ಗಾರಿಮೆಲ್ಲ ಸುಬ್ರಮಣಿಯನ್
ಎಲೆಕ್ಟ್ರಾನಿಕ್ ವೋಟಿಂಗ್ ಮಷೀನಿಗೆ ಬದಲಾಗಿ ಪೇಪರ್ ಬ್ಯಾಲೆಟ್‌ನ್ನು ಮತ್ತೆ ಜಾರಿಗೆ ತರಬೇಕೆಂಬ ಬ್ರೆಜಿಲಿನ ಅಧ್ಯಕ್ಷ ಜೈರ್ ಬೊಲ್ಸೊನಾರೋ ಯತ್ನ ಕಾಂಗ್ರೆಸಿನಲ್ಲಿ ಇತ್ತೀಚೆಗೆ ವಿಫಲವಾಯಿತು. ಆದರೆ ಇದು 2022ರ ಅಧ್ಯಕ್ಷೀಯ ಚುನಾವಣೆಗೆ ಮುಂಚೆ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯದಿಂದ ಅವರನ್ನು ತಡೆಯಲಾರದು. ಆಗಸ್ಟ್ 10 ರಂದು, ಸಂವಿಧಾನ ತಿದ್ದುಪಡಿ ಮಾಡಲು ಬೊಲ್ಸೊನಾರೋ ಅವರು ಸಲ್ಲಿಸಿದ್ದ ಪ್ರಸ್ತಾಪವು ಅಗತ್ಯವಿದ್ದ ಬಹುಮತ ಪಡೆಯಲು ಸ್ವಲ್ಪದರಲ್ಲೇ ಸೋತಿತು. ಪ್ರಾತಿನಿಧಿಕ ಸಂಸ್ಥೆಯ ಕಾರ್ಯನಿರ್ವಹಣೆಗೆ ಭಂಗ ತರಲು ಅಧ್ಯಕ್ಷರು ಒಡ್ಡಿದ್ದ ಬೆದರಿಕೆಯ ಭಾಗವಿದಾಗಿತ್ತು.
ಕುಗ್ಗುತ್ತಿರುವ ಜನಪ್ರಿಯತೆ
ಸದಾ ಉರಿ ಕಾರುವ ಉಗ್ರ ಬಲಪಂಥೀಯ ರಾಷ್ಟ್ರೀಯವಾದಿ ಅಧ್ಯಕ್ಷ ಬೊಲ್ಸೊನಾರೋ ಜುಲೈನಲ್ಲಿ ಎಚ್ಚರಿಕೆ ನೀಡಿದ್ದರು: ಮುಂದಿನ ವರ್ಷ ಶುದ್ಧ ಚುನಾವಣೆ ಆಗುತ್ತದೆ ಅಥವಾ ಚುನಾವಣೆಯೇ ಇರುವುದಿಲ್ಲ, 1996 ರಿಂದ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಅತಿ ಮೋಸಕ್ಕೆ ಆಸ್ಪದ ಕೊಡುತ್ತದೆ ಎಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡಿದ್ದರು. 2018ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿ ಮೋಸವಿಲ್ಲದೇ ಇದ್ದಿದ್ದರೆ ತಾನು ಮೊದಲ ಸುತ್ತಿನಲ್ಲೇ ಅಧ್ಯಕ್ಷನಾಗಿ ಆಯ್ಕೆಯಾಗಿರುತ್ತಿದ್ದೆ ಎಂದು ಈ ಹಿಂದೆ ಸಾಧಿಸಿದ್ದರು. ಬೊಲ್ಸೊನಾರೋ ಅವರ ಬೆಂಬಲಿಗರು ಬದಲಾವಣೆಗೆ ಒತ್ತಾಯಿಸಿದ್ದಾಗ, ಹಲವಾರು ಹಾಲಿ ಮತ್ತು ಮಾಜಿ ಸುಪ್ರೀಂಕೋರ್ಟಿನ ನ್ಯಾಯಾಧೀಶರುಗಳು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ವ್ಯವಸ್ಥೆಯಲ್ಲಿ ಯಾವುದೇ ದುರ್ವ್ಯವಹಾರಕ್ಕೆ ದಾಖಲೆಗಳು ಇರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ತನ್ನ ಕಛೇರಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಬೊಲ್ಸೊನಾರೋ ಅವರ ವಿರುದ್ಧ ಮೇಲ್ದರ್ಜೆಯ ಚುನಾವಣಾ ಕೋರ್ಟು ತನಿಖೆ ನಡೆಸುತ್ತಿರುವಾಗಲೇ, ಅತ್ತ ಸುಪ್ರೀಂಕೋರ್ಟಿನಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಅಪರಾಧಕ್ಕಾಗಿ ಅವರ ವಿರುದ್ಧ ಶೋಧನೆ ನಡೆಯುತ್ತಿತ್ತು.
2019 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬೊಲ್ಸೊನಾರೋ ತಮ್ಮ ಜನಪ್ರಿಯತೆಯಲ್ಲಿ ತೀವ್ರತರದ ಕುಸಿತ ಕಂಡರು; ಕೋವಿಡ್-19 ಮಹಾರೋಗವನ್ನು ನಿರ್ವಹಿಸುವಲ್ಲಿನ ಅವರ ಅಸಡ್ಡೆಯು 5 ಲಕ್ಷ ಜನರ ಪ್ರಾಣ ತೆಗೆದಿತ್ತು. ಕೋವಿಡ್-19 ಲಸಿಕೆ ಖರೀದಿಯಲ್ಲೂ ಅವರ ಸರ್ಕಾರದ ಅವ್ಯವಹಾರ ಮತ್ತು ಅಕ್ರಮಗಳ ತನಿಖೆಯಲ್ಲೂ ಅವರು ಸಿಕ್ಕುಹಾಕಿಕೊಂಡಿದ್ದಾರೆ ಕೂಡ. ಕೊವ್ಯಾಕ್ಸಿನ್ ಉತ್ಪಾದಕ ಭಾರತ್ ಬಯೋಟೆಕ್ ಅವರು ನಮೂದಿಸಿದ್ದ ಬೆಲೆಗಿಂತಲೂ ಹೆಚ್ಚು ಕೊಟ್ಟು ಖರೀದಿಸುವ ಒಪ್ಪಂದವನ್ನು ಅವರ ಸರ್ಕಾರದ ಅಧಿಕಾರಿಗಳು ಮಾಡಿಕೊಂಡಿದ್ದರು, ಆ ನಂತರ ಆ ಒಪ್ಪಂದ ರದ್ದಾಯಿತು. ಸಮೂಹ ಪ್ರತಿರಕ್ಷೆ(ಹರ್ಡ್ ಇಮ್ಯುನಿಟಿ) ಸೃಷ್ಟಿಮಾಡಲು ಉದ್ದೇಶಪೂರ್ವಕವಾಗಿ ಕೋವಿಡ್-19 ಮಹಾರೋಗ ಹೆಚ್ಚು ಹರಡುವುದಕ್ಕೆ ಅನುವುಮಾಡಿಕೊಟ್ಟಿದ್ದರು; ಆ ತಂತ್ರವು ಮನುಕುಲದ ವಿರುದ್ಧದ ಅಪರಾಧವಾಗುತ್ತದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ತಜ್ಞರು ಹೇಳಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಬ್ರೆಜಿಲಿಯನ್ನರ ಶೇಕಡಾ 50 ಕ್ಕೂ ಹೆಚ್ಚು ಜನರು ಬೊಲ್ಸೊನಾರೋರನ್ನು ಅಧಿಕಾರದಿಂದ ಕಿತ್ತುಹಾಕಬೇಕೆಂದು ಯೋಚಿಸುತ್ತಾರೆ. ಮತ್ತೊಂದರ ಪ್ರಕಾರ, ಹಿಂದಿನ ಅಧ್ಯಕ್ಷ ಲೂಯಿಸ್ ಇನಾಶಿಯೋ ಲೂಲಾ ಡಿ ಸಿಲ್ವಾ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿದ್ದವರು, ಆ ಅಪರಾಧವನ್ನು ಮಾರ್ಚ್‌ನಲ್ಲಿ ಕೋರ್ಟು ತಿರಸ್ಕರಿಸಿದ ಮೇಲೆ ಬಿಡುಗಡೆಯಾಗಿ ಬಂದಿದ್ದು, ಅವರು ಮುಂದಿನ ವರ್ಷದ ಸ್ಪರ್ಧೆಯಲ್ಲಿ ಮತ್ತೆ ಮೊದಲ ಸುತ್ತಿನಲ್ಲೇ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.
ಮಿಲಿಟರಿಯ ಅಭಿಮಾನಿ
ಚುನಾವಣಾ ಆಯೋಗದ ಮೇಲಿನ ಬೊಲ್ಸೊನಾರೋ ಅವರ ಇತ್ತೀಚಿನ ದಾಳಿಗೆ ಅವರ ಕುಗ್ಗುತ್ತಿರುವ ಜನಪ್ರಿಯತೆಯು ಕಾರಣವಾಗಿರಬಹುದು. ಬೊಲ್ಸೊನಾರೋ ಮೊದಲಿನಿಂದಲೂ ಹಿಂದಿನ ಮಿಲಿಟರಿ ಆಡಳಿತಗಾರರ ಅಭಿಮಾನಿಯಾಗಿರುವವರು. ಅವರ ಸರ್ಕಾರದಲ್ಲಿ ಹಿಂದಿನ ಹಲವಾರು ಮಿಲಿಟರಿ ಜನರಲ್‌ಗಳು ಸಂಪುಟ ಸಚಿವರಾಗಿದ್ದಾರೆ. ಬ್ರೆಜಿಲ್ಲಿನ ಉಗ್ರ ಬಲಪಂಥೀಯ ಕಮ್ಯುನಿಸ್ಟ್ ವಿರೋಧಿ ಒಲಾವೊ ಡಿ ಕರ್ವಾಲೋ ಅವರ ಸೈದ್ಧಾಂತಿಕ ನಿಲುವಿಗೆ ತೀರ ಹತ್ತಿರವಾಗಿರುವ ಬೊಲ್ಸೊನಾರೋ ಒಂದು ಸಂದರ್ಭದಲ್ಲಿ ಹೀಗೆ ಹೇಳಿದ್ದರು: “ಸರ್ವಾಧಿಕಾರಿಗಳ ಪ್ರಮಾದವೇನೆಂದರೆ ಭಿನ್ನಮತೀಯರನ್ನು ಕೊಲ್ಲುವ ಬದಲು ಕಿರುಕುಳ ಕೊಡುವಷ್ಟಕ್ಕೇ ನಿಲ್ಲಿಸಿಬಿಡುವುದಾಗಿದೆ.”
ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೇ, 1964 ರಲ್ಲಿ ಪ್ರತಿಕ್ರಾಂತಿಯ ಮೂಲಕ ಮಿಲಿಟರಿಯನ್ನು ಅಧಿಕಾರಕ್ಕೆ ತಂದಿದ್ದ ಆ ದಿನದ ವರ್ಷಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಿ ಎಂದು ರಕ್ಷಣಾ ಪಡೆಗಳಿಗೆ ನಿರ್ದೇಶನ ನೀಡಿದ್ದರು ಬೊಲ್ಸೊನಾರೋ. ಎಡ ವರ್ತುಲದ ಜನ ಅದನ್ನು ಮಹಾಹತ್ಯಾಕಾಂಡ ಎಂದು ಕರೆದರೆ, ಬೊಲ್ಸೊನಾರೋ ಬೆಂಬಲಿಗರು ಅದನ್ನು ಕಮ್ಯುನಿಸ್ಟ್ ವಿರುದ್ಧದ ಕ್ರಾಂತಿ ಎಂದು ಕೊಂಡಾಡಿದ್ದರು. ಅಷ್ಟರಮಟ್ಟಿಗೆ ರಾಜಕೀಯ ಧೃವೀಕರಣವಾಗಿದೆ ಬ್ರೆಜಿಲಿನಲ್ಲಿ. ಅಲ್ಲಿಯ ಪ್ರಾಸಿಕ್ಯೂಟರ್ ಜನರಲ್ ಅವರ ಕಛೇರಿಯು ಆ ಘಟನೆಯನ್ನು ಅಸಂವಿಧಾನಿಕ ಸರ್ವಾಧಿಕಾರತ್ವದ ಆಚರಣೆ ಎಂದು ಘೋಷಿಸಿದೆ. ಮತ್ತೊಂದು ಕೋರ್ಟು ದೇಶದ ಪ್ರಜಾಸತ್ತಾತ್ಮಕ ಮರುನಿರ್ಮಾಣಕ್ಕೆ ಅದು ವಿರುದ್ಧವಾದುದು ಎಂದು ಸಾರಿತು. ಈ ವರ್ಷದ ಏಪ್ರಿಲ್‌ನಲ್ಲಿ ಬೊಲ್ಸೊನಾರೋ ತನ್ನ ರಕ್ಷಣಾ ಸಚಿವನನ್ನು, ಅವನು ರಕ್ಷಣಾ ಪಡೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು, ಅಧ್ಯಕ್ಷರ ವೈಯಕ್ತಿಕ ಪಡೆಗಳಲ್ಲ ಎಂದು ಹೇಳಿದ ಅಪರಾಧಕ್ಕಾಗಿ ಕಿತ್ತುಹಾಕಿದ್ದರು. ಅದನ್ನು ಪ್ರತಿಭಟಿಸಿ ಸೇನೆಯ ಮೂರೂ ಶಾಖೆಗಳು ರಾಜೀನಾಮೆ ನೀಡಿದವು.
ವಾದಕ್ಕಾಗಿ ಹೇಳಬಹುದು, ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಯಾವ ನಾಯಕರೂ ಬೊಲ್ಸೊನಾರೋನಷ್ಟು “ಚುನಾಯಿತ ಸರ್ವಾಧಿಕಾರಿ” ಎಂಬ ಗುಣವಾಚಕವನ್ನು ಬಳಸಲು ಯೋಗ್ಯರಾಗಿರಲಾರರು. ಅಧ್ಯಕ್ಷರ ವಿರುದ್ಧದ ಖಂಡನಾ ನಿರ್ಣಯಕ್ಕೆ ಒತ್ತಾಯಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಮುಂದಿನ ಚುನಾವಣೆಯ ತನಕ ಅಧ್ಯಕ್ಷರು ಪ್ರಾಯಶಃ ಕೋರ್ಟುಗಳು ಮತ್ತು ಬ್ರೆಜಿಲಿನ ಕಾಂಗ್ರೆಸ್‌ನ ವಿರುದ್ಧ ತಮ್ಮ ಕರ್ಣಕಠೋರವಾದ ಭಾಷಣವನ್ನು ತೀವ್ರಗೊಳಿಸಬಹುದು.
ಲೇಖಕರು: ನಿರ್ದೇಶಕರು, ಸ್ಟ್ರಾಟೆಜಿಕ್ ಇನಿಷಿಯೇಟಿವ್ಸ್, ಆಗ್ನೊಶಿನ್ ಟೆಕ್ನೊಲಜಿಸ್ ಪ್ರೈ. ಲಿಮಿಟೆಡ್
(24.08.2021 ರ ದಿ ಹಿಂದು ಪತ್ರಿಕೆಯ ಪುಟ 7 ರಲ್ಲಿ ಪ್ರಕಟವಾದ ಬರಹ)