ಗಡಿ ವಿವಾದ: ಉಭಯ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಭೆ ನಿಗದಿ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತಷ್ಟು ತಾರಕ್ಕೇರಿದ್ದು, ಇದರಿಂದಾಗಿ ಎರಡೂ ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಇದೀಗ ಗಡಿ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ, ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗವೊಂದು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಹಿಂಸಾಚಾರ ತಡೆಯುವಂತೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಅಮಿತ್‌ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್‌ 14 ಅಥವಾ ಡಿಸೆಂಬರ್‌ 15ರಂದು ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಮಹಾರಷ್ಟ್ರ ಮತ್ತೆ ಗಡಿ ವಿವಾದ ಮುನ್ನಲೆಗೆ ತಂದಿದ್ದು, ಕಳೆದ ಹತ್ತು ಹದಿನೈದು ದಿನಗಳಿಂದ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಾದದ ಕುರಿತು ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ ಡಿಸೆಂಬರ್‌ 07ರಂದು ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ಇದೇ ವಿಚಾರವಾಗಿ ಸುಪ್ರಿಯಾ ಸುಳೆ ಮತ್ತು ಮಹಾರಾಷ್ಟ್ರದ ಕೆಲ ನಾಯಕರು ನೆನ್ನೆ  ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿಯಾಗಿ ಗಡಿ ವಿವಾದದ ಕುರಿತು ಪ್ರಸ್ತಾಪಿಸಿದ್ದಾರೆ.

ಗಡಿ ವಿವಾದರ ಕುರಿತಂತೆ, ಸುಪ್ರೀಂ ಕೋರ್ಟನಲ್ಲಿ ವಿಚಾರಣೆಯ ಹಂತದಲ್ಲಿದೆ ಈಗ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗವು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದೆ. ಈ ವೇಳೆ ಸಂಸದರ ನಿಯೋಗವು ಹಿಂಸಾಚಾರ ಸ್ವರೂಪವನ್ನು ತಡೆಯಲು ಕ್ರಮಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದಿಂದಾಗಿ ಎರಡೂ ರಾಜ್ಯಗಳಲ್ಲಿ ಹೋರಾಟಗಾರರು ಬಸ್ಸುಗಳಿಗೆ ಮಸಿ ಬಳಿದು, ಕಲ್ಲು ಹೊಡೆಯುವ ಕುಕೃತ್ಯ ಘನನೆಗಳು ವರದಿಯಾಗಿವೆ. ಇದರಿಂದಾಗಿ ರಾಜ್ಯಗಳ ನಡುವಿನ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಲ್ಲದೆ ಗಡಿ ಗ್ರಾಮಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ ಬಿಗಾಡಾಯಿಸಬಹುದು. ಈ ಘಟನೆಗಳ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಯನ್ನು ಅಮಿತ್ ಶಾ ಚರ್ಚೆಗೆ ಕರೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಹಾರಾಷ್ಟ್ರದ ಸಂಸದರು ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಬಳಿಕ ಇದೀಗ ಕರ್ನಾಟಕ ಸಂಸದರ ನಿಯೋಗವು ಸೋಮವಾರ ಅವರನ್ನು ಭೇಟಿಯಾಗಿ ಚರ್ಚೆ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈಗ ಎರಡೂ ರಾಜ್ಯಗಳ ಗಡಿಗಳಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಗಡಿ ವಿಚಾರವಾಗಿ ಈವರೆಗೆ ಸಂಭವಿಸಿರುವ ವಸ್ತು ಸ್ಥಿತಿಯನ್ನು ಗೃಹ ಸಚಿವರಿಗೆ ವಿವರಿಸಲಿದ್ದೆವೆ ಎಂದು ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳ ಸಭೆಯ ವೇಳೆ ಉಳಿದ ಮಾಹಿತಿಯನ್ನು ನಾನು ಅಮಿತ್‌ ಶಾ ಅವರ ಮುಂದಿಡುತ್ತೇನೆ ಎಂದು ಹೇಳಿದರು.

ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ: ಬಸವರಾ ಬೊಮ್ಮಾಯಿ

ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೊರ್ಟ್​​ನಲ್ಲಿದೆ. ಅಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬರೆದಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸಲು ಕೇಂದ್ರ ಗೃಹ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದ್ದೇನೆ ಎಂದಿದ್ದಾರೆ.

ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೂ ಮುಂಚಿತವಾಗಿ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಗೃಹಮಂತ್ರಿಗಳ ಮುಂದೆ ಚರ್ಚೆ ಮಾಡುವ ವೇಳೆ ಏನೆಲ್ಲಾ ವಿಚಾರಗಳನ್ನು ಮುಂದಿಡಬೇಕು ಎಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *