲಿದೆ ಎಂಬ ಮಾಹಿತಿ ಇದೆ.
ವರದಿ : ವಿನೋದ ಶ್ರೀರಾಮಪುರ