ಲಂಡನ್: ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಬ್ರಿಟನ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 5 ಸಂಪುಟ ಸಚಿವರು ಹಾಗೂ ಅಧಿಕಾರಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬೋರಿಸ್ ಜಾನ್ಸನ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕನ್ಸರ್ವೇಟಿವ್ ಪಕ್ಷ ನೂತನ ನಾಯಕನನ್ನು ಆರಿಸುವವರೆಗೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ತಿಂಗಳು, ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಗ್ಯ ಸಚಿವ ಸಾಜಿದ್ ಜಾವಿದ್ ಮತ್ತು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರ ರಾಜೀನಾಮೆಯೊಂದಿಗೆ ಪ್ರಾರಂಭವಾಗಿ ಹಲವು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ತಮ್ಮ ವೃತ್ತಿ ಜೀವನದ ಅತಿದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. 40 ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ಸರ್ಕಾರವನ್ನು ತೊರೆದ ನಂತರ ಅವರ ರಾಜೀನಾಮೆಗೆ ತೀವ್ರ ಒತ್ತಡ ಕೇಳಿಬಂತು.
ಲಂಡನ್ ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಬೊರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಇರಾಕಿ-ಮೂಲದ ಮಂತ್ರಿ ನಾಧಿಮ್ ಜಹಾವಿ, ಬೊರಿಸ್ ಅವರ ಅಧಿಕಾರವನ್ನು ಬಹಿರಂಗವಾಗಿ ಪ್ರಶ್ನಿಸಿ ಅವರ ನಿರ್ಗಮನಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಈ ಬಿಕ್ಕಟ್ಟಿನ ನಡುವೆ, ಬೊರಿಸ್ ಜಾನ್ಸನ್ ಅವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾಗ ಬರೆದ ಹಳೆಯ ಲೇಖನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜಾನ್ಸನ್ ರಾಜೀನಾಮೆ ಸಲ್ಲಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆಯಾದರೂ ಕನ್ಸರ್ವೇಟಿವ್ ಪಕ್ಷ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೋ ಅಥವಾ ಹೊರಬರುವರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.