ಬೆಂಗಳೂರು: ಬಿಎಂಟಿಸಿ ಬಸ್ಸೊಂದು ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಪಾರಾಗಿದ್ದಾರೆ.
ದೀಪಾಂಜಲಿನಗರ ಡಿಪೋಗೆ ಸೇರಿದ ಬಸ್ಸು ಸುಟ್ಟು ಕರಕಲಾಗಿದೆ. ಕೃಷ್ಣರಾಜೇಂದ್ರ ಮಾರ್ಕೆಟ್ ಕಡೆ ತೆರಳುತ್ತಿದ್ದ ಬಿಎಂಟಿಸಿ ಬಸ್ಸು ಚಾಮರಾಜ ಪೇಟೆಯ ಮಕ್ಕಳಕೂಟ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ಸಿನಿಂದ ಪ್ರಯಾಣಿಕರು ಕೂಡಲೇ ಕೆಳಗಿಳಿದು ಬಚಾವಾಗಿದ್ದಾರೆ.
ಬಸ್ಸು ಚಲಿಸುತ್ತಿದ್ದ ಸಂದರ್ಭದಲ್ಲಿ ಆರಂಭದಲ್ಲಿ ಹೊಗೆ ಕಾಣಿಸಿಕೊಂಡಿದೆ. ಡ್ರೈವರ್ ಕೂಡಲೇ ಹೊಗೆ, ಬೆಂಕಿ ಎಂದು ಕಿರುಚಿದ್ದಾರೆ. ಈ ವೇಳೆ ಬಸ್ಸಿನಿಂದ ಕೆಳಗಿಳಿದ ಡ್ರೈವರ್ ಹಾಗೂ ಕಂಡಕ್ಟರ್ ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಯಲು ನೆರವಾಗಿದ್ದಾರೆ. ನೋಡನೋಡುತ್ತಿದ್ದಂತೆ ಬಿಎಂಟಿಸಿ ಬಸ್ ಬೆಂಕಿಯಿಂದ ಹೊತ್ತಿ ಉರಿದಿದೆ.
ಸುಮಾರು 40 ಪ್ರಯಾಣಿಕರಿದ್ದ ಕೆಎ 57 ಎಫ್ 1592 ನಂಬರ್ ನ ಬಿಎಂಟಿಸಿ ಬಸ್ ಹೊಸಕೆರೆಹಳ್ಳಿಯಿಂದ ಕೆ.ಆರ್. ಮಾರುಕಟ್ಟೆಗೆ ಬರುತ್ತಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೆ, ಪ್ರಯಾಣಿಕರನ್ನು ಕೆಳಗಿಳಿಸಿ ಬೇರೆ ಬಸ್ ವ್ಯವಸ್ಥೆ ಕಲ್ಪಿಸುವುದರಲ್ಲಿ ಕಂಡಕ್ಟರ್ ಮಗ್ನರಾದರು. ಬಸ್ಸಿನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಟಿಕೆಟ್ ಹಾಗೂ ದಿನದ ಪಾಸುಗಳು ಬೆಂಕಿಗೆ ಆಹುತಿಯಾಗಿವೆ.