ಮಂಗಳೂರು: ಮತೀಯ ಗೂಂಡಾಗಿರಿಯ ವಿರುದ್ಧದ ದಿಟ್ಟ ಧ್ವನಿ, ನಿವೃತ್ತ ಉಪನ್ಯಾಸಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಶನಿವಾರ ಮುಂಜಾನೆ ನಗರದ ದೇರೇಬೈಲು ಕೊಂಚಾಡಿಯ ಗಿರಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ 2021ರಲ್ಲಿ ನಿವೃತ್ತರಾಗಿದ್ದರು. ಈ ಕಾಲೇಜಿನಲ್ಲಿ ಅವರು ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.
ತಮ್ಮ ಮನೆಯಲ್ಲಿ ಒಬ್ಬರೇ ವಾಸವಿದ್ದ ಪಟ್ಟಾಭಿರಾಮ ಅವರು, ಶುಕ್ರವಾರ ರಾತ್ರಿ ಕೆಲವು ಆಪ್ತರೊಡನೆ ದೂರವಾಣಿಯಲ್ಲಿ ಮಾತನಾಡಿದ್ದರು ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ ಅವರು ಮನೆಯಿಂದ ಹೊರಗೆ ಬಾರದಿದ್ದುದನ್ನು ಕಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರರಿಗೆ ಮಾಹಿತಿ ನೀಡಿದ್ದರಿಂದ, ಮನೆಯ ಬಾಗಿಲನ್ನು ಒಡೆದು ನೋಡಿದಾಗ ಅವರು ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾಗಿ ವರದಿ ಹೇಳಿದೆ.
ಇದನ್ನೂ ಓದಿ: ಕೋಮುವಾದ, ಮತೀಯ ಹಿಂಸಾಚಾರ ತಡೆ: ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಲು ನಿರ್ಧಾರ
ಕರಾವಳಿಯಲ್ಲಿ ಕೋಮುವಾದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಮತೀಯ ಗೂಂಡಾಗಿರಿ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ಈ ಕುರಿತ ಪ್ರತಿಭಟನೆಗಳಲ್ಲಿ ಪ್ರಖರ ಭಾಷಣ ಮಾಡುತ್ತಿದ್ದರು. ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರ ಅವರು ರಾಮಸೇನೆಯನ್ನು ‘ರಾವಣ ಸೇನೆ’ ಎಂದು ಕರೆದಿದ್ದರು. 2012 ರಲ್ಲಿ ಅವರ ವಿರುದ್ಧ ಸೈದ್ಧಾಂತಿಕ ದ್ವೇಷವನ್ನು ಹೊಂದಿದ್ದ ಭಜರಂಗ ದಳದ ಕಾರ್ಯಕರ್ತನೊಬ್ಬ ಅವರ ಮುಖದ ಮೇಲೆ ಹಸುವಿನ ಸಗಣಿ ಬಳಿದಿದ್ದ ಘಟನೆ ನಡೆದಿತ್ತು.
ಪ್ರೊ. ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ ನಾಡಿನ ಹಿರಿಯ ಪ್ರಾಧ್ಯಾಪಕರು, ಸಾಹಿತಿಗಳು, ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.
ಹಿರಿಯ ಲೇಖಕ ಸನತ್ ಕುಮಾರ್ ಅವರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ. ರಹಮತ್ ತರಿಕೆರೆ, “ನಾಡಿನ ದಮನಿತರ ಪರವಾದ ಎಲ್ಲ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ, ಒಳ್ಳೆಯ ಸಾಹಿತ್ಯದ ಅಧ್ಯಾಪಕರಾಗಿದ್ದ, ತೀಕ್ಷ್ಣವಾದ ಮಾತುಗಾರಿಕೆಗೆ ಹೆಸರಾಗಿದ್ದ, ತನ್ನ ಪ್ರತಿರೋಧದ ಗುಣದಿಂದ ವೃತ್ತಿಬದುಕಿನಲ್ಲಿ ಕಷ್ಟಪಟ್ಟ, ಸಂಸಾರದ ಬದುಕಿನಲ್ಲಿ ಎಂಥದ್ದೊ ಎಡವಟ್ಟು ಮಾಡಿಕೊಂಡು ಕೊನೆಯ ದಿನಗಳಲ್ಲಿ ಒಂಟಿಯಾಗಿದ್ದಂತೆ ತೋರುತ್ತಿದ್ದ ಗೆಳೆಯ, ಕಣ್ಮರೆಯಾದರೆ? ಏನೂ ತೋಚುತ್ತಿಲ್ಲ. ಮನಸ್ಸಿನಲ್ಲಿ ಶೂನ್ಯಭಾವ ಕವಿದಿದೆ” ಎಂದು ಹೇಳಿದ್ದಾರೆ.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, “ಭಾವಪೂರ್ಣ ಶ್ರದ್ದಾಂಜಲಿಗಳು ಸರ್. ಹಲವು ಭಿನ್ನಾಭಿಪ್ರಾಯಗಳಾಚೆಗೂ ಕೋಮುವಾದದ ವಿರುದ್ದ ನಿಮ್ಮ ಬದ್ದತೆ, ಹೋರಾಟ ಸದಾ ನೆನಪಿನಲ್ಲಿ ಇರುತ್ತದೆ” ಎಂದು ಸಂತಾಪ ಸೂಚಿಸಿದ್ದಾರೆ.
ಸಾಹಿತಿ ಬಸೂ ಅವರು, “ನನಗಿಂತ ಹತ್ತು ವರ್ಷ ದೊಡ್ಡವರಿರಬಹುದಾದ ಹಿರಿಯ ಸಂಗಾತಿ, ಲೇಖಕ ಪಟ್ಟಾಭಿರಾಮ ಸೋಮಯಾಜಿ ಇಲ್ಲವಾಗಿದ್ದಾರೆ. ನಮ್ಮ ಹವ್ಯಾಸಗಳೇ ನಮ್ಮ ಆಯುಷ್ಯವನ್ನು ಕುಗ್ಗಿಸುತ್ತವೆ ಎಂಬುದನ್ನು ಬದುಕಿದವರು ಅರ್ಥ ಮಾಡಿಕೊಂಡರೆ ಒಳಿತೇ ಆಗುತ್ತದೆ. ಸ್ಪಷ್ಟವಾದಿಯಾಗಿದ್ದ, ಕೋಮುವಾದವನ್ನು ಪ್ರಖರವಾಗಿಯೇ ವಿರೋಧಿಸಿದ ಈ ಹಿರಿಯ ಗೆಳೆಯ ಬದುಕನ್ನು ಕೊಂಚ ಶಿಸ್ತಿಗೆ ತಂದುಕೊಂಡಿದ್ದರೆ ಸಂಗತಿಗಳು ಬೇರೆಯೇ ಆಗುತ್ತಿತ್ತು. ಈ ಹೊತ್ತು ನಮ್ಮ ಕಿವಿಗಳನ್ನು ನಮ್ಮನ್ನು ಬೆಳೆಸಿದ, ಜೊತೆಗೆ ನಿಂತ ನಮ್ಮ ಆಪ್ತರ ಮಾತುಗಳಿಗೆ ತೆರೆದುಕೊಂಡರೆ ಜೀವನದ ಗತಿ ಬೇರೆಯಾಗುತ್ತದೆ. ಈ ಹಂತದಲ್ಲಿ ಈ ಹಿರಿಯ ಗೆಳೆಯನ ಅಗಲಿಕೆ ದುಃಖಕರ. ನಾವು ಕರೆದಾಗಲೆಲ್ಲ ಜೊತೆಗಿರುತ್ತಿದ್ದ ಈ ಹಿರಿಯ ಗೆಳೆಯನಿಗೆ ಅಂತಿಮ ನಮನಗಳು” ಎಂದು ಹೇಳಿದ್ದಾರೆ.
ಹೋರಾಟಗಾರ ಮಹಾಂತೇಶ್ ಕರಿಯಪ್ಪ ಅವರು, “ಕೋಮುವಾದಿ ಶಕ್ತಿಗಳು ಕೊಡಗು ಜಿಲ್ಲೆಯನ್ನು ತಮ್ಮ ಗಲಭೆಯ ನೆಲೆಯನ್ನಾಗಿ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಗಳ ನಡೆಸುತ್ತಿದ್ದ ಸನ್ನಿವೇಶದಲ್ಲಿ ಅದರ ವಿರುದ್ದ ಹೋರಾಟ ಸಂಘಟಿಸಿದ್ದರು. ಈ ಕಾರಣಕ್ಕಾಗಿ ಸಾಕಷ್ಡು ಬೆದರಿಕೆಗಳನ್ನು ಅವರು ಕೋಮುವಾದಿಗಳಿಂದ ಹಾಗೂ ಪ್ರತ್ಯೇಕ ಕೊಡಗು ರಾಜ್ಯಕ್ಕಾಗಿ ಹೋರಾಡುತ್ತಿದ್ದ ಶಕ್ತಿಗಳಿಂದ ಎದುರಿಸಿದ್ದರು. ಇಂತಹ ಪಟ್ಟಾಭಿ ಮಂಗಳೂರಿಗೆ ಹೋದ ಬಳಿಕಾವೂ ತನ್ನ ಕೋಮುವಾದದ ವಿರುದ್ದ ತಮ್ಮ ನಿರಂತರ ಹೋರಾಟವನ್ನು ಜನಪರ ಸಂಘಟನೆಗಳ ಜತೆ ಸೇರಿ ಮುನ್ನಡೆಸಿದ್ದರು. ಇಂತಹ ಹಿರಿಯ ಜೀವ ಇನ್ನಿಲ್ಲವೆಂದು ಕೇಳಿ ತೀರ ದುಃಖವಾಯಿತು. ಕೊಡಗು ಮತ್ತು ಕರಾವಳಿ ಜಿಲ್ಲೆಯ ಕೋಮುವಾದಿ ಶಕ್ತಿಗಳ ವಿರುದ್ದ ಗಟ್ಟಿ ಧ್ವನಿಯಾಗಿದ್ದ ಅವರಿಗೆ ಭಾವಪೂರ್ಣ ನಮನಗಳು” ಎಂದು ಹೇಳಿದ್ದಾರೆ.