ನಮ್ಮ ತ್ಯಾಗದಿಂದಲೆ ರಾಜ್ಯದಲ್ಲಿ ಬಿಜೆಪಿ ಬಂದಿದೆ, ಈಶ್ವರಪ್ಪ ಸಚಿವರಾಗಿದ್ದು ನಮ್ಮಂದಲೆ – ಬಿ ಸಿ ಪಾಟೀಲ್

ಮೈಸೂರು: ಬಿಜೆಪಿಗೆ ಹೊರಗಿನಿಂದ ಬಂದ 17 ಮಂದಿಯ ತ್ಯಾಗದಿಂದಲೇ ತಾವು ಸಚಿವರಾಗಿರುವುದು ಎಂಬುದನ್ನು ಕೆ.ಎಸ್.ಈಶ್ವರಪ್ಪ ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.‌

ಇಲ್ಲಿನ ಸುತ್ತೂರು ಮಠಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.‌

ಹೊರಗಿನಿಂದ ಬಂದ 17 ಮಂದಿಯಿಂದ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಈಶ್ವರಪ್ಪ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಅವರು ಆ ರೀತಿ ಹೇಳಿದ್ದರೆ, ಈ 17 ಮಂದಿಯಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ಸಂಗತಿಯನ್ನು ಮರೆಯಬಾರದು ಎಂದು ಅವರು ಹೇಳಿದರು.‌

ನಾಯಕತ್ವ ಬದಲಾವಣೆ ಎನ್ನುವುದು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕೇ ವಿನಹಾ ಹೊರಗಡೆ ಅಲ್ಲ. ಬಹಿರಂಗವಾಗಿ ಈ ಕುರಿತು ಯಾರೂ ಮಾತನಾಡಬಾರದು ಎಂದು ಸೂಚನೆ ನೀಡಲು ಅರುಣ್‌ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇವರು ಬಂದ ನಂತರ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ ಕುರಿತು ಕೆಲವರಷ್ಟೇ ಮಾತನಾಡುತ್ತಿದ್ದಾರೆ. ಈಗಾಗಲೇ ಹೈಕಮಾಂಡ್ ಇನ್ನೂ 2 ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳಿದೆ. ಈ ಕುರಿತು ಯಾವುದೇ ಅನುಮಾನ ಬೇಡ. ಮುನಿರತ್ನ ಅವರು ಸಚಿವರಾಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.‌

ಬೇಸಿಗೆ ಸಂದರ್ಭದಲ್ಲಿ ಹೂ, ಹಣ್ಣು ಬೆಳೆಗಾರರಿಗೆ ತೊಂದರೆಯಾಗಿದ್ದು ಬಿಟ್ಟರೆ ಕೊರೊನಾ 2ನೇ ಅಲೆಯು ಕೃಷಿ ಮೇಲೆ ಹಿಂದಿನ ವರ್ಷದಷ್ಟು ಮಾರಕ ಪರಿಣಾಮ ಬೀರಿಲ್ಲ. ಎಲ್ಲೆಡೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಸಮರ್ಪಕವಾಗಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *