ಬಿಜೆಪಿಯೊಳಗಿನ ನಾಯಕತ್ವದ ಒಳಜಗಳ ಇನ್ನೂ ತಣ್ಣಗಾಗಿಲ್ಲ

ನಾಯಕತ್ವ ಬದಲಾವಣೆಯಾಗಬೇಕೆಂದು ಬಿಜೆಪಿಯೊಳಗೆ ಆರಂಭವಾಗಿ ಅಂತಿಮವಾಗಿ, ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಪಕ್ಷದ ಒಳಗೆ ನಡೆಯುತ್ತಿರುವ ಒಳಜಗಳ ಇನ್ನು ತಣ್ಣಗಾಗಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಮತ್ತೆ ಸ್ವಪಕ್ಷದವರೇ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೂ ಸಹ ಎಲ್ಲವೂ ಸುಸೂತ್ರವಾಗಿದೆ ಎಂದು ಹೇಳ ತೊಡಗಿದ್ದಾರೆ.

ಇತ್ತೀಚಿಗೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ತಿರುಗಿಬಿದ್ದ ಕೆಲ ಶಾಸಕರು ದೆಹಲಿ ನಾಯಕರನ್ನು ಭೇಟಿ ಮಾಡಿದ್ದಾರೆ. ಮತ್ತೊಂದೆಡೆ ಬಿ ಎಸ್‌ ಯಡಿಯೂರಪ್ಪ ಅವರ ಮಗ ಹಾಗೂ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ ವೈ ವಿಜಯೇಂದ್ರ ಅವರೊಂದಿಗೆ  ಕೆಲ ಬಿಜೆಪಿ ನಾಯಕರು ಭೇಟಿ ಮಾಡಿದ್ದರು. ಅಲ್ಲದೆ, ರಾಜ್ಯದಲ್ಲಿಯೂ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಹಲವು ಮಠಾಧೀಶರನ್ನು ಭೇಟಿ ಮಾಡಿದ್ದಾರೆ.

ಇದನ್ನು ಓದಿ: ಸಿಎಂ ಪುತ್ರ ವಿಜಯೇಂದ್ರ ಲಾಕ್‌ಡೌನ್ ನಿಯಮ ಉಲ್ಲಂಘನೆ: ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಕಳೆದ ಕೆಲವು ತಿಂಗಳುಗಳಲ್ಲಿ, ಬಸವರಾಜ್ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಎ.ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ, ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪಕ್ಷದ ನಾಯಕತ್ವದ ವಿಚಾರವಾಗಿ ಬಹಿರಂಗವಾಗಿ ಮಾಧ್ಯಮಗಳ ಮೂಲಕ ಆರೋಪ ಮಾಡಿದ್ದರು.

ಇವುಗಳ ನಡುವೆ ಬಿಜೆಪಿ ಹೈಕಮಾಂಡ್‌ ಮಧ್ಯಪ್ರವೇಶಿಸಬೇಕಾಗಿ ಬಂತು. ದೆಹಲಿಯಿಂದಲೇ ಉತ್ತರಿಸಿದ ಪಕ್ಷದ ಉಸ್ತುವಾರಿ ನಾಯಕತ್ವ ಬದಲಾವಣೆ ವಿಚಾರವಾಗಿ ದೆಹಲಿಯಿಂದಲೇ ಉತ್ತರಿಸಬೇಕಾಗಿ ಬಂದಿತು. ಸದ್ಯ ಮತ್ತೆ ಮತ್ತೆ ಬಿಜೆಪಿಯೊಳಗಿನ ಒಳಜಗಳ ತಣ್ಣಗಾಗಿಲ್ಲ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದೊಳಗಿನ ಒಳಜಗಳಗಳು ಬೂದಿಮುಚ್ಚಿದ ಕೆಂಡದಂತೆ ಹಾಗೆ ಇದೆ. ಹಿಂದಿನ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಪಕ್ಷವನ್ನು ಉರುಳಿಸಿ ಆ ಪಕ್ಷಗಳ 17 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ, ಬಿಜೆಪಿ ಪಕ್ಷವನ್ನು ಸೇರಿದರು. ಕೆಲವರು ಶಾಸಕರಾಗಿ ಮತ್ತೆ ಆಯ್ಕೆಯಾಗಿ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಲವು ದಿನಗಳು ಶಾಂತವಾಗಿಯೇ ಇದ್ದ ನಾಯಕತ್ವದೊಳಗಿನ ಗುದ್ದಾಟ ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನು ಓದಿ: ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಂಡ ಬಿಎಸ್‌ವೈ

ಇವೆಲ್ಲವುದರ ನಡುವೆ ಬಿ ಎಸ್‌ ಯಡಿಯೂರಪ್ಪ ಅವರು ಸಹ ಮುಂದಿನ ಎರಡು ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ವಿವಿದೆಡೆ ಹೇಳಿಕೆ ನೀಡುತ್ತಲೇ ಇದ್ದಾರೆ.

ಇವೆಲ್ಲವುಗಳ ಮಧ್ಯೆ ನಾಳೆ ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು  ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ವಿಚಾರಗಳು, ರಾಜ್ಯ ಸರ್ಕಾರದ ಹಾಗೂ ಬಿಜೆಪಿ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ಶಾಸಕರು ಮತ್ತು ಸಚಿವರೊಂದಿಗೆ ಚರ್ಚಿಸಲು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಆಗಮಿಸಲಿದ್ದಾರೆ. ಮೂರು ದಿನಗಳ ಇಲ್ಲಿಯೇ ಉಳಿದುಕೊಂಡು ಸಮಾಲೋಚನೆ ನಡೆಸಲಿದ್ದಾರೆ.

ಈಚೆಗೆ ಸಚಿವ ಕೆ..ಎಸ್.‌ ಈಶ್ವರಪ್ಪ ಪಕ್ಷಕ್ಕೆ ಹೊರಗಿನಿಂದ ಬಂದ 17 ಮಂದಿಯಿಂದ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು.  ಅದೇ ವಲಸೆ ಗುಂಪಿನವರಾದ ಮತ್ತು ಸಚಿವರೂ ಆಗಿರುವ ಬಿ.ಸಿ. ಪಾಟೀಲ ಅವರು ಬಿಜೆಪಿಗೆ ಹೊರಗಿನಿಂದ ಬಂದ 17 ಮಂದಿಯ ತ್ಯಾಗದಿಂದಲೇ ತಾವು ಸಚಿವರಾಗಿರುವುದು ಎಂಬುದನ್ನು ಮರೆಯಬಾರದು ಎಂದು ಕೆ.ಎಸ್.ಈಶ್ವರಪ್ಪ ಅವರನ್ನು ಕುಟುಕಿದ್ದಾರೆ.

ಸಚಿವ ಎಸ್. ಟಿ. ಸೋಮಶೇಖರ್ ಅವರು ಸಹ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನ ರಾಜ್ಯದಲ್ಲೇ ಇದ್ದು ಮಾತುಕತೆ ನಡೆಸುವರು. ಎಲ್ಲವೂ ಅಂತಿಮಗೊಳ್ಳಲಿದೆ. ಏನೂ ತೊಂದರೆ ಇಲ್ಲ ಎಂದು ಹೇಳಿದರು.

ಇದರ ನಡುವೆಯೇ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಸಮನ್ವಯ ಸಮಿತಿಯು ತನ್ನದೇ ನಾಯಕತ್ವದ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಯತ್ನಿಸುತ್ತಿದೆ. ಈ ಸಮಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದ ಗೌಡ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್ ಅಶೋಕ, ಅರವಿಂದ್ ಲಿಂಬಾವಳಿ, ಜಗದೀಶ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಮತ್ತು ಇತರರು ಸೇರಿದ್ದಾರೆ.

ಇದನ್ನು ಓದಿ: ಸರಕಾರ ವಿಫಲವಾಗಿದೆ-ನಾಯಕತ್ವ ಬದಲಾವಣೆಯಿಂದ ಏನು ಸಾಧ್ಯ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕೋವಿಡ್‌ ಬಿಕ್ಕಟ್ಟು ಶಮನವಾಗಿಲ್ಲ. ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಅಲ್ಲದೇ, ಮುಂಬರುವ ಉಪಚುನಾವಣೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆಗಳು ನಡೆಯಲಿವೆ. ಇವುಗಳ ಮಧ್ಯೆ ನಾಯಕತ್ವದಲ್ಲಿ ಕಿತ್ತಾಟ ಪದೇ ಪದೇ ಸಂಭವಿಸುತ್ತಿರುವುದು. ರಾಜ್ಯದ ಕೆಲ ನಾಯಕರು ಹಾಗೂ ಕೇಂದ್ರದ ಹೈಕಮಾಂಡ್‌ಗೆ ಬಿಸಿತುಪ್ಪದಂತೆ ಪರಿಣಮಿಸಿದೆ.

ಅರುಣ್‌ ಸಿಂಗ್‌ ಅವರು ಭೇಟಿಯ ಸಮಯ ಹತ್ತಿರವಾಗುತ್ತಿದ್ದಂತೆಯೇ ನೆನ್ನೆಯಿಂದ ಮತ್ತೆ ಬಿಜೆಪಿಯೊಳಗಿನ ಎರಡು ಗುಂಪುಗಳ ನಡುವೆ ತಂತ್ರಗಾರಿಕೆಗಳು ಮುಂದುವರೆದಿದೆ. ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಆಪ್ತ ಕೆಲ ಸಚಿವರು ಹಾಗೂ ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿರುವ ಅಂಶಗಳು ನಡೆದಿವೆ. ಅರುಣ್​ ಕುಮಾರ್​ ಪೂಜಾರ್​, ಗೋಪಾಲಕೃಷ್ಣ , ಪರಣ್ಣ ಮನವಳ್ಳಿ, ನಾಗೇಂದ್ರ, ದೊಡ್ಡನಗೌಡ ಪಾಟೀಲ್​ ಸೇರಿದಂತೆ ಹಲವಾರು ನಾಯಕರು ಬಿ ಎಸ್‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಶಾಸಕ ಅರವಿಂದ ಬೆಲ್ಲದ್‌ ಸಹ ನೆನ್ನೆ ಮತ್ತೆ ದೆಹಲಿಯಲ್ಲಿ ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಿರುವುದು ಇದೆ.

ಇಂದು ಸಹ ಬಿಜೆಪಿ ಕೆಲ ನಾಯಕರೂ ಸಹ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ವಿರುದ್ಧವೇ ತಿರುಗಿಬಿದ್ದಿರುವ ಬಗ್ಗೆಯೂ ವರದಿಗಳು ಬರುತ್ತಿವೆ. ದೆಹಲಿಯಲ್ಲಿಯೇ ಇದ್ದು ಮಾತನಾಡುವವರು ರಾಜ್ಯಕ್ಕೆ ಬಂದು ಮತ್ತೆ ಮಾಹಿತಿ ಪಡೆಯುವುದೇ ಏಕೆ ಎಂಬ ಆರೋಪವನ್ನು ಕೆಲ ನಾಯಕರು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಇದನ್ನು ಓದಿ: ಸಿಎಂ ಬದಲಾವಣೆ ಚರ್ಚೆ : ಪಕ್ಷಕ್ಕೂ ಕೆಲಸಕ್ಕೂ ಹಿನ್ನಡೆ – ಜಗದೀಶ್ ಶೆಟ್ಟರ್

ಬಿಜೆಪಿ ಪಕ್ಷದ ಹೈಕಮಾಂಡ್‌ ನಾಯಕರೂ ರಾಜ್ಯ ನಾಯಕತ್ವದಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದರೂ ಸಹ ನಾಳೆಯಿಂದ ಮೂರು ದಿನಗಳು ರಾಜ್ಯಕ್ಕೆ ಭೇಟಿ ನೀಡಿ ಪ್ರತ್ಯೇಕವಾದ ಸಭೆಯನ್ನು ನಡೆಸುವುದು ಏಕೆ ಎಂಬ ಆರೋಪವನ್ನು ಕೆಲವು ಮಾಡುತ್ತಿದ್ದಾರೆ.

ನಾಳೆ ಮಧ್ಯಾಹ್ನಕ್ಕೆ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಸಚಿವರ ಸಭೆ ನಡೆಸಲಿದ್ದಾರೆ. ಅಲ್ಲದೆ, ಜೂನ್ 18ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ. ಈ ನಡುವೆ ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂದು ಯಡಿಯೂರಪ್ಪ ವಿರೋಧಿ ಬಣ ಕೇಳಿಕೊಂಡಿದ್ದಾರೆ. ಯಡಿಯೂರಪ್ಪ ಬಣದವರು ಕೋವಿಡ್‌ ಇರುವುದರಿಂದ ಶಾಸಕಾಂಗ ಪಕ್ಷದ ಸಭೆ ಬೇಡ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ವಿಚಾರದಲ್ಲಿ ಎರಡೂ ಬಣದಲ್ಲಿ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಸಮಾಧಾನಪಡಿಸಲು ಜೂನ್ 17ರಂದು ಶಾಸಕಾಂಗ ಪಕ್ಷದ ಸಭೆಯ ಬದಲಿಗೆ ‘ಶಾಸಕರ ಸಭೆ’ ಕರೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಅಂತಿಮವಾಗಿ ನಾಳೆಯಿಂದ ಮೂರು ದಿನಗಳು ನಡೆಯಲಿರುವ ಬಿಜೆಪಿ ಪಕ್ಷದೊಳಗಿನ ನಾಯಕತ್ವದ ವಿಚಾರದಲ್ಲಿನ ಜಳಜಗಳಗಳು ಅಂತಿಮಗೊಳ್ಳುವುದೇ ಅಥವಾ ಮತ್ತಷ್ಟು ಹೆಚ್ಚಾಗಲಿದಿಯೇ ಎಂದು ಜೂನ್‌ 18ರ ನಂತರವೇ ತಿಳಿದು ಬರಲಿದೆ. ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವರೆ ಅಥವಾ ಒಳಜಗಳ ಹೆಚ್ಚಾಗಿ ಹೊಸಬರು ಆಯ್ಕೆಯಾಗುವರೋ ಕಾದು ನೋಡಬೇಕು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರ ಇರುವ ಸಂದರ್ಭದಲ್ಲಿ ದೆಹಲಿಯವರ ಭೇಟಿ ರಾಜ್ಯದ ಪಕ್ಷದೊಳಗಿನ ಗುಂಪುಗಾರಿಕೆ ಶಮನಕ್ಕೆ ಪ್ರಯತ್ನಿಸುತ್ತಿದ್ದರೆ, ರಾಜ್ಯ ನಾಯಕರ ದೆಹಲಿ ಭೇಟಿ ನಾಕತ್ವಕ್ಕಾಗಿ ಗುದ್ದಾಟಕ್ಕೆ ಮಾತ್ರ ಸೀಮಿತವಾಗಿದೆ. (ಅಂದರೆ, ರಾಜ್ಯವು ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಲು ದೆಹಲಿಯವರೂ ಭೇಟಿ ನೀಡಲಿಲ್ಲ. ರಾಜ್ಯ ನಾಯಕರೂ ಆರ್ಥಿಕತೆಯಿಂದ ಕುಸಿದಿರುವ ರಾಜ್ಯಕ್ಕೆ ಹೆಚ್ಚಿನ ನೆರವಿನ ಬಗ್ಗೆ ದೆಹಲಿಗೆ ಭೇಟಿಯನ್ನು ನೀಡಲಿಲ್ಲ.) ಒಟ್ಟಿನಲ್ಲಿ ರಾಜ್ಯದ ಜನರು ಮಾತ್ರ ಬಲಿಪಶುಗಳಾದರು.

ಕಳೆದ ಒಂದು ವರ್ಷದಿಂದ ಇಡೀ ದೇಶವೂ ಒಳಗೊಂಡು ರಾಜ್ಯದಲ್ಲಿ ಕೋವಿಡ್‌ ಸಂಕಟದಿಂದ ತತ್ತರಿಸಿರುವ ಸಮಸ್ತ ಜನತೆಯ ನೋವುಗಳಂತೂ ಪರಿಹಾರ ಕಾಣುತ್ತಿಲ್ಲ. ಆದರೂ, ಕಳೆದ ಕೆಲವು ದಿನಗಳಿಂದ ರಾಜ್ಯದ ಆಡಳಿತರೂಢ ಬಿಜೆಪಿ ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ವಿಚಾರವಾಗಿ ಒಂದಷ್ಟು ದಿನ ಜಡ್ಡು ಹಿಡಿದಿದ್ದ ಆಡಳಿತಯಂತ್ರ ಮುಂಬರುವ ದಿನಗಳಲ್ಲಿ ಚುರುಕಾಗುವುದೋ ಅಥವಾ ಮತ್ತೆ ಬಿಜೆಪಿ ಗುಂಪುಗಾರಿಕೆಯಿಂದ ಸರಕಾರದ ಕಾರ್ಯವೈಖರಿಗಳಿಗೆ ಹಿನ್ನಡೆಯಾಗುವುದು. ಒಟ್ಟಿನಲ್ಲಿ ರಾಜ್ಯದ ಜನತೆಯ ಸಂಕಟಗಳು ಮಾತ್ರ ತೀವ್ರವಾಗುತ್ತಲೇ ಇರುವ ಸಂದರ್ಭದಲ್ಲಿಯೇ ಅವುಗಳನ್ನು ಪರಿಹರಿಸಲು ಮುಂದಾಗುವರೆ ಎಂದು ಕಾದು ನೋಡಬೇಕು.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *