ಖಾಸಗಿ ವೆಚ್ಚಗಳ ಅಸಮಾನತೆಯಲ್ಲಿ ಇಳಿಕೆಯೆಂದು ಹೆಮ್ಮೆ ಪಡುವುದು ನಿರ್ದಯತೆಯ ಪರಮಾವಧಿ

ಬಡವರು ತಮ್ಮ ಆರೋಗ್ಯ ಮತ್ತು ಶಿಕ್ಷಣದಂತಹ ಅಗತ್ಯ ಸೇವೆಗಳಿಗಾಗಿ ಅನಿವಾರ್ಯವಾಗಿ ದುಬಾರಿ ಖಾಸಗಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಹಣ ಹೊಂದಿಸಿಕೊಳ್ಳಲು ಸಾಲಮಾಡಬೇಕಾಗಿಬಂದರೂ, ಅಂಕಿ-ಅಂಶಗಳಲ್ಲಿ ಅದುಬಳಕೆ ಖರ್ಚುಗಳ ಅಸಮಾನತೆ ಇಳಿಕೆಯಾಗಿದೆ ಎಂಬಂತೆ ತೋರುತ್ತದೆ. ಆದರೆ, ವಾಸ್ತವವಾಗಿ ಇದು ನಿಜ ವರಮಾನದಲ್ಲಿನ ಅಸಮಾನತೆ ಏರಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಸರಕಾರ ಇಂತಹ ಇಳಿಕೆಯೇ ವರಮಾನ ಅಸಮಾನತೆಯ ಇಳಿಕೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ. ಹೀಗೆ ಖಾಸಗಿ ವೆಚ್ಚಗಳ ಅಸಮಾನತೆಗಳ ಇಳಿಕೆಯು ಒಂದು ವೇಳೆ ನಿಜವೇ ಆಗಿದ್ದರೂ ಸಹ, ಇದರ ತಳದಲ್ಲಿ ಅಗತ್ಯ ಸೇವೆಗಳ ಖಾಸಗೀಕರಣದಿಂದಾಗಿ ಕೈಗೊಳ್ಳಲೇಬೇಕಾದ ದುಬಾರಿ ಖರ್ಚುಗಳಿಂದ ಬಳಲುತ್ತಿರುವ ಜನರ ಅಪಾರ ಸಂಕಟವಿದೆ. ಆದ್ದರಿಂದ, ಈ ಬಗ್ಗೆ ಹೆಮ್ಮೆಪಡುವುದು ನಿರ್ದಯತೆಯ ಪರಮಾವಧಿಯಾಗುತ್ತದೆ.

ಪ್ರೊ. ಪ್ರಭಾತ್ ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ವರಮಾನಗಳ ಅಸಮತೆಗಳಿಗೆ ಸಂಬಂಧಿಸಿದಂತೆ 61 ದೇಶಗಳ ಜಿನಿ ಗುಣಾಂಕ (Gini Coefficient-ವರಮಾನಗಳ ಅಸಮತೆಯನ್ನು ಅಳೆಯುವ ವಿಧಾನ) ಪಟ್ಟಿಯನ್ನು ವಿಶ್ವ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿದೆ. ಈ ಪಟ್ಟಿಯನ್ನು ಸಿದ್ಧಪಡಿಸುವಾಗ ಕೆಲವು ದೇಶಗಳಿಗೆ ಸಂಬಂಧಿಸಿದಂತೆ ವರಮಾನಗಳ ವಿವರಗಳನ್ನು ಮತ್ತು ಈ ವಿವರಗಳು ಲಭ್ಯವಿಲ್ಲದ ದೇಶಗಳ ಸಂದರ್ಭದಲ್ಲಿ ಆ ದೇಶಗಳ ಬಳಕೆಯ ಖರ್ಚುಗಳ ವಿವರಗಳನ್ನು ಪರಿಗಣಿಸಲಾಗಿದೆ. ಖಾಸಗಿ

ವರ್ಷ 2022ರ ಜಿನಿ ಗುಣಾಂಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಅತಿ ಕೆಳಗಿನ ಜಿನಿ ಗುಣಾಂಕವನ್ನು ಪಡೆದಿದೆ (0ದಿಂದ 100 ವರೆಗಿನ ಈ ಗುಣಾಂಕದಲ್ಲಿ, ಗುಣಾಂಕ ಸಂಖ್ಯೆಯು 0 ಆಗಿದ್ದರೆ ಅತಿ ಹೆಚ್ಚು ಸಮಾನವೆಂದು ಮತ್ತು 100 ಇದ್ದರೆ ಅತಿ ಹೆಚ್ಚು ಅಸಮಾನವೆಂದು ಸೂಚಿಸುತ್ತದೆ; ಉದಾ: ಭಾರತದ ಗುಣಾಂಕವು 25.5 ಮತ್ತು ಅಮೆರಿಕದ ಗುಣಾಂಕವು 41.3). ಜಿನಿ ಗುಣಾಂಕದ ಆಧಾರದ ಮೇಲೆ ಮೋದಿ ಸರ್ಕಾರವು ಭಾರತವನ್ನು ವಿಶ್ವದ ನಾಲ್ಕನೇ ಅತ್ಯಂತ ಸಮಾನತಾ ಅರ್ಥವ್ಯವಸ್ಥೆ ಎಂದು ಹೇಳಿಕೊಳ್ಳುತ್ತಿದೆ. ಇದೊಂದುಹಾಸ್ಯಾಸ್ಪದದಾವೆಎಂದುಹಲವಾರು ಸಂಶೋಧಕರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಹಾಗಾಗಿ, ಈ ದಾವೆಯ ಅಸಂಬದ್ಧತೆಯ ಬಗ್ಗೆ ಹೆಚ್ಚು ಸಮಯ ಕಳೆಯುವುದು ಸತ್ತ ಕುದುರೆಯನ್ನು ಹೊಡೆಯುವ ವ್ಯರ್ಥ ಪ್ರಯತ್ನವಾಗುತ್ತದೆ. ಆದ್ದರಿಂದ, ಅರ್ಥವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕೆಲವು ಅಂಶಗಳನ್ನು ಹೇಳಬೇಕಾಗುತ್ತದೆ. ಖಾಸಗಿ

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಮೂರನೇ ದಿನದ ತನಿಖೆ ಆರಂಭ

ಮೊದಲಿಗೆ, ಈ ದಾವೆಯ ಅಸಂಬದ್ಧತೆಯನ್ನು ಬಯಲು ಮಾಡಿದ ವಾದಗಳ ಸಾರಾಂಶವನ್ನು ಗಮನಿಸೋಣ. ಈ 61 ದೇಶಗಳು ಮಾತ್ರವೇ ಇಡೀ ಜಗತ್ತನ್ನು ಪ್ರತಿನಿಧಿಸುವುದಿಲ್ಲ ಎಂಬ ಅಂಶವಷ್ಟೇ ಅಲ್ಲ, ಸರ್ಕಾರಹಿಂದೆ-ಮುಂದೆನೋಡದೆನೀಡಿರುವಈ ಹೇಳಿಕೆಯ ವಿರುದ್ಧವಾಗಿ ಮೂರು ಪ್ರಮುಖ ವಾದಗಳನ್ನು ಮಾಡಲಾಗಿದೆ. ಅವೆಲ್ಲವೂ ಒಪ್ಪಬಹುದಾಗಿವೆ. ಮೊದಲನೆಯದು, ವರಮಾನಗಳ ಹಂಚಿಕೆಯಲ್ಲಿರುವ ಅಸಮಾನತೆಯು ಬಳಕೆ ವೆಚ್ಚಗಳ ಹಂಚಿಕೆಯಲ್ಲಿರುವ ಅಸಮಾನತೆಗಿಂತಲೂ ಬಹಳ ಬಹಳ ಹೆಚ್ಚಿನ ಮಟ್ಟದ್ದಾಗಿದೆ. ಖಾಸಗಿ

ಏಕೆಂದರೆ, ವರಮಾನದ ಮಟ್ಟವು ಮೇಲೆ ಮೇಲೆ ಹೋದಂತೆಯೇ, ಜೀವನ ವೆಚ್ಚಗಳಿಗೆ ಬಳಕೆ ಮಾಡುವ ವರಮಾನದ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು “ಉಳಿತಾಯ”ಕ್ಕೆ ಹೋಗುವ ವರಮಾನದ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ, ಹಂಚಿಕೆಯ ವಿಷಯದಲ್ಲಿ ಯಾವ ದೇಶವನ್ನು ನೋಡಿದರೂ ಸಹ, ಬಳಕೆ ವೆಚ್ಚದ ಹಂಚಿಕೆಯು ವರಮಾನದ ಹಂಚಿಕೆಗಿಂತ ಸದಾ ಕಡಿಮೆ ಅಸಮಾನವಾಗಿರುತ್ತದೆ. ಕೆಲವು ದೇಶಗಳ ವರಮಾನ ಹಂಚಿಕೆಯ ದತ್ತಾಂಶವನ್ನು ಮತ್ತು ಭಾರತವೂ ಸೇರಿದಂತೆ ಇತರ ದೇಶಗಳ ಬಳಕೆ ವೆಚ್ಚಗಳ ದತ್ತಾಂಶವನ್ನು ಪರಿಗಣಿಸಿ ಲೆಕ್ಕಹಾಕಿರುವ ಜಿನಿ ಗುಣಾಂಕಗಳನ್ನು ಎಲ್ಲ ದೇಶಗಳಿಗೂ ಅನ್ವಯಿಸಿ ಹೋಲಿಕೆ ಮಾಡುವುದು ತಪ್ಪೇ ತಪ್ಪು. ಆದ್ದರಿಂದ, ಈ ಕಲಬೆರಕೆ ದತ್ತಾಂಶಗಳ ಆಧಾರದ ಮೇಲೆ ವರಮಾನಗಳ ಹಂಚಿಕೆಯು ಯಾವ ದೇಶದಲ್ಲಿ ಹೆಚ್ಚು ಅಸಮಾನವಾಗಿದೆ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ.

ಜೀವನ ನಿರ್ವಹಣೆಗಾಗಿ ಸಾಲ ಮಾಡಬೇಕಾದಾಗ

ಈ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ವರಮಾನ ಹಂಚಿಕೆಯ ಕೆಳ ತುದಿಯಲ್ಲಿ ಉಳಿತಾಯಗಳೇ ಇರುವುದಿಲ್ಲ (ಶೂನ್ಯ ಉಳಿತಾಯಗಳು) ಎಂಬುದು ಮಾತ್ರವಲ್ಲ, ವಾಸ್ತವವಾಗಿ ಉಳಿತಾಯಗಳು ನಕಾರಾತ್ಮಕವಾಗಿರುತ್ತವೆ; ಅಂದರೆ, ಜನರು ಗಳಿಸುವ ವರಮಾನಗಳಿಗಿಂತಲೂ ಹೆಚ್ಚು ಹಣವನ್ನು ಜೀವನ ನಿರ್ವಹಣೆಗಾಗಿ ಖರ್ಚು ಮಾಡುತ್ತಾರೆ ಮತ್ತು ಅದಕ್ಕಾಗಿ ಸಾಲ ಪಡೆಯುತ್ತಾರೆ. ಈ ಅಂಶವು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದಾಗಿ ಉಂಟಾಗುವ ಅಗತ್ಯ ಬಳಕೆ ವೆಚ್ಚಗಳಿಗೆ ಬಹಳವಾಗಿ ಅನ್ವಯಿಸುತ್ತದೆ. ಹಾಗಾಗಿ, ಬಳಕೆ ವೆಚ್ಚದ ಅಸಮಾನತೆಗಳು ವರಮಾನ ಅಸಮಾನತೆಗಳಿಗಿಂತ ಕಡಿಮೆ ಇರುವುದಕ್ಕೆ ಇದೊಂದು ಅಧಿಕ ಕಾರಣವಾಗಿದೆ. ಆದ್ದರಿಂದ, ಕಲಬೆರಕೆ ದತ್ತಾಂಶದಿಂದ ಕೂಡಿದ ಜಿನಿ ಗುಣಾಂಕಗಳನ್ನು ಹೋಲಿಸುವ ಮೂಲಕ ತೆಗೆದುಕೊಳ್ಳುವ ತೀರ್ಮಾನಗಳು ಇನ್ನಷ್ಟು ದೋಷಭರಿತವಾಗುತ್ತವೆ.

ಆದಾಯ ವಿತರಣೆಯ ಕೆಳಗಿನ ತುದಿಯಲ್ಲಿರುವವರು ಉಳಿತಾಯ ಮಾಡದಿರುವುದು ಒಂದು ಸತ್ಯ ಸಂಗತಿಯೇ ಹೌದು. ಸಾಂದರ್ಭಿಕವಾಗಿ ಒಂದು ವಾಸ್ತವಾಂಶವನ್ನು ಹೇಳುವುದಾದರೆ, ಕೇರಳದ ಎಡ ರಂಗ ಸರ್ಕಾರವು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ರೈತರ ಸಾಲ ಪರಿಹಾರ ಮಸೂದೆಯನ್ನು 2006ರಲ್ಲಿ ತಂದಾಗ, ಸಂಕಷ್ಟದಲ್ಲಿದ್ದ ರೈತರ ಸಾಲದ ಗಮನಾರ್ಹ ಪಾಲು ವೈದ್ಯಕೀಯ ಉದ್ದೇಶಗಳಿಗಾಗಿ ಉಂಟಾಗಿದೆ ಎಂಬುದು ಕಂಡುಬAದಿತ್ತು (ಉತ್ಪಾದನಾ ಸಾಲ ಹೊಂದಿರುವವರಿಗೆ ಮಾತ್ರ ಪರಿಹಾರ ಒದಗಿಸಬೇಕು, ಬಳಕೆ ಸಾಲವನ್ನು ಹೊಂದಿರುವವರಿಗೆ ಅಲ್ಲ ಎಂಬ ನೆಲೆಯಲ್ಲಿ ಕೆಲವರು ಈ ವಾದವನ್ನು ಮಸೂದೆಯ ವಿರುದ್ಧವಾಗಿ ಬಳಸಿದ್ದರು ಕೂಡ).

ಎರಡನೆಯದಾಗಿ, ವರಮಾನಗಳ ವಿತರಣೆಗೆ ಸಂಬAಧಿಸಿದ ಮಾದರಿ ಸಮೀಕ್ಷೆಯಲ್ಲೇ ಇರಲಿ ಆದಾಯ ಅಥವಾ ಬಳಕೆ ವಿತರಣೆಗೆ ಸಂಬಂಧಿಸಿದ ಮಾದರಿ ಸಮೀಕ್ಷೆಯಲ್ಲೇ ಇರಲಿ, ಮೇಲ್ತುದಿಯ ಅತಿ ಶ್ರೀಮಂತರ ಮತ್ತು ಕಡು ಬಡವರ ಪ್ರಾತಿನಿಧ್ಯವು ಬಹಳ ಕಡಿಮೆ ಇರುತ್ತದೆ (ಏಕೆಂದರೆ, ಪ್ರಾಮುಖ್ಯತೆಯ ಹೊರತಾಗಿಯೂ ಅವರ ಸಂಖ್ಯೆ ಬಹಳ ಸಣ್ಣದೇ ಇರುತ್ತದೆ). ಆದ್ದರಿಂದ ಸಂಶೋಧಕರು ಈ ದೋಷವನ್ನು ಸರಿಪಡಿಸಲು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ, ರಾಷ್ಟ್ರೀಯ ಮಾದರಿ ಸಮೀಕ್ಷೆಯು ಪ್ರಸ್ತುತಪಡಿಸಿದ ದತ್ತಾಂಶವನ್ನು ಆಧರಿಸಿ ಭಾರತದ ಜಿನಿ ಗುಣಾಂಕವನ್ನು ಲೆಕ್ಕ ಹಾಕಿರುವ ವಿಶ್ವ ಬ್ಯಾಂಕ್ ಈ ದೋಷವನ್ನು ಸರಿಪಡಿಸಿಲ್ಲ. ಇತರ ದೇಶಗಳ ವಿಷಯದಲ್ಲೂ ಈ ಮಾತು ನಿಜ.

ಅಸಮಾನತೆ ಮತ್ತು ಜಿನಿ ಗುಣಾಂಕ

ಇಡೀ ಹಂಚಿಕೆಗೆ ಸಂಬಂಧಿಸಿದ ಜಿನಿ ಗುಣಾಂಕದ ಬಳಕೆಯ ಬಗ್ಗೆಯೇ ಮೂರನೇ ಆಕ್ಷೇಪಣೆ ವ್ಯಕ್ತವಾಗಿದೆ. ಉದಾಹರಣೆಗೆ, ಒಟ್ಟು ವರಮಾನದಲ್ಲಿ ಮೇಲ್ತುದಿಯ ಶೇ. 1ರಷ್ಟು ಮಂದಿಯ ಪಾಲು ಏರಿಕೆಯಾದರೆ, ಮತ್ತು ಅದೇ ಸಮಯದಲ್ಲಿ ವರಮಾನವು ಕೆಳಗಿನಿಂದ ಮೂರನೇ ದಶಮಾಂಶ ಭಾಗದಿಂದ ಐದನೇ ದಶಮಾಂಶಕ್ಕೆ ಸ್ವಲ್ಪ ಹೊರಳಿದರೆ, ಮತ್ತು, ಉಳಿದವರಿಗೆ ನಷ್ಟವನ್ನುಂಟುಮಾಡಿ ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾದರೂ ಸಹ, ಜಿನಿ ಗುಣಾಂಕವು ಒಂದು ಇಳಿಕೆಯನ್ನು ತೋರಿಸಬಹುದು. ಅಂತಹ ಒಂದು ಪರಿಸ್ಥಿತಿಯನ್ನು ವರಮಾನಗಳ ಅಸಮತೆಯ ಏರಿಕೆ ಎಂದು ಹೆಚ್ಚಿನವರು ಪರಿಗಣಿಸುತ್ತಾರೆ. ಆದರೆ, ಜಿನಿ ಗುಣಾಂಕವು ವರಮಾನಗಳ ಅಸಮತೆಯ ಇಳಿಕೆಯನ್ನು ತೋರಿಸುತ್ತದೆ.

ಅಸಮಾನತೆಯನ್ನು ಅಳತೆಮಾಡಲು ಜಿನಿ ಗುಣಾಂಕವನ್ನು ತೆಗೆದುಕೊಳ್ಳುವ ಕ್ರಮದ ಅಸಂಬದ್ಧತೆಯನ್ನು ಒಂದು ಸರಳ ಪರಿಗಣನೆಯ ಮೂಲಕ ಸ್ಪಷ್ಟಪಡಿಸಬಹುದು.ಜಿನಿ ಗುಣಾಂಕವು ಒಂದು ಅಳತೆಯಾಗಿ ಅದು ಒಂದು ವೇಳೆ ತೃಪ್ತಿಕರವಾಗಿದ್ದರೆ ಮತ್ತು ಭಾರತದಲ್ಲಿ ವರಮಾನಗಳ ಅಸಮಾನತೆಯು ನಿಜಕ್ಕೂ ತುಂಬಾ ಕೆಳ ಮಟ್ಟದಲ್ಲಿದ್ದರೆ, ಆಗ ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆಗಳು ಹೆಚ್ಚುತ್ತಿವೆಎಂಬುದನ್ನು ವಿವರಿಸುವುದು ಕಷ್ಟವಾಗುತ್ತದೆ.

ದೇಶದಲ್ಲಿ ಜಿಡಿಪಿ ಬೆಳವಣಿಗೆಯ ದರವು ಉನ್ನತವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವುದರಿಂದ, ಅದೂ ಸಹ ಎಲ್ಲ ಪ್ರಮುಖ ದೇಶಗಳಲ್ಲಿರುವುದಕ್ಕಿಂತಲೂ ಅತ್ಯಧಿಕ ದರದಲ್ಲಿ ಜಿಡಿಪಿ ಬೆಳೆಯುತ್ತಿದೆ ಎಂದು ತೋರುತ್ತಿರುವುದರಿಂದ, ಭಾರತದಲ್ಲಿ ಅಸಮಾನತೆಯು ನಿಜಕ್ಕೂ ಇಳಿಕೆಯಾಗಿದ್ದರೆ, ಜನಸಂಖ್ಯೆಯ ಬಡ ವಿಭಾಗಗಳ ವರಮಾನಗಳೂ ಸಹ ಗಮನಾರ್ಹವಾಗಿ ಏರಿಕೆಯಾಗಬೇಕಿತ್ತು. ಮತ್ತು, ವರಮಾನಗಳ ಏರಿಕೆಯೊಂದಿಗೆ ನೇರ ಸೇವನೆಯ ಮೂಲಕ ಮತ್ತು ಪಶು ಆಹಾರಗಳ ಮೂಲಕ ಆಹಾರ ಧಾನ್ಯಗಳ ಬಳಕೆಯು ಏರಿಕೆಯಾಗುವುದರಿಂದ (ಬೇರೆ ಬೇರೆ ವರಮಾನ ಗುಂಪುಗಳ ಧಾನ್ಯ ಸೇವನೆಯ ಏರಿಕೆಯು ಭಾರತದ ಮಟ್ಟಿಗೂ ನಿಜ), ಭಾರತವು ವಿಶ್ವ ಹಸಿವಿನ ಸೂಚ್ಯಂಕದ 125 ದೇಶಗಳಲ್ಲಿ ಕೆಳಗಿನ 107ನೇ ಸ್ಥಾನದಲ್ಲಿರುವುದು ಸಾಧ್ಯವಿಲ್ಲ.

ಭಾರತದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳು ಏರಿಕೆಯಾಗುವುದು ಸಾಧ್ಯವಿಲ್ಲ. ಹಿಂದಿನ ಯೋಜನಾ ಆಯೋಗವು ಬಡತನವನ್ನು ವ್ಯಾಖ್ಯಾನಿಸಲು ಬಳಸುತ್ತಿದ್ದ ಕ್ಯಾಲೋರಿ ಮಾನದಂಡ ಮಟ್ಟಕ್ಕಿಂತ ಕೆಳಗಿನ ಸೇವನೆಯ ಜನಸಂಖ್ಯೆಯ ಶೇಕಡಾವಾರು ಹೆಚ್ಚಾಗುವುದು ಸಾಧ್ಯವಿಲ್ಲ. ಸರ್ಕಾರದ ದತ್ತಾಂಶಗಳೇ ಹೇಳುವ ಪ್ರಕಾರ ಆರೋಗ್ಯ ಸೂಚಕಗಳು ಹದಗೆಡುತ್ತಿರುವ ಅಂಶದೊಂದಿಗೆ ಜಿಡಿಪಿ ಬೆಳವಣಿಗೆಯ ದಾವೆಯನ್ನು ಸಮನ್ವಯಗೊಳಿಸುವ ಏಕೈಕ ಮಾರ್ಗವೆಂದರೆ, ವರಮಾನಗಳ ಹಂಚಿಕೆ ಹದಗೆಡುತ್ತಿದೆ ಎಂದು ಭಾವಿಸಿಕೊಳ್ಳುವುದೇ ಆಗುತ್ತದೆ. ಈ ಅಂಶವನ್ನು ವಿಶ್ವಬ್ಯಾಂಕ್ ಹೇಳುವಂತೆ ಜಿನಿ ಗುಣಾಂಕದ ಚಲನೆಯು ತೋರಿಸದೆ ಹೋದರೆ, ವರಮಾನಗಳ ಅಸಮತೆಯನ್ನು ಅಳೆಯುಲು ಜಿನಿ ಗುಣಾಂಕವು ಒಂದು ತಪ್ಪು ವಿಧಾನವಾಗುತ್ತದೆ.

ಥಾಮಸ್ ಪಿಕೆಟ್ಟಿ ಮತ್ತು ಇತರರು ನಡೆಸುತ್ತಿರುವ ಸಂಸ್ಥೆಯ ವಿಶ್ವ ಅಸಮಾನತೆ ಡೇಟಾಬೇಸ್‌ನ ಅಂಕಿಅAಶಗಳು ಸೂಚಿಸುವುದು ಇದನ್ನೇ. ರಾಷ್ಟ್ರೀಯ ವರಮಾನದಲ್ಲಿ ಉನ್ನತ ವರ್ಗಗಳು ಹೊಂದಿರುವ ಪಾಲಿನ ಮೂಲಕ ಅಳೆಯಲ್ಪಟ್ಟ ವರಮಾನ ಅಸಮಾನತೆಯು ತೀವ್ರವಾಗಿ ಏರುತ್ತಿರುವುದನ್ನು ಅವರು ತೋರಿಸುತ್ತಾರೆ. ಅವರ ಅಂಕಿ-ಅಂಶಗಳ ಪ್ರಕಾರ, 2023-24ರಲ್ಲಿ ರಾಷ್ಟ್ರೀಯ ವರಮಾನದಲ್ಲಿ ದೇಶದ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಮಂದಿಯು ಹೊಂದಿದ ಪಾಲು ಶೇ. 23ರಷ್ಟಿದ್ದು, ಅದು ಕಳೆದ ನೂರು ವರ್ಷಗಳ ಕಾಲದಲ್ಲಿ ಇದುವರೆಗೆ ಕಂಡ ಅತ್ಯಧಿಕ ಮಟ್ಟವಾಗಿದೆ!

ಅಗತ್ಯ ಸೇವೆಗಳ ಖಾಸಗೀಕರಣದ ಪರಿಣಾಮ

ಸರ್ಕಾರದ ದಾವೆಗಳ ಬಗ್ಗೆ ಮಾಡಿರುವ ಈ ಟೀಕೆಗಳಲ್ಲಿ ಒಂದು ಪ್ರಮುಖ ಅಂಶ ಬೆಳಕಿಗೆ ಬಂದಿಲ್ಲ. ನವ ಉದಾರವಾದದ ಪ್ರಮುಖವಾದ ಒಂದು ಲಕ್ಷಣವೆಂದರೆ, ಅದು ಸಾರ್ವಜನಿಕ ಉದ್ಯಮಗಳ ಖಾಸಗೀಕರಣವೇ. ಕೆಲ ವರ್ಷಗಳ ಹಿಂದೆ ಸಾರ್ವಜನಿಕ ವಲಯವು ಒದಗಿಸುತ್ತಿದ್ದ ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸೇವೆಗಳನ್ನು ಖಾಸಗೀಕರಣ ಮಾಡಲಾಗಿದೆ. ಈ ಬದಲಾವಣೆಯು ವರಮಾನ ಹಂಚಿಕೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಅವುಗಳನ್ನು ಈ ಕೆಳಗೆ ಕಾಣಬಹುದು.

ಈಗ ನಾವು ವರಮಾನ ಹಂಚಿಕೆಯು, ಅದನ್ನು ಅಳೆಯಲು ಯಾವ ಅಳತೆಯ ವಿಧಾನವನ್ನು ಬಳಸಿದಾಗಲೂ, ಬದಲಾಗದೆ ಉಳಿಯುವ ಎರಡು ದಿನಾಂಕಗಳ ನಡುವಿನ ಅವಧಿಯನ್ನು ನೋಡೋಣ. ಜನಸಂಖ್ಯೆಯ ಬೇರೆ ಬೇರೆ ಬೇರೆ ವಿಭಾಗಗಳು ವರಮಾನವನ್ನು ಆರಂಭಿಕ ವರ್ಷದಲ್ಲಿ ಬೇರೆ ಬೇರೆ ಸರಕುಗಳ ಮೇಲೆ ಖರ್ಚು ಮಾಡುತ್ತಿದ್ದವು: ಉನ್ನತ ವರಮಾನದ ಗುಂಪುಗಳು ದುಬಾರಿ ಖಾಸಗಿ ಆರೋಗ್ಯ ರಕ್ಷಣೆಗಾಗಿ ಖರ್ಚು ಮಾಡಿದರೆ, ಬಡವರು ಅಗ್ಗದ ಸಾರ್ವಜನಿಕ ಆರೋಗ್ಯ ರಕ್ಷಣೆ ಪಡೆಯುತ್ತಿದ್ದರು. ಈಗ, ಆರಂಭಿಕ ಮತ್ತು ಅಂತಿಮ ವರ್ಷಗಳ ನಡುವೆ ಸಾರ್ವಜನಿಕ ಆರೋಗ್ಯ ಸೇವೆಗಳು ಒಂದು ವೇಳೆ ಕ್ಷೀಣಿಸಿದ್ದರೆ, ಶ್ರೀಮಂತರಲ್ಲದ ಅನೇಕ ಮಂದಿ ಖಾಸಗಿ ಆರೋಗ್ಯ ಸೇವೆಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಆಗ, ಈ ಎರಡು ದಿನಾಂಕಗಳ ನಡುವೆ ಕೆಳ ತುದಿಯಲ್ಲಿ ನಿಜ ವರಮಾನವು ಇಳಿಕೆಯಾಗುವಷ್ಟು ಕೆಟ್ಟದಾಗಿದ್ದರೂ ಹಣ ವರಮಾನ ಹಂಚಿಕೆಯು ಬದಲಾಗದೆ ಉಳಿಯುತ್ತಿತ್ತು (ನಮ್ಮಲ್ಲಿ ಲಭ್ಯವಿರುವುದು ಹಣ ವರಮಾನ ಹಂಚಿಕೆ ದತ್ತಾಂಶಗಳು ಮಾತ್ರ) ಮತ್ತು ಎಲ್ಲ ಬೆಲೆಗಳೂ ಬದಲಾಗದೆ ಉಳಿಯುತ್ತಿದ್ದವು.

ಅಗತ್ಯ ಸೇವೆಗಳ ಖಾಸಗೀಕರಣದಿಂದಾಗಿ ಬಡವರ ನಿಜ ವರಮಾನವು ಹದಗೆಡುವುದು ಎರಡು ರೀತಿಯಲ್ಲಿ ಅಥವಾ ಎರಡೂ ರೀತಿಗಳಲ್ಲೂ ವ್ಯಕ್ತಗೊಳ್ಳುತ್ತದೆ: ದುಬಾರಿ ಖಾಸಗಿ ಆರೋಗ್ಯ ಸೇವೆಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಸಲುವಾಗಿ ಒಂದೋ ಅವರು ಆಹಾರ ಸೇವನೆಯ ಖರ್ಚುಗಳಲ್ಲಿ ಕಡಿತ ಮಾಡಬೇಕಾಗುತ್ತದೆ; ಅಥವಾ ದೊಡ್ಡ ಮೊತ್ತದ ಸಾಲ ಪಡೆಯಬೇಕಾಗುತ್ತದೆ; ಅಥವಾ, ಬಹುತೇಕವಾಗಿ ಕಂಡುಬರುವಂತೆ, ಎರಡನ್ನೂ ಮಾಡಬೇಕಾಗುತ್ತದೆ, ಅಂದರೆ, ಆಹಾರ ಖರ್ಚುಗಳ ಕಡಿತದ ಜೊತೆಗೆ ಸಾಲವನ್ನೂ ಮಾಡಬೇಕಾಗುತ್ತದೆ. ಸಾಲ ಮಾಡಿದ ಸಂದರ್ಭದಲ್ಲಿ, ಬಳಕೆ ಖರ್ಚುಗಳ ಹಂಚಿಕೆಯು ಅಸಮಾನತೆಯ ಇಳಿಕೆಯನ್ನು ತೋರಿಸುತ್ತಿತ್ತು.

ಇದನ್ನೂ ನೋಡಿ: ಶಾಲೆ, ಕಾಲೇಜು ಮತ್ತು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ – ಎಸ್‌ಎಫ್‌ಐ ಪ್ರತಿಭಟನೆ Janashakthi

ಎರಡು ದಿನಾಂಕಗಳ ನಡುವೆ ಹಣ ವರಮಾನದ ಹಂಚಿಕೆಯು ಬದಲಾಗದೆ ಇರುವುದರಿಂದ, ಈ ಅವಧಿಯಲ್ಲಿ ಬಡವರು ತಮ್ಮ ಆರೋಗ್ಯ ಅಗತ್ಯಗಳಿಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ದುಬಾರಿ ಖಾಸಗಿ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಹಣ ಹೊಂದಿಸಿಕೊಳ್ಳಲು ಸಾಲವನ್ನು ಆಶ್ರಯಿಸುವುದರಿಂದಾಗಿ, ಬಳಕೆ ಖರ್ಚುಗಳ ಅಸಮಾನತೆ ಇಳಿಕೆಯಾಗಿದೆ ಎಂದು ತೋರುತ್ತದೆ. ಆದರೆ, ನಾವು ಗಮನಿಸಿದ ಈ ಬಳಕೆ ಖರ್ಚುಗಳ ಅಸಮಾನತೆಯ ಇಳಿಕೆಯ ವಿದ್ಯಮಾನವು, ವಾಸ್ತವವಾಗಿ, ತದ್ವಿರುದ್ಧವಾಗಿದೆ, ಅಂದರೆ, ಇದು ನಿಜ ವರಮಾನ ಅಸಮಾನತೆ ಏರಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ, ಸರ್ಕಾರವು ಈ ಬಳಕೆ ಖರ್ಚುಗಳ ಅಸಮಾನತೆಯ ಇಳಿಕೆಯೇ ವರಮಾನ ಅಸಮಾನತೆಯ ಇಳಿಕೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸುತ್ತದೆ ಮತ್ತು ಅದಕ್ಕಾಗಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ.

ಇದು ಕೇವಲ ಒಂದು ಸೈದ್ಧಾಂತಿಕ ಸಾಧ್ಯತೆ ಮಾತ್ರವಲ್ಲ; ಸಮಕಾಲೀನ ನವ ಉದಾರವಾದಿ ಭಾರತದ ಸಂದರ್ಭದಲ್ಲಿ ಇದೊಂದು ಮುಖ್ಯವಾದ ಮತ್ತು ನೈಜ ವಿದ್ಯಮಾನವೂ ಹೌದು. ವೈದ್ಯಕೀಯ ತುರ್ತು ಪರಿಸ್ಥಿತಿ-ಸಂದರ್ಭಗಳಲ್ಲಿ ತಮ್ಮ ಮಕ್ಕಳ ಚಿಕಿತ್ಸೆಗಾಗಿ ದೆಹಲಿಗೆ ಬರುವ ಉತ್ತರ ಭಾರತದ ರೈತರು, ಕಿಕ್ಕಿರಿದ ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ಕೂರುವುದು ಸಾಧ್ಯವಾಗದಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ; ಈ ಆಸ್ಪತ್ರೆಗಳ ವೆಚ್ಚಗಳಿಗಾಗಿ ಅವರು ಸಾಲ ತೆಗೆದುಕೊಳ್ಳಬೇಕಾಗುತ್ತದೆ ಅಥವಾ ತಮ್ಮ ಭೂಮಿಯನ್ನು ಮಾರಾಟ ಮಾಡಬೇಕಾಗುತ್ತದೆ. ಇಂಥಹ ಸಂದರ್ಭ-ಪರಿಸ್ಥಿತಿಗಳಲ್ಲಿ ಬಹುತೇಕ ಮಂದಿ ತಮ್ಮ ಭೂಮಿಯನ್ನು ಮಾತ್ರವಲ್ಲ, ತಮ್ಮ ಕಂದಮ್ಮಗಳನ್ನೂ ಸಹ ಕಳೆದುಕೊಳ್ಳುತ್ತಾರೆ ಎಂಬ ಹೃದಯ ವಿದ್ರಾವಕ ವರದಿಗಳು ಪತ್ರಿಕೆಗಳಲ್ಲಿ ಬಂದಿವೆ.

ಖಾಸಗಿ ವೆಚ್ಚಗಳ ಅಸಮಾನತೆಗಳ ಇಳಿಕೆಯು ಒಂದು ವೇಳೆ ನಿಜವೇ ಆಗಿದ್ದರೂ ಸಹ, ಈ ಇಳಿಕೆಯ ತಳದಲ್ಲಿ ಅಗತ್ಯ ಸೇವೆಗಳ ಖಾಸಗೀಕರಣದಿಂದಾಗಿ ಕೈಗೊಳ್ಳಲೇಬೇಕಾದ ದುಬಾರಿ ಖರ್ಚುಗಳಿಂದ ಬಳಲುತ್ತಿರುವ ಜನರ ಅಪಾರ ಸಂಕಟವಿದೆ. ಆದ್ದರಿಂದ, ಈ ಖಾಸಗಿ ವೆಚ್ಚಗಳ ಅಸಮಾನತೆಗಳ ಇಳಿಕೆಯ ಬಗ್ಗೆ ಸರ್ಕಾರವು ಏನೋ ಒಂದು ದಿಗ್ವಿಜಯ ಸಾಧಿಸಿದಂತೆ ಹೆಮ್ಮೆಪಡುವುದು ನಿರ್ದಯತೆಯ ಪರಮಾವಧಿಯಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *