ಕೇಂದ್ರ ಸಚಿವ ನಾರಾಯಣ ರಾಣೆ ಕುಟುಂಬಕ್ಕೆ ಸೇರಿದ ಕಟ್ಟಡ ಧ್ವಂಸಕ್ಕೆ ಹೈಕೋರ್ಟ್‌ ಆದೇಶ

ಮುಂಬಯಿ: ಇಲ್ಲಿನ ಜುಹು ಪ್ರದೇಶದಲ್ಲಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಸೇರಿದ ಎಂಟು ಮಹಡಿಗಳ ಕಟ್ಟಡದಲ್ಲಿನ ಅನಧಿಕೃತ ಭಾಗವನ್ನು ತೆರವುಗೊಳಿಸುವಂತೆ ಮುಂಬಯಿ ಪಾಲಿಕೆ ಸಂಸ್ಥೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಣೆ ಅವರ ಕಟ್ಟಡವು ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್ಐ) ಮತ್ತು ಕರಾವಳಿ ನಿರ್ಬಂಧ ವಲಯ (ಸಿಆರ್‌ಜೆಡ್) ನಿಯಮಗಳನ್ನು ಉಲ್ಲಂಘಿಸಿದೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

ನ್ಯಾಯಮೂರ್ತಿಗಳಾದ ಆರ್. ಡಿ. ಧನುಕಾ ಮತ್ತು ಕಮಲ್ ಖಾತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಎರಡು ವಾರಗಳ ಒಳಗಾಗಿ ಅನಧಿಕೃತ ಭಾಗಗಳನ್ನು ಕೆಡವಲು ಹಾಗೂ  ಒಂದು ವಾರದ ನಂತರ ನ್ಯಾಯಾಲಯಕ್ಕೆ ಕಾರ್ಯಾನುಷ್ಠಾನ ವರದಿ ಸಲ್ಲಿಸುವಂತೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಗೆ ನಿರ್ದೇಶನ ನೀಡಿದೆ.

ನಾರಾಯಣ ರಾಣೆ ಕುಟುಂಬ ನಡೆಸುತ್ತಿರುವ ಕಂಪೆನಿ ಸಲ್ಲಿಸಿರುವ ಎರಡನೇ ಅರ್ಜಿಯನ್ನು ಬಿಎಂಸಿ ಪರಿಗಣಿಸುವ ಅಥವಾ ಅನುಮತಿಸುವ ಹಾಗೆ ಇಲ್ಲ ಎಂದು ನ್ಯಾಯಪೀಠ ಹೇಳಿದೆ. ಇದೇ ವೇಳೆ ನ್ಯಾಯಪೀಠ ನಾರಾಯಣ ರಾಣೆ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಎರಡು ವಾರದೊಳಗೆ ದಂಡವನ್ನು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಜಮೆ ಮಾಡುವಂತೆ ಸೂಚಿಸಿದೆ.

ಅಕ್ರಮ ಕಟ್ಟಡದ ಸಕ್ರಮ ಮನವಿಯನ್ನು ಬಿಎಂಸಿ ಜೂನ್‌ನಲ್ಲಿ ತಿರಸ್ಕರಿಸಿತ್ತು. ಯಾವ ಪ್ರಭಾವಕ್ಕೂ ಒಳಗಾಗದೇ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ವರದಿಯಾಗಿತ್ತು. ಇದರ ಬಳಿಕ ರಾಣೆ ಕುಟುಂಬದ ಮಾಲೀಕತ್ವದ ಕಾಲ್ಕಾ ರಿಯಲ್ ಎಸ್ಟೇಟ್ ತಮ್ಮ ಎರಡನೇ ಅರ್ಜಿಯನ್ನು ಸಲ್ಲಿಸಿತ್ತು.

ಈ ಹಿಂದೆ ಕೇಳಿದ್ದಕ್ಕೆ ಹೋಲಿಸಿದರೆ ಕಡಿಮೆ ಭಾಗವನ್ನು ಸಕ್ರಮಗೊಳಿಸುವಂತೆ, ಅಭಿವೃದ್ಧಿ ನಿಯಂತ್ರಣ ಮತ್ತು ಪ್ರಚಾರ ನಿರ್ಬಂಧ 2034ರ ಹೊಸ ನಿಯಮಗಳ ಅಡಿ ಮನವಿ ಮಾಡಿತ್ತು. ಮುಂದಿನ ಆದೇಶದವರೆಗೂ ರಾಣೆ ಅವರ ಬಂಗಲೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ಹಾಗೆಯೇ ನಿರ್ಮಾಣ ಕಾರ್ಯ ಮುಂದುವರಿಸದಂತೆ ರಾಣೆ ಅವರಿಗೆ ಸೂಚಿಸಿತ್ತು.

ಇದೀಗ ಹೈಕೋರ್ಟ್‌ ನ್ಯಾಯಲಯ ಅಂತಿಮ ಆದೇಶ ನೀಡಿದ್ದು, ಕಟ್ಟಡ ನೆಲಸಮಗೊಳಿಸಲು ಗಡುವು ನೀಡಿ ಸೂಚನೆ ನೀಡಿದೆ.

ರಾಣೆ ಪರ ವಕೀಲ ಶಾರ್ದೂಲ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ತನ್ನ ಆದೇಶವನ್ನು ಆರು ವಾರಗಳವರೆಗೆ ತಡೆಹಿಡಿಯಬೇಕೆಂದು ಕೋರಿದರು. ನ್ಯಾಯಪೀಠ ಈ ಮನವಿಯನ್ನು ತಿರಸ್ಕರಿಸಿತು.

Donate Janashakthi Media

Leave a Reply

Your email address will not be published. Required fields are marked *