- ಸಂದರ್ಭದ ಲಾಭ ಪಡೆಯಲು ಕಾಂಗ್ರೆಸ್, ಜೆಡಿಎಸ್ ಸಜ್ಜು!
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ವರಿಷ್ಠರು ಗಟ್ಟು ನಿರ್ಧಾರಕ್ಕೆ ಬಂದ ಹಾಗಿದೆ. ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿ ಹೈಕಮಾಂಡ್ ತೊಡಗಿಕೊಂಡಿದ್ದು ಇದಕ್ಕೆ ಸಡ್ಡು ಹೊಡೆಯಲು ಯಡಿಯೂರಪ್ಪ ಬಣವೂ ಸಜ್ಜಾಗಿದೆ. ಈ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿವೆ.
ರಾಜ್ಯ ಬಿಜೆಪಿ ಪಾಳಯದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆ ಯಾವುದೇ ಹಂತಕ್ಕೆ ತಲುಪಿದರೂ ಅಚ್ಚರಿ ಇಲ್ಲ. ಬಿಎಸ್‌ವೈ ನಾಯಕತ್ವವನ್ನು ಬದಲಾಯಿಸಿಯೇ ಸಿದ್ದ ಎಂಬ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಂಡಿದೆ. ಆದರೆ ಇದು ಸುಲಭದ ಮಾತೇನಲ್ಲ. ಹಾಗೇನಾದರೂ ನಿರ್ಧಾರಕ್ಕೆ ಬಂದಲ್ಲಿ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಕುರ್ಚಿ ಕಸಿದುಕೊಂಡ ಹೈಕಮಾಂಡ್‌ಗೆ ತಕ್ಕ ಉತ್ತರ ಕೊಡಲು ಬಿಎಸ್ ಯಡಿಯೂರಪ್ಪ ಕೂಡಾ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೂಲ-ವಲಸಿಗರ ಗುದ್ದಾಟಕ್ಕೆ ಬಲಿಯಾಗ್ತಾರಾ ಬಿಎಸ್‍ವೈ?
ಈ ಎಲ್ಲಾ ಹಿನ್ನೆಲೆಯಲ್ಲಿ ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿ ಯಾವುದೇ ಹಂತಕ್ಕೆ ತಲುಪುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಇಂತಹ ಪರಿಸ್ಥಿತಿಯ ಲಾಭವನ್ನು ಪಡೆಯಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಸೋಮವಾರ ಬೆಂಗಳೂರಿನ ಹೊರವಲಯದಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಲಿದೆ. ಪಕ್ಷ ಸಂಘಟನೆ ಜೊತೆಗೆ ಸದ್ಯದ ರಾಜಕೀಯ ಸನ್ನಿವೇಶಗಳ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಎಐಸಿಸಿ ಮಟ್ಟದ ನಾಯಕರು ಈ ಸಭೆಯಲ್ಲಿ ಭಾಗಿಯಾಗುತ್ತಿರುವುದರಿಂದ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಯೇ ನಡೆದಿಲ್ಲ: ನಳಿನ್ ಕುಮಾರ್ ಕಟೀಲ್
ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ಕೂಡಾ ಈ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಲು ಆರಂಭಿಸಿದೆ. ಶನಿವಾರ ಪಕ್ಷದ ಪ್ರಮುಖರ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಹೇಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ದೇವೇಗೌಡರು ಬದುಕಿರುವಾಗಲೇ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಎಚ್‌ಡಿ ಕುಮಾರಸ್ವಾಮಿ ಪಕ್ಷದ ಪ್ರಮುಖರಿಗೆ ಕರೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಎಲ್ಲಿಗೂ ತಲುಪಬಹುದು ಎಂಬ ಸ್ಥಿತಿಯಲ್ಲಿದೆ. ಪಟ್ಟ ಉಳಿಸಿಕೊಳ್ಳಲು ಬಿಎಸ್‌ವೈ ಪ್ರಯತ್ನ ಪಡುತ್ತಿದ್ದರೆ, ಕುರ್ಚಿ ಬೇರೆಯವರಿಗೆ ನೀಡಲು ಬಿಜೆಪಿ ಹೈಕಮಾಂಡ್ ತಂತ್ರ ಹೂಡುತ್ತಿದೆ. ಇದರ ಪರಿಣಾಮಗಳ ಲಾಭ ಪಡೆಯಲು ಕೈ ಹಾಗೂ ತೆನೆ ಸಜ್ಜುಗೊಳ್ಳುತ್ತಿದೆ.