ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ, ಸಚಿವ ಸಂಪುಟ ರಚನೆಯ ಕಸರತ್ತು ಮಾತ್ರ ಸಾಕಷ್ಟು ಗಂಭೀರವಾಗಿದ್ದವು. ಸತತ ಎರಡು ಬಾರಿ ದೆಹಲಿ ಪ್ರವಾಸವನ್ನು ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಕೇಂದ್ರ ಹೈಕಮಾಂಡ್ ಸೂಚನೆಯೇ ಅಂತಿಮಗೊಳಿಸಿ, ಅಂತಿಮವಾಗಿ ಇಂದು 29 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನಡೆದಿದೆ.
ರಾಜ್ಯದಲ್ಲಿ ಚುನಾಯಿತ ಸರಕಾರಕ್ಕೆ 34-35 ಸಚಿವರನ್ನು ಅವಕಾಶವಿದ್ದು, ಇಂದು 29 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಪ್ರಮಾಣ ವಚನದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ತಿಳಿದು ಬಂದಿದೆ. ಉಳಿದಂತೆ 6-7 ಸ್ಥಾನಗಳು ಖಾಲಿ ಉಳಿಯಲಿವೆ. ಈ ಬಾರಿಯೂ ಪ್ರಮುಖವಾಗಿ ಜಾತಿ ಲೆಕ್ಕಾಚಾರವನ್ನು ಪರಿಗಣಿಸಿರುವ ಬಿಜೆಪಿ ಪಕ್ಷವು ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ಹೇಳುತ್ತಿದ್ದಾರೆ.
ಆದರೆ, ಯಾರನ್ನು ಸಚಿವರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಗೌಪ್ಯವಾಗಿದ್ದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಜಾತಿ ಲೆಕ್ಕಚಾರ ಹೆಚ್ಚಾಗಿ ಪರಿಗಣಿಸಲಾಗಿದೆ. ಪ್ರಾದೇಶಿಕವಾರು ಲೆಕ್ಕಾಚಾರವನ್ನು ಗಮನಿಸಿದ್ದಲ್ಲಿ ಬೆಂಗಳೂರಿನ 8 ಮಂದಿ ಸಚಿವರಾಗಲಿದ್ದಾರೆ. ಉಳಿದಂತೆ ಶಿವಮೊಗ್ಗ, ತುಮಕೂರು, ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ತಲಾ ಇಬ್ಬರು ಸಚಿವರಾಗಿದ್ದಾರೆ.
ತಲಾ ಒಬ್ಬರನ್ನು ಸಚಿವ ಸ್ಥಾನವನ್ನು ಪಡೆದ ಜಿಲ್ಲೆಗಳು ಇಂತಿವೆ: ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೊಪ್ಪಳ್ಳ, ಮಂಡ್ಯ, ಧಾರವಾಡ, ಬೀದರ್, ಗದಗ, ಉತ್ತರ ಕನ್ನಡ, ವಿಜಯನಗರ, ಉಡುಪಿ
ಸಚಿವ ಸ್ಥಾನ ವಂಚಿತ ಜಿಲ್ಲೆಗಳು : ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬಳ್ಳಾರಿ, ಯಾದಗಿರಿ, ಕೋಲಾರ, ವಿಜಯಪುರ, ಕೊಡಗು, ರಾಯಚೂರು, ರಾಮನಗರ,
ಪ್ರಾದೇಶಿಕವಾರು ಪರಿಗಣಿಸಿದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡು ಸಚಿವ ಸ್ಥಾನ ಲಭಿಸಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು ಸ್ಥಾನ ಪಡೆದಿವೆ. ಮೈಸೂರು ಭಾಗದ ಐದು ಜಿಲ್ಲೆಗಳಲ್ಲಿ ಮಂಡ್ಯಕ್ಕೆ ಮಾತ್ರ ಒಂದು ಸಚಿವ ಸ್ಥಾನ. ಕರಾವಳಿ ಕರ್ನಾಟಕ ಭಾಗದಲ್ಲಿಯೂ ಮೂರು ಜಿಲ್ಲೆ ತಲಾ ಒಂದು ಸಚಿವ ಸ್ಥಾನ ಲಭಿಸಿದೆ. ಶಿಗ್ಗಾವಿ ವಿಧಾನಸಭೆಯಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯವರು.
ಜಿಲ್ಲಾವಾರು ಪರಿಗಣಿಸಿದಲ್ಲಿ ಚಿಕ್ಕಮಗಳೂರಿನ ಸಿ.ಟಿ.ರವಿ, ದಾವಣಗೆರೆಯ ರೇಣುಕಾಚಾರ್ಯ, ಮಡಿಕೇರಿಯ ಅಪ್ಪಚ್ಚು ರಂಜನ್, ಮೈಸೂರಿನ ರಾಮದಾಸ್, ಕೊಳ್ಳೆಗಾಲದ ಎನ್ ಮಹೇಶ್ (ಬಿಜೆಪಿ ಪಕ್ಷ ಸೇರ್ಪಡೆ ಖಚಿತವಾಗಿದ್ದರಿಂದ ಇಂದೇ ಸಚಿವರಾಗುವರು ಎಂಬ ವದಂತಿ ಹರಡಿತ್ತು.) ಇವರುಗಳು ಸಚಿವರಾಗಿಲ್ಲ. ಐದು ಬಾರಿ ಆಯ್ಕೆಯಾಗಿರುವ ಅಪ್ಪಚ್ಚು ರಂಜನ್ , ತಲಾ ನಾಲ್ಕು ಬಾರಿ ಆಯ್ಕೆಯಾಗಿರುವ ರಾಮದಾಸ್ ಮತ್ತು ಬೋಪಯ್ಯ ಅವರಿಗೂ ಸಚಿವ ಸ್ಥಾನ ಲಭಿಸಿಲ್ಲ.
ವರದಿ : ವಿನೋದ ಶ್ರೀರಾಮಪುರ