ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯು ಬಸ್ ಪಾಸ್ ಬಗೆಗಿನ ಗೊಂದಲದಿಂದಾಗಿ ಸಾಕಷ್ಟು ಮಂದಿ ಹೆಚ್ಚಿನ ಬೆಲೆ ನೀಡಿ ಬಸ್ ಪಾಸ್ ಖರೀದಿ ಮಾಡಿದ್ದಾರೆ. ಬಿಎಂಟಿಸಿ ಸಂಸ್ಥೆಯು ಲಾಕ್‌ಡೌನ್ ಹಾಗೂ ಬಸ್ ಸಂಚಾರ ಬಂದ್ ಹಿನ್ನೆಲೆಯಲ್ಲೆ ಏಪ್ರಿಲ್ ಬಸ್ ಪಾಸ್ ಅನ್ನು ಜೂನ್ 8ರವರೆಗೆ ವಿಸ್ತರಣೆ ಮಾಡಿತ್ತು.
ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಏಪ್ರಿಲ್ 7ರಿಂದ ಸತತ 15 ದಿನ ಸಾರಿಗೆ ಮುಷ್ಕರ ನಡೆದಿತ್ತು. ನಂತರ ಕೋವಿಡ್ ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜೂನ್ 27ರಿಂದ ರಾಜ್ಯವ್ಯಾಪಿ ಲಾಕ್‌ಡೌನ್ ಜಾರಿಗೊಳಿತು. ಇದರಿಂದ ಸಾರಿಗೆ ಸಂಚಾರವಿಲ್ಲದೆ ಬಸ್‌ಗಳು ಸ್ತಬ್ಧಗೊಂಡಿದ್ದವು.
ಇದನ್ನು ಓದಿ: ಬಿಎಂಟಿಸಿ ಪ್ರಯಾಣಿಕರ ಬಸ್ ಪಾಸ್ ಅವಧಿ ವಿಸ್ತರಣೆ
ಬಸ್‌ಗಳ ಸಂಚಾರ ಮತ್ತೆ ಆರಂಭಗೊಂಡಿದ್ದು ಜೂನ್ 22ರ ನಂತರ. ಬಸ್‌ಪಾಸ್‌ಗಳ ಬಗ್ಗೆ ಸಾಕಷ್ಟುಗೊಂದಲಗಳು ಇದ್ದ ಕಾರಣದಿಂದ ಜೂನ್ 20ರಂದು ಹೇಳಿಕೆ ನೀಡಿದ ಸಾರಿಗೆ ಸಂಸ್ಥೆಯು ಪತ್ರಿಕಾ ಹೇಳಿಕೆಯನ್ನು ನೀಡಿ ʻʻಮುಷ್ಕರದ ಅವಧಿ ಹಾಗೂ ಕೋವಿಡ್-19 ನಿರ್ಬಂಧದಿಂದ ಮಾಸಿಕ ಪಾಸುಗಳನ್ನು ಬಳಕೆ ಮಾಡದೇ ಇರುವ ಕಾರಣ, ಏಪ್ರಿಲ್-2021 ತಿಂಗಳ ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್ ಗಳ ಮಾನ್ಯತಾ ಅವಧಿಯನ್ನು ದಿನಾಂಕ 08.07.2021 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ನೀಡಿತು.
ಲಾಕ್‌ಡೌನ್ ತೆರವಾದ ನಂತರವೂ ಬಸ್‌ಗಳಲ್ಲಿ ಜನಸಂಚಾರ ವಿರಳವೇ ಆಗಿತ್ತು. ಹಲವು ದಿನಗಳು ಹೀಗೆ ಮುಂದುವರೆದಿತ್ತು. ಜೂನ್ 8ರ ನಂತರ ಬಸ್‌ಪಾಸ್ ಮುಂದಿನ ಕ್ರಮದ ಬಗ್ಗೆ ಇದ್ದ ಗೊಂದಲವೂ ಪರಿಹಾರ ಆಯಿತು. ಅಂದರೆ, ಏಪ್ರಿಲ್ ತಿಂಗಳ ಬಸ್‌ಪಾಸ್ ಹೊಂದಿರುವರು ಜೂನ್ ತಿಂಗಳ ಪಾಸ್ ಪಡೆಯಬೇಕಾದಲ್ಲಿ ರೂ. 800 ನೀಡಿ ಪಾಸ್ ಪಡೆಯಬಹುದೆಂದು ಸ್ಪಷ್ಟಿಕರಿಸಿತ್ತು.
ಜೂನ್ 1 ರಿಂದ ಪಾಸ್ ಅವಧಿ ವಿಸ್ತರಣೆಗೊಂಡಿರುವ ಬಗ್ಗೆ ಮಾಹಿತಿ ಇಲ್ಲದ ನೂರಾರು ಮಂದಿ ಎಂದಿನಂತೆ ರೂ.1050 ನೀಡಿ ಪಾಸ್ ಖರೀದಿ ಮಾಡಿದ್ದಾರೆ. ಜೂನ್ 8ರ ನಂತರವೂ ಬಹಳಷ್ಟು ಜನರು ರೂ.800 ಶುಲ್ಕವನ್ನು ನೀಡಿ ಬಸ್ ಪಾಸ್ ಖರೀದಿಸುವ ಬದಲು ರೂ.1050 ನೀಡಿರುವ ಘಟನೆಗಳು ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ವಿಜಯನಗರ, ಯಶವಂತಪುರ, ಮೈಸೂರು ರಸ್ತೆ ಹೀಗೆ ಹಲವು ಬಿಎಂಟಿಸಿ ಕೇಂದ್ರಗಳಲ್ಲಿ ನಡೆದಿದೆ.
ಇದನ್ನು ಓದಿ: ಸೋಮುವಾರದಿಂದ ಬಿಎಂಟಿಸಿ ಬಸ್ ಸಂಚಾರಕ್ಕೆ ಬಿಬಿಎಂಪಿ ಒಪ್ಪಿಗೆ
ನಗರದಲ್ಲಿ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಿಕೆಯಾಗಿ ಕಾರ್ಯಚಟುವಟಿಕೆಗಳು ಸಕ್ರಿಯಗೊಂಡಿದ್ದೆ ಕಳೆದ ಎರಡು ಮೂರು ದಿನಗಳಿಂದ. ಕೋವಿಡ್ ನಿಯಮಗಳಿಂದಾಗಿ ಸರಿಯಾದ ಸಮಯಕ್ಕೆ ಬಸ್‌ಗಳು ಸಿಗುವುದೇ ಕಷ್ಟವಾಗಿರುವುದರಿಂದ ಬದಲಾದ ನಿಯಮಗಳ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದೆ ಮೋಸ ಹೋಗಿದ್ದಾರೆ. ಒಂದು ಕಡೆ ಕೆಲಸ ಒತ್ತಡದಿಂದ ಬಸ್‌ಪಾಸ್ ದರಗಳ ಬಗ್ಗೆ ಗೊಂದಲ ಪರಿಹಾರವಾಗದೆ ಹೆಚ್ಚಿನ ದರ ನೀಡಿರುವ ಘಟನೆಗಳು ನಡೆದಿವೆ.
ಬಸ್ ಅವಧಿ ವಿಸ್ತರಣೆ ಹಾಗೂ ಏಪ್ರಿಲ್ ತಿಂಗಳ ಪಾಸ್ ಇದ್ದವರು ರೂ.800 ನೀಡಿ ಜೂನ್ ತಿಂಗಳ ಪಾಸ್ ಖರೀದಿಸಬೇಕೆಂದು ಕೇವಲ ಪತ್ರಿಕಾ ಹೇಳಿಕೆ ನೀಡಿದ್ದ ಬಿಎಂಟಿಸಿ ಸಂಸ್ಥೆಯು ಬೇರೆ ಯಾವುದೇ ಅರಿವು ಮೂಡಿಸುವ ಕೆಲಸವನ್ನು ಮಾಡದಿರುವುದರಿಂದ ಬೆಂಗಳೂರು ನಗರದ ನೂರಾರು ಬಂದಿ ಬಸ್‌ಪಾಸ್‌ಗಾಗಿ ಹೆಚ್ಚಿನ ದರವನ್ನು ನೀಡಬೇಕಾಗಿ ಬಂದಿದೆ. ಅಲ್ಲದೆ ಬಿಎಂಟಿಸಿ ಸಂಸ್ಥೆಯು ರೂ.800 ಬಗ್ಗೆ ಕೇವಲ ಸೀಲ್ ಹಾಕಿ ನೀಡುತ್ತಿದ್ದಾರೆ.
ಏಪ್ರಿಲ್ ತಿಂಗಳ ಪಾಸ್ ಇದ್ದವರು ಜೂನ್ ತಿಂಗಳ ಪಾಸ್ ಖರೀದಿ ಮಾಡಲು ಬಂದಾಗಲೂ ತಮಗೆ ತಿಳಿಸದೆ ನಿಗದಿತ ದರವನ್ನೇ ಪಡೆದುಕೊಂಡು ಪಾಸ್ ನೀಡಿದ್ದಾರೆ ಎಂದು ಹಲವು ಬಿಎಂಟಿಸಿ ಕೇಂದ್ರಗಳಲ್ಲಿ ಸಾರ್ವಜನಿಕರು ಸಿಬ್ಬಂದಿಗಳ ವಿರುದ್ಧ ಆಕ್ರೋಶಗೊಂಡರು.
ಇದರಿಂದ ನೂರಾರು ಜನರು ಹೆಚ್ಚುವರಿಯಾಗಿ ರೂ.250ರಷ್ಟು ಹಣವನ್ನು ವೆಚ್ಚಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ಜನರಲ್ಲಿ ಅಸಮಾಧಾನ ಮೂಡಿ, ಸಾರಿಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹೆಚ್ಚುವರಿ ಹಣವು ಯಾರಪಾಲಾಯಿತು ಎಂಬುದೇ ಈಗ ಪ್ರಶ್ನೆಯಾಗಿದೆ. ಇದರಲ್ಲಿ ಸಾರಿಗೆ ಸಂಸ್ಥೆಯೇ ಜನರನ್ನು ದಿಕ್ಕು ತಪ್ಪಿಸಿತೆ ಅಥವಾ ಸಂಸ್ಥೆಯ ಕೆಲ ಸಿಬ್ಬಂದಿಗಳು ಇದರಲ್ಲಿ ಭಾಗಿಯಾದರೆ ಎಂಬ ಅನುಮಾನಗಳು ಮೂಡಿವೆ.
ವಿಶೇಷ ವರದಿ: ವಿನೋದ ಶ್ರೀರಾಮಪುರ