ಮುಂಬಯಿ: ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ವಿಚ್ಛೇದನ ನಂತರದಲ್ಲಿ ಮಕ್ಕಳು ತಂದೆ ಅಥವಾ ತಾಯಿಯ ಬಳಿ ಇರಬೇಕು. ಆಗ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಪ್ರೀತಿ ಆರೈಕೆ ಮಕ್ಕಳಿಗೆ ಸಿಗೋದಿಲ್ಲ.
ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್ ಅಜ್ಜ ಅಜ್ಜಿಯರನ್ನು ಭೇಟಿಯಾಗಲು ತಮ್ಮ ಮಕ್ಕಳನ್ನು ನಾಲ್ಕು ದಿನಗಳ ಮಟ್ಟಿಗೆ ತಮ್ಮಿಂದ ಪ್ರತ್ಯೇಕಗೊಂಡಿರುವ ಗಂಡನ ಸುಪರ್ದಿಗೆ ಒಪ್ಪಿಸಬೇಕು ಎಂದು ಆದೇಶಿಸಿದೆ. ಮಕ್ಕಳಿಗೆ ಪೋಷಕರು, ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಪಡೆಯುವ ಹಕ್ಕಿದೆ ಎಂದು ತಿಳಿಸಿದೆ.
ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠ ವಿಚ್ಛೇದಿತ ಪತಿ, ಅತ್ತೆ-ಮಾವನಿಗೆ ಮಕ್ಕಳನ್ನು ನೋಡಲು ಅವಕಾಶ ನೀಡುವಂತೆ ಸೂಚನೆ ನೀಡಿದ್ದಾರೆ.
ಕಳೆದ 22 ತಿಂಗಳುಗಳಿಂದ ಮಕ್ಕಳನ್ನು ನೋಡಲು ಪತ್ನಿ ಅವಕಾಶ ನೀಡಿಲ್ಲ ಎಂದು 38 ವರ್ಷದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದ. ಈ ಮೊದಲು ಸಹ ಇದೇ ವಿಚಾರಕ್ಕೆ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ನ್ಯಾಯಪೀಠ ಮಕ್ಕಳನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡುವಂತೆ ಸೂಚಿಸಿದ್ದರೂ ಮಹಿಳೆ ಅದರಂತೆ ನಡೆದುಕೊಂಡಿರಲಿಲ್ಲ.
ತನ್ನ ಪೋಷಕರಿಗೆ ಆರೋಗ್ಯ ಸಮಸ್ಯೆ ಇದ್ದು, ಮೊಮ್ಮಕ್ಕಳನ್ನು ನೋಡಬೇಕೆಂದು ಆಸೆಪಡುತ್ತಿದ್ದಾರೆ. ಹಾಗಾಗಿ ಮಕ್ಕಳ ತಾತ್ಕಾಲಿಕ ಕೆಲ ದಿನಗಳ ಮಟ್ಟಿಗೆ ನೋಡಲು ಅವಕಾಶ ಕೊಡಿ ಎಂದು ಆತ ಮನವಿ ಮಾಡಿಕೊಂಡಿದ್ದ.
2018ರಲ್ಲಿ ದಂಪತಿ ಬೇರೆಯಾಗಿದ್ದರು. ಇವರಿಗೆ 10 ವರ್ಷ ಪ್ರಾಯದ ಅವಳಿ ಗಂಡುಮಕ್ಕಳಿದ್ದಾರೆ. ಮಕ್ಕಳ ಹುಟ್ಟುಹಬ್ಬದ ದಿನ ಕೂಡ ತಂದೆಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಕೋರ್ಟ್ ಆದೇಶಿಸಿತ್ತು. ಆದರೆ, ಮಹಿಳೆ ಅದನ್ನೂ ಧಿಕ್ಕರಿಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ತಂದೆ ಹಾಗೂ ಅಜ್ಜ, ಅಜ್ಜಿಯ ಪ್ರೀತಿ, ವಾತ್ಸಲ್ಯ ಸಿಕ್ಕರೆ ಮಕ್ಕಳ ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮ ಸಾಧ್ಯ. ಹಾಗಾಗಿ ಅವರನ್ನು ಭೇಟಿಯಾಗಲು ಅವಕಾಶ ಕೊಡಿ ಅಂತ ಕೋರ್ಟ್ ಆದೇಶಿಸಿದೆ.
ನಿಗದಿತ ದಿನದಂದು ತಮ್ಮ ಮಕ್ಕಳನ್ನು ಪುಣೆಯ ಫೀನಿಕ್ಸ್ ಮಾಲ್‌ಗೆ ಕರೆತಂದು ಸಂಜೆಯವರೆಗೆ ಪತಿ ಮತ್ತು ಮಕ್ಕಳೊಂದಿಗೆ ಒಟ್ಟಿಗೆ ಸಮಯ ಕಳೆಯಬೇಕು. ಅಲ್ಲದೆ ಅಲ್ಲಿಂದ ನಾಲ್ಕು ದಿನಗಳ ಕಾಲ ಮಕ್ಕಳನ್ನು ತನ್ನ ಗಂಡನ ಸುಪರ್ದಿಗೆ ಒಪ್ಪಿಸಬೇಕು ಪತ್ನಿಗೆ ಪೀಠ ಆದೇಶಿಸಿತು.