ಕೋವಿಡ್ ಜೊತೆಗೆ ಬ್ಲ್ಯಾಕ್ ಫಂಗಸ್ ತಲೆನೋವು

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಕೋಲಾರ, ವಿಜಯಪುರ, ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಮೈಸೂರಿನ ಎಂಎಂಸಿ, ಶಿವಮೊಗ್ಗದ ಎಸ್‌ಐಎಂಎಸ್, ಕಲಬುರಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್ ಮತ್ತು ಮಣಿಪಾಲದ ಕೆಎಂಸಿಯಲ್ಲಿ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಪ್ರಾದೇಶಿಕ ಕೇಂದ್ರಗಳಾಗಿ ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು 26 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದರೆ, ಬೆಂಗಳೂರು ನಗರದಲ್ಲಿ 12, ಕಲಬುರಗಿ, ಗದಗಗಳಲ್ಲಿ ತಲಾ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 83 ವರ್ಷದ ವೃದ್ದರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದು ಈ ಮೂಲಕ ಈ ಆಸ್ಪತ್ರೆಯಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಸೋಮವಾರ ಸೋಂಕು ದೃಢಪಟ್ಟಿರುವ 12 ಮಂದಿಯಲ್ಲಿ 10 ಮಂದಿ ಬೌರಿಂಗ್ ಆಸ್ಪತ್ರೆಯಲ್ಲಿ, ಇಬ್ಬರು ವಿಕ್ಟೋರಿಯಾದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 26 ಮಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ದೃಢಪಡಿಸಿದ್ದಾರೆ.

ಬಿಎಲ್ಡಿಇ ಆಸ್ಪತ್ರೆಯಲ್ಲಿ-15, ಅಲ್ ಅಮೀನ್ ಆಸ್ಪತ್ರೆಯಲ್ಲಿ 1, ಆಯುಷ್ ಆಸ್ಪತ್ರೆಯಲ್ಲಿ 5, ಅಶ್ವಿನಿ ಆಸ್ಪತ್ರೆಯಲ್ಲಿ 1, ಚೌಧರಿ ಆಸ್ಪತ್ರೆಯಲ್ಲಿ 2, ಯಶೋಧಾ ಆಸ್ಪತ್ರೆಯಲ್ಲಿ 2 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿರುವ ಇಬ್ಬರಿಗೆ ಮುಂಬೈ ಮತ್ತು ಬೆಂಗಳೂರಿನಿಂದ ಆಯಂಟಿ ಫಂಗಸ್ ಔಷಧಿ ತರಿಸಿ ಚಿಕಿತ್ಸೆ ಪ್ರಾರಂಭಿಸಿರುವುದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.

ಇನ್ನು ಗದಗ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸಿಸಿ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಇನ್ನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲೂ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಹಂತದಲ್ಲಿದ್ದ ವ್ಯಕ್ತಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಭಾನುವಾರ ಹುಬ್ಭಳ್ಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *