‘ತ್ರಿಪುರ: ಅಂದು-ಇಂದು’ – ಸಂವಾದದಲ್ಲಿ ಜಿತೇಂದ್ರ ಚೌಧುರಿ
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ತಮ್ಮ ಕ್ಷೇತ್ರಕ್ಕೆ ಹೋಗುವುದೂ ದುಸ್ಸಾಹಸವಾಗಿರುವ ಭೀಕರ ಪರಿಸ್ಥಿತಿ ಕುರಿತು ತ್ರಿಪುರದ ಎಡರಂಗ ಸರಕಾರದಲ್ಲಿ 21 ವರ್ಷ ಸಚಿವರಾಗಿದ್ದ, ಪ್ರಸ್ತುತ ತ್ರಿಪುರ ರಾಜ್ಯದ ವಿರೋಧ ಪಕ್ಷದ ಮುಖಂಡರಾದ ಜಿತೇಂದ್ರ ಚೌಧುರಿಯವರು ವಸ್ತುಸ್ಥಿತಿ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತ್ರಿಪುರ ರಾಜ್ಯದ ಹಿಂದಿನ ಪರಿಸ್ಥಿತಿ ಹಾಗು ಪ್ರಸ್ತುತ ಪರಿಸ್ಥಿತಿಗಳ ಕುರಿತು ‘ಸೌಹಾರ್ದ ಕರ್ನಾಟಕ’, ‘ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ’ ಜಂಟಿಯಾಗಿ ಮಾರ್ಚ್ 16, 2025 ರಂದು, ಸಂಜೆ ಬೆಂಗಳೂರಿನ ಎಸ್.ಸಿ.ಎಂ. ಹೌಸ್‌ನಲ್ಲಿ ‘ಸಂವಾದ’ ಕಾರ್ಯಕ್ರಮವನ್ನು ಸಂಘಟಿಸಿದ್ದವು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ)ಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ರವರು ಸಂವಾದಕ್ಕೆ ಚಾಲನೆ ನೀಡಿದರು. ಮುಂದೆ ಇರುವುದು ಜಿತೇಂದ್ರ ಅವರ ಮಾತುಗಳು. ಬಿಜೆಪಿ
ವರದಿ: ಆರ್.ಕೆ.
1947ರಲ್ಲಿ ತ್ರಿಪುರದಲ್ಲಿ ಕೇವಲ 3 ರಿಂದ 4 ಲಕ್ಷ ಜನಸಂಖ್ಯೆ ಇತ್ತು. ಅದರಲ್ಲಿ ಶೇ. 70 ರಷ್ಟು ಬುಡಕಟ್ಟು ಜನರಿದ್ದರು. ದೇಶ 1947ರಲ್ಲಿ ಸ್ವಾತಂತ್ರ್ಯ ಗಳಿಸಿದರೂ, ತ್ರಿಪುರ ರಾಜ್ಯವು 1949ರಲ್ಲಿ ಭಾರತ ಒಕ್ಕೂಟಕ್ಕೆ ಸೇರಿತು. ಆಗ ಕೇವಲ ಶೇ. 2 ರಷ್ಟು ಬುಡಕಟ್ಟು ಜನರು ಮಾತ್ರವೇ ಸಾಕ್ಷರರಾಗಿದ್ದರು. ಆದಿವಾಸಿ ಮಹಾರಾಜನ ಆಡಳಿತದಲ್ಲಿ ಬುಡಕಟ್ಟು ಜನರ ತೀವ್ರ ಶೋಷಣೆ ನಡೆದಿತ್ತು. 1945ರಲ್ಲಿಯೇ ಬುಡಕಟ್ಟು ನಾಯಕ ದಶರಥ ದೇಬ್ ಬರ್ಮಾ ಅವರ ನೇತೃತ್ವದ ‘ಜನಶಿಕ್ಷಾ ಆಂದೋಲನ’ ಎಂಬ ಸಾಕ್ಷರತಾ ಚಳುವಳಿ, ಆದಿವಾಸಿಗಳಿಗೆ ಅಕ್ಷರ ಕಲಿಸುವ ಆಂದೋಲನ ಆರಂಭವಾಗಿತ್ತು. ಮಹಾರಾಜ ಅದನ್ನೂ ವಿರೋಧಿಸಿದ್ದ. ದಶರಥ ದೇಬರ ತಲೆ ಕಡಿದು ತಂದು ಕೊಟ್ಟವರಿಗೆ ಆ ಕಾಲದಲ್ಲೇ 10 ಸಾವಿರ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದ. ಭಾರತದ ವಿಭಜನೆಯ ನಂತರ ತ್ರಿಪುರ ರಾಜ್ಯದಲ್ಲಿ ಬಂಗಾಳಿಗಳ ಅಪಾರ ಪ್ರಮಾಣದ ವಲಸೆಯಿಂದ ಜನಸಂಖ್ಯೆಯ ಸ್ವರೂಪವೇ ಬದಲಾಗಿ ಬುಡಕಟ್ಟು ಜನರು ಅಲ್ಪಸಂಖ್ಯಾತರಾಗಿ, ಬುಡಕಟ್ಟೇತರರು ಬಹುಸಂಖ್ಯಾತರಾದರು.
ದಶರಥ ದೇಬರ ನೇತೃತ್ವದ ಚಳುವಳಿ ಅಲ್ಲದೆ, ಬಿರೇನ್ ದತ್ತಾ, ನೃಪೇನ್ ಚಕ್ರವರ್ತಿ ಮುಂತಾದ ಕಮ್ಯೂನಿಸ್ಟ್ ಪಕ್ಷದ ಮುಖಂಡರ ನೇತೃತ್ವದ ಬ್ರಿಟೀಷ್ ವಿರೋಧಿ ಸ್ವಾತಂತ್ರ್ಯ ಹೋರಾಟ, ಬುಡಕಟ್ಟು ಹಾಗೂ ಬುಡಕಟ್ಟೇತರ ಜನರ ಐಕ್ಯತೆ ಆಧಾರಿತವಾದ ಪ್ರಬಲ ಕಮ್ಯೂನಿಸ್ಟ್ ಚಳುವಳಿಯ ಫಲವಾಗಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಚಳುವಳಿ ಬಲಗೊಂಡಿತು. 1952ರಲ್ಲಿ ದೇಶದ ಮೊದಲ ಲೋಕಸಭಾ ಚುನಾವಣೆ ನಡೆದಾಗಲೂ ದಶರಥ ದೇಬ್ ಬಹಿರಂಗವಾಗಿ ಎಲ್ಲಿಯೂ ಪ್ರಚಾರ ಮಾಡಲಾಗಲಿಲ್ಲ. ಭೂಗತರಾಗಿಯೇ ಇದ್ದು ಅವರು ಚುನಾವಣೆಯನ್ನು ಗೆದ್ದರು. ಗೆದ್ದ ಮೇಲೂ ತ್ರಿಪುರದಿಂದ ಬಾಂಗ್ಲಾದೇಶದ ಒಳಮಾರ್ಗದ ಮೂಲಕ ಗುಪ್ತವಾಗಿ ಪ್ರಯಾಣಿಸಿ, ದೆಹಲಿ ತಲುಪಿ ಅವರು ಸಂಸತ್ತು ಪ್ರವೇಶಿಸಬೇಕಾಯಿತು.
ಇದನ್ನೂ ಓದಿ: ಬೆಳವಣಿಗೆಯ ಎರಡು ಪರ್ಯಾಯ ನಮೂನೆಗಳು
ಎಡರಂಗದಿಂದ ಭೂಮಿ ಹಂಚಿಕೆ, ಶೈಕ್ಷಣಿಕ ಸುಧಾರಣೆ ಇತ್ಯಾದಿ..
ಹಲವು ದಶಕಗಳ ಜನಾಂದೋಲನಗಳ ಫಲವಾಗಿ 1978ರಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಸರಕಾರ ಅಧಿಕಾರಕ್ಕೆ ಬಂದಿತು. ತ್ರಿಪುರದ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಭೂ ಹಂಚಿಕೆ ನೀತಿ, ವೃದ್ದಾಪ್ಯ ವೇತನ ಜಾರಿ, ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆ, ಅಧಿಕಾರ ವಿಕೇಂದ್ರೀಕರಣ, ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಮುಂತಾದ ನಾನಾ ಜನಪರ ಕಾರ್ಯಕ್ರಮಗಳು ದೇಶದ ಗಮನ ಸೆಳೆದು ಬೇರೆ ಹಲವು ರಾಜ್ಯಗಳಿಗೂ ಮಾದರಿಯಾದವು. ಜನರ ತಾಯಿನುಡಿಗೆ ಆದ್ಯತೆ, ರಕ್ಷಣೆ, ಬುಡಕಟ್ಟು ಜನರ ಅಭಿವೃದ್ದಿಗಾಗಿ ಪ್ರಜಾಸತ್ತಾತ್ಮಕ ಬುಡಕಟ್ಟು ಸ್ವಾಯತ್ತ ಮಂಡಳಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 1988ರಲ್ಲಿ ಪ್ರತ್ಯೇಕತವಾದಿ ಉಗ್ರಗಾಮಿಗಳೊಂದಿಗಿನ ಶಾಮಿಲಾತಿ, ಗೂಂಡಾಗಿರಿ, ರಿಗ್ಗಿಂಗ್ ಮೂಲಕ ಕಾಂಗ್ರೆಸ್ ಅಧಿಕಾರ ಗಳಿಸಿ 1993 ರವರೆಗೆ ಆಡಳಿತ ನಡೆಸಿತು.
ಮತ್ತೆ 1993ರಿಂದ 2018 ರವರೆಗೆ ಸತತವಾಗಿ 25 ವರ್ಷಗಳ ಕಾಲ ಎಡರಂಗ ತ್ರಿಪುರದಲ್ಲಿ ಆಡಳಿತ ನಡೆಸಿ ಹಲವು ರಂಗಗಳಲ್ಲಿ ಪ್ರಗತಿ ದಾಖಲಿಸಿತು. ಶೇ. 97ರಷ್ಟು ಸಾಕ್ಷರತೆ ಸಾಧಿಸಿ ತ್ರಿಪುರ ರಾಜ್ಯವು ಕೇರಳವನ್ನೂ ಮೀರಿಸಿ ಮೊದಲ ಸ್ಥಾನ ಪಡೆಯಿತು. ಆದರೂ ಮೂರು ದಿಕ್ಕುಗಳಲ್ಲೂ ಬಾಂಗ್ಲಾದೇಶದ ಗಡಿಯನ್ನು ಹೊಂದಿರುವ, ದೇಶದ ಉಳಿದ ಭಾಗಕ್ಕೆ ಸುಲಭವಾದ ಸಾರಿಗೆ-ಸಂಪರ್ಕ ವ್ಯವಸ್ಥೆ ಇಲ್ಲದ ಪುಟ್ಟ ಗುಡ್ಡಗಾಡು ರಾಜ್ಯ ತ್ರಿಪುರದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಯಾರೂ ಮುಂದೆ ಬರುವುದಿಲ್ಲವಾದ್ದರಿಂದ, ಉದ್ಯೋಗ ಸೃಷ್ಟಿಯ ವಿಷಯದಲ್ಲಿ ತ್ರಿಪುರ ಗಂಭೀರ ಸವಾಲುಗಳನ್ನು ಎದುರಿಸಿತು.
ಮೋದಿ-ಅಮಿತ್ ಶಾರ ಅಗಣಿತ ‘ಆಮಿಷ’ಗಳು
2018ರಲ್ಲಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯು, ಡಬಲ್ ಎಂಜಿನ್ ಸರಕಾರದಿಂದ ತ್ರಿಪುರ ಅಭಿವೃದ್ಧಿ ಸಾಧಿಸುತ್ತದೆ, ಮಾಣಿಕ್ ಸರ್ಕಾರ್ ಪ್ರಾಮಾಣಿಕರಾದರೂ ಅವರ ಆಡಳಿತದಿಂದ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಆಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ 50 ಸಾವಿರ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು, ನೌಕರರ ವೇತನ ದ್ವಿಗುಣ ಮಾಡಲಾಗುವುದು. ರಬ್ಬರ್, ಗ್ಯಾಸ್ ಮುಂತಾದ ವಲಯಗಳಲ್ಲಿ ಉದ್ದಿಮೆಗಳನ್ನು ತಂದು, 7 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದೆಲ್ಲಾ ಭರವಸೆ ನೀಡಿ, 299 ಭರವಸೆಗಳ ‘ಮಿಷನ್ ಡಾಕ್ಯುಮೆಂಟ್’ ಆಧಾರದಲ್ಲಿ ಮತ ಕೇಳಿ, (ಕಾಂಗ್ರೆಸ್ ಶಾಸಕರು ಸೇರಿದಂತೆ ಇಡಿಯಾಗಿ ಕಾಂಗ್ರೆಸ್ ಪಕ್ಷವನ್ನೇ ಬಿಜೆಪಿಗೆ ಪಕ್ಷಾಂತರ ಮಾಡಿಸಿಕೊಂಡು) ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಎಂಟು ವರ್ಷಗಳು ಕಳೆದರೂ ಜನತೆಗೆ ಕೊಟ್ಟ ಯಾವ ಭರವಸೆಗಳೂ ಈಡೇರಿಲ್ಲ.
ಹಲ್ಲೆ-ಕೊಲೆ-ದಾಳಿ
ಮತ್ತೊಂದೆಡೆ ಈಗ ತ್ರಿಪುರದಲ್ಲಿ ವಿರೋಧ ಪಕ್ಷವು ಪ್ರಚಾರ ಮಾಡುವಂತಿಲ್ಲ, ಗೂಂಡಾಗಿರಿ ತಾಂಡವವಾಡುತ್ತಿದೆ. ಚುನಾವಣೆಗಳಲ್ಲಿ ಬೂತ್ ಗಳಿಗೆ ಏಜೆಂಟರನ್ನು ಹಾಕುವಂತಿಲ್ಲ. 35 ಸಿಪಿಐ(ಎಂ) ಕಾರ್ಯಕರ್ತರ ಕೊಲೆಗಳಾಗಿವೆ. ರಾಜ್ಯದಲ್ಲಿ 400 ಕ್ಕೂ ಹೆಚ್ಚು ಸಿಪಿಐ(ಎಂ) ಪಕ್ಷದ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ. ಹಲ್ಲೆ, ಗಲಭೆ, ದಾಳಿಗಳ ಬಗೆಗೆ ಪೋಲಿಸ್ ಠಾಣೆಗಳಿಗೆ ಹೋಗಿ ದೂರು ದಾಖಲಿಸುವುದೂ ಕಷ್ಟವಾಗಿದೆ. ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಅಜೀಂ ಕುಮಾರ್ ಅವರಿಗೆ ಗಲಭೆಗ್ರಸ್ತ ಸ್ಥಿತಿ ಬಗೆಗೆ ಮನವರಿಕೆಯಾದಂತೆ ಕಂಡರೂ, ಅವರಿಗೂ ಹೆಚ್ಚಿನದೇನೂ ಮಾಡಲಾಗಲಿಲ್ಲ. ತ್ರಿಪುರ ಹಿಂದುತ್ವದ ಪ್ರಯೋಗಶಾಲೆಯಂತಾಗಿದೆ. ಮಹಿಳೆಯರ ಮೇಲೆ ಹಲ್ಲೆ, ಗಲಭೆ, ಅಪರಾಧಗಳು ಹೆಚ್ಚಿವೆ. ಶಿಕ್ಷಣ ವ್ಯವಸ್ಥೆ ಕುಸಿದು ಬಿದ್ದಿದೆ. 6 ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಹಿಂದೆ ತ್ರಿಪುರವನ್ನು ದೇಶದಿಂದ ಪ್ರತ್ಯೇಕಗೊಳಿಸಬೇಕೆಂಬ ಬೇಡಿಕೆ ಇಟ್ಟಿದ್ದ ಉಗ್ರಗಾಮಿಗಳಲ್ಲಿ ಬಹಳಷ್ಟು ಜನರು ಈಗ ಬಿಜೆಪಿಯಲ್ಲಿದ್ದಾರೆ. ಕೆಲವು ಪ್ರತ್ಯೇಕತಾವಾದಿಗಳೊಂದಿಗೆ ಬಿಜೆಪಿ ಗುಪ್ತ ಮೈತ್ರಿಯಲ್ಲಿದೆ.
ಮತ್ತೊಂದೆಡೆ ಪ್ರತ್ಯೇಕತಾವಾದಕ್ಕೆ ರಾಜಕೀಯ ಪರಿಹಾರವನ್ನು ಹುಡುಕುವ ಬದಲಿಗೆ, ಬಿಜೆಪಿ ಸರಕಾರ ಯುಎಪಿಎ ಕಾಯ್ದೆ, ದೇಶದ್ರೋಹದ ಕಾಯ್ದೆ ಹಾಗೂ ಭದ್ರತಾ ಪಡೆಗಳ ಬಂದೂಕಿನ ಬಲದಿಂದ ಅದನ್ನು ನಿಯಂತ್ರಿಸುತ್ತೇವೆಂದು ಹೊರಟಿದೆ. ಅಷ್ಟು ಮಾತ್ರವಲ್ಲ ಮತಾಂಧತೆಯ ಆಧಾರದಲ್ಲಿ, ರಾಜಕೀಯ ಕಾರಣಗಳಿಗಾಗಿ ಎಡರಂಗದ ಬೆಂಬಲಿಗರಾದ ಆಟೋ ಚಾಲಕರು, ಅಂಗಡಿ ನಡೆಸುವವರು ಮುಂತಾದ ಜನರ ಮೇಲೆ ದಾಳಿ ಮಾಡಿ ಅವರ ಜೀವನಾಧಾರ ಕಸಿದುಕೊಳ್ಳುತ್ತಿದೆ. ಬಿಜೆಪಿಯ ಈ ಅಪಾಯಕಾರಿ ಧೋರಣೆಯನ್ನು ಬುಡಕಟ್ಟು ಹಾಗೂ ಬುಡಕಟ್ಟೇತರ ಜನರ ಐಕ್ಯ ಹೋರಾಟದ ಮೂಲಕ ಹಾಗೂ ನೇಮಕಾತಿಗಾಗಿ ಯುಜಜನರ ಚಳುವಳಿಯ ಮೂಲಕ ಎದುರಿಸಲು ಎಡರಂಗ ಶ್ರಮಿಸುತ್ತಿದೆ… ಹೀಗೆ ಚೌಧುರಿಯವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತ್ರಿಪುರ ಇತಿಹಾಸ ಹಾಗೂ ಈಗಿನ ಪರಿಸ್ಥಿತಿಯನ್ನು ವಿವರಿಸುತ್ತಾ ಹೋದರು. ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತ್ರಿಪುರದಲ್ಲೂ ಮತ್ತು ದೇಶದ ಇತರ ರಾಜ್ಯಗಳಲ್ಲೂ ಸಹ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಪರೋಕ್ಷವಾಗಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು, ಹಣಕಾಸು ಬೆಂಬಲ ನೀಡುತ್ತಾ ಬಂದಿರುವ ಕರಾಳ ಇತಿಹಾಸ ಇದೆ ಎಂದು ಉದಾಹರಣೆಗಳ ಸಹಿತ ವಿವರಿಸಿದರು.
ಬೀದಿ ಬದಿಯ ಗೂಡಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಮುಖ್ಯಮಂತ್ರಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಸಂವಾದವನ್ನು ನಡೆಸಿಕೊಟ್ಟರು. ಆರಂಭದಲ್ಲಿ ಮಾತನಾಡಿದ ಅವರು “ಹಿಂದೆ ಸೋವಿಯತ್ ರಷ್ಯಾ, ಚೀನಾದಲ್ಲಿ ಸಮಾನತೆ, ಹಂಚಿ ತಿನ್ನುವ ವ್ಯವಸ್ಥೆ, ತಾರತಮ್ಯವಿಲ್ಲದ ಸಮಾಜ ಮುಂತಾದವುಗಳನ್ನು ನೋಡಿ, ಪಶ್ಚಿಮ ಬಂಗಾಳ, ಕೇರಳ, ತ್ರಿಪುರದಲ್ಲಿ ಎಡ ಸರಕಾರಗಳು ಅಧಿಕಾರಕ್ಕೆ ಬಂದದ್ದನ್ನು ಕಂಡು ಭಾರತದಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗಿದೆ ಎಂಬ ಭಾವನೆ ಬಂದಿತ್ತು. ನಿರಂಜನರ ‘ಚಿರಸ್ಮರಣೆ’, ಗೋದಾವರಿ ಪುರುಳೇಕರ್ ಅವರ ‘ಮಾನವ ಎಚ್ಚೆತ್ತಾಗ’ ಮುಂತಾದ ಕೃತಿಗಳೂ ನಮ್ಮನ್ನು ಪ್ರಭಾವಿಸಿದ್ದವು. ದೇಶದ ರಾಜಕಾರಣದಲ್ಲಿ 1977ರಲ್ಲಿ ಇಂದಿರಾಗಾಂಧಿ ಸೋತ ನಂತರ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ, ವಿರೋಧ ಪಕ್ಷಗಳ ಪರವಾಗಿ ವೀರೇಂದ್ರ ಪಾಟೀಲರು ಸಾಮಾನ್ಯ ಅಭ್ಯರ್ಥಿಯಾಗಿದ್ದರು.
ಆಗಿನ ಚುನಾವಣಾ ಪ್ರಚಾರದಲ್ಲಿ ನಮ್ಮೆಲ್ಲರ ಜೊತೆ ರಸ್ತೆ ಬದಿಯ ಗೂಡಂಗಡಿಯಲ್ಲಿ ಸಾಮಾನ್ಯರಂತೆ ಟೀ ಕುಡಿಯುತ್ತಾ ಆಗಿನ ತ್ರಿಪುರ ರಾಜ್ಯದ ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು” ಎಂದು ತ್ರಿಪುರದ ನಾಯಕರ ಹಾಗೂ ಕಮ್ಯೂನಿಸ್ಟರ ಸರಳತೆ, ಬದ್ಧತೆಗಳನ್ನು ನೆನಪಿಸಿಕೊಂಡರು. ಒರಿಸ್ಸಾದಲ್ಲಿ ಆದಿವಾಸಿಗಳ ನಡುವೆ ಕ್ಷಯ ರೋಗ ಪತ್ತೆ ಹಾಗು ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಗ್ರಹಾಂ ಸ್ಟೈನ್ಸ್ ಮತ್ತು ಇಬ್ಬರು ಮುಗ್ಧ ಮಕ್ಕಳನ್ನು ಅವರು ಕ್ರಿಶ್ಚಿಯನ್ನರು ಎಂಬ ಕಾರಣಕ್ಕಾಗಿ, ಧಾರಾಸಿಂಗ್ ನೇತೃತ್ವದ ಭಜರಂಗದಳದ ಕಾರ್ಯಕರ್ತರು ರಾತ್ರಿ ಮಲಗಿದ್ದಾಗ ಕಾರಿಗೆ ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ್ದರು. ಇಂತಹ ಸಂಘಪರಿವಾರವು ಬುಡಕಟ್ಟು ಜನರನ್ನೂ ಕೋಮುವಾದೀಕರಣಗೊಳಿಸುತ್ತಿದ್ದು ಅದು ಬಹಳ ಅಪಾಯಕಾರಿ ಎಂದು ಮಾವಳ್ಳಿ ಶಂಕರ್ ಎಚ್ಚರಿಸಿದರು.
‘ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ’ಯ ರಾಜ್ಯ ಸಹ ಸಂಚಾಲಕರಾದ ಡಾ. ಎಸ್.ವೈ. ಗುರುಶಾಂತ್ ಪ್ರಾಸ್ತಾವಿಕ ಮಾತುಗಳನ್ನು ಆಡಿ, ತ್ರಿಪುರದ ಆದಿವಾಸಿಗಳನ್ನು ಅದಿವಾಸಿಯೇತರರ ವಿರುದ್ಧ ಎತ್ತಿಕಟ್ಟುವ ಅಪಾಯಕಾರಿ ಆಟಗಳನ್ನು ಹಿಂದೆ ಕಾಂಗ್ರೆಸ್ ಮಾಡಿತ್ತು. ಈಗ ಬಿಜೆಪಿ ಈ ಆಟವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದರು. ಮೊದಲಿಗೆ ‘ಸೌಹಾರ್ದ ಕರ್ನಾಟಕ’ದ ರಾಜ್ಯ ಸಂಯೋಜಕರಾದ ಬಿ. ರಾಜಶೇಖರ ಮೂರ್ತಿ ಸ್ವಾಗತಿಸಿದರು, ಮತ್ತೊಬ್ಬ ಸಂಯೋಜಕರಾದ ಆರ್. ರಾಮಕೃಷ್ಣ ವಂದಿಸಿದರು.
ಇದನ್ನೂ ನೋಡಿ: ಜನಾರೋಗ್ಯ ಮತ್ತು ರಾಜ್ಯ ಬಜೆಟ್ – ಡಾ. ಅನೀಲ್ ಕುಮಾರ್ ವಿಶ್ಲೇಷಣೆ Janashakthi Media