ಮೈಸೂರು: ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಗಮನಿಸಿದರೆ, ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಂಭೀರತೆ ಕಡಿಮೆಯೇ ಇದೆ. ಆದರೆ ಆತಂಕವಂತೂ ದೂರವಾಗಿಲ್ಲ. ಸದ್ಯ ರಾಜ್ಯದಲ್ಲಿ ಮಂತ್ರಿಮಂಡಲವಿಲ್ಲ. ಆದರೆ, ಸಂಸದರು, ಶಾಸಕರು ಅನಾಹುತ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಆದರೆ, ಆಡಳಿತ ಪಕ್ಷದವರ‍್ಯಾರು ತಮ್ಮ ಸ್ವಕ್ಷೇತ್ರಗಳಲ್ಲಿ ಉಳಿದುಕೊಂಡಿಲ್ಲ. ಅವರೆಲ್ಲ ಬೆಂಗಳೂರು, ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಉಗ್ರಪ್ಪ ʻʻಅವರೆಲ್ಲ ಅಧಿಕಾರ ಪಡಿಯುವ ನಿಟ್ಟಿನಲ್ಲಿ ಇದ್ದಾರೆ ಹೊರತು ಬೇರೇನೂ ಬೇಕಾಗಿಲ್ಲ. ಜನರ ಸಮಸ್ಯೆ ಬೇಕಾಗಿಲ್ಲ. ಕೊರೊನಾ ೩ನೇ ಅಲೆಯನ್ನು ಎದುರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ರಾಜ್ಯ ಸರಕಾರ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್ ಗಂಭೀರ ಪರಸ್ಥಿತಿಯಿಂದಾಗಿ ಲಕ್ಷಾಂತರ ಜನರು ಸಾವಿಗೀಡಾಗಿದ್ದಾರೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ಕಾರಣʼʼ ಎಂದು ಆರೋಪಿಸಿದರು.
ಇದನ್ನು ಓದಿ: ರಾಜ್ಯದಲ್ಲಿರುವುದು ಅನೈತಿಕ ಸರಕಾರ-ಚುನಾಯಿತ ಸರಕಾರ ಬೀಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಸುರ್ಜೇವಾಲ
ರಾಜ್ಯ ನೂತನ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ಆರೋಪಿಸಿದ ಉಗ್ರಪ್ಪ “ಬಿಜೆಪಿಯು ಕಾಂಗ್ರೆಸ್ ಪಕ್ಷದ್ದು ಲಕೋಟೆ ಸಂಸ್ಕೃತಿ ಎಂದು ಟೀಕಿಸುತ್ತಿತ್ತು. ಆದರೆ, ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಡುತ್ತಿರುವುದಾದರೂ ಏನು? ಸಚಿವ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡದೆ, ಹೈಕಮಾಂಡ್ ಸೂಚಿಸುವವರಿಗೆ ಸ್ಥಾನ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ದೇಶದ ಸಂವಿಧಾನಕ್ಕೆ, ರಾಜ್ಯದ ಆರೂವರೆ ಕೋಟಿ ಜನರಿಗೆ ಮಾಡಿದ ಅನ್ಯಾಯವಾಗಿದೆ,” ಎಂದು ಹೇಳಿದರು.
ಈಗ ಮೌನಿ ಬಾಬಾಗಳಾಗಿದ್ದಾರೆ
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದೊಂದು ವಾರದಿಂದ ಮೌನಿ ಬಾಬಾ ಆಗಿದ್ದಾರೆ. ಏಕೆ ಹೀಗೆ, ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕಿಕ್‌ಬ್ಯಾಕ್ ಆರೋಪ ಮಾಡಿದವರು, ಯಡಿಯೂರಪ್ಪ ಮತ್ತು ಅವರ ಕುಟುಂಬ ನೂರಾರು ಕೋಟಿ ಕಿಕ್‌ಬ್ಯಾಕ್ ಆರೋಪ ಇದೆ. ಈ ಬಗ್ಗೆ ನಿವೃತ್ತಿ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಿದ್ದರೂ, ಸಿಬಿಐ, ಇಡಿ, ಐಡಿ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಎಚ್. ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಉತ್ತರಿಸಬೇಕು ಎಂದು ಟೀಕಿಸಿದರು.
ಕೇಂದ್ರದ ಮಲತಾಯಿ ಧೋರಣೆ
ಕೇಂದ್ರ ಸರಕಾರದ ಮಲತಾಯಿ ಧೋರಣೆ ಬಗ್ಗೆ ಪ್ರಸ್ತಾಪಿಸಿದ ವಿ.ಎಸ್. ಉಗ್ರಪ್ಪ “ರಾಜ್ಯದಲ್ಲಿ ಇಂದು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಜನರ ರಕ್ಷಣೆ ಯುದ್ದೋಪಾದಿಯಲ್ಲಿ ನಡೆಯುತ್ತಿಲ್ಲ. ಈ ಹಿಂದೆ ಗುಜರಾತ್‌ನಲ್ಲಿ ಪ್ರವಾಹ ಬಂದರೆ ಪ್ರಧಾನಿಗಳು ವೈಮಾನಿಕ ಸಮೀಕ್ಷೆ ನಡೆಸಿ 1 ಸಾವಿರ ಕೋಟಿ ರೂ. ಪರಿಹಾರ ನೀಡಿದರು. ಆದರೆ ರಾಜ್ಯದ ವಿಚಾರದಲ್ಲಿ ಏನು ಇಲ್ಲ. 2009ರಲ್ಲಿ ಯಡಿಯೂರಪ್ಪ ಅವರ ಸರ್ಕಾರದ 1.5 ಸಾವಿರ ಕೋಟಿ ಪರಿಹಾರ ಕೊಡಿಸಿದರು. ಆದರೆ ಕರ್ನಾಟಕದ ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ವಿಚಾರಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ
ಪದೇ ಪದೇ ಡಬಲ್ ಇಂಜಿನ್ ಸರಕಾರದ ಬಗ್ಗೆ ಪ್ರಸ್ತಾಪಿಸುವ ಬಿಜೆಪಿಯು ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಇವೆರಡು ಕೂಡ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿವೆ. ಇದನ್ನು ನಾವು ಹೇಳುತ್ತಿಲ್ಲ, ಸ್ವತಃ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಅನುಕೂಲ ಆಗುತ್ತದೆ ಹೇಳಲಾಗುತ್ತಿತ್ತು. ಇದೇನಾ ಅವರ ಒಳ್ಳೆಯ ಕೆಲಸ ಎಂದು ಪ್ರಶ್ನಿಸಿದರು.