ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಐಟಿ ಅಧಿಕಾರಿಗಳು ರಾಜ್ಯದ ವಿವಿಧೆಡೆ 50 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇದರಲ್ಲಿ ಬಿಜೆಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮೇಲೆಯೂ ದಾಳಿ ನಡೆದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅವರ ಆಪ್ತರ ಮೇಲೆ ಆಗುತ್ತಿರುವ ಮೊದಲ ಐಟಿ ದಾಳಿ ಇದಾಗಿದೆ.
ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಆ ಬಾಡಿಗೆ ಮನೆಯಲ್ಲಿಯೇ ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳಿಂದ ಉಮೇಶ್ ವಿಚಾರಣೆ ನಡೆದಿದೆ. ಭಾಷ್ಯಂ ಸರ್ಕಲ್‌ನಲ್ಲಿ ಉಮೇಶ್ ಸುಮಾರು 10 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದಾರೆ. ಆದರೆ ಇಷ್ಟು ಚಿಕ್ಕ ಮನೆಗೇ ಭಾರೀ ಪ್ರಮಾಣದ ಸರ್ಕಾರಿ ಭದ್ರತೆ ಹಾಕಿಸಿಕೊಂಡಿದ್ದರು.
ಇದನ್ನು ಓದಿ: ಮನೆ ಕುಸಿದು 7 ಮಂದಿ ದುರ್ಮರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಉಮೇಶ್ ಮನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೀಲಗಳಲ್ಲಿ ಮೂಟೆ ಕಟ್ಟಿ ದಾಖಲೆಗಳನ್ನು ಕೊಂಡೊಯ್ಯಲಾಗಿದೆ. ಗುತ್ತಿಗೆದಾರರಿಗೆ ಸೇರಿದ ಸ್ಥಳಗಳಿಂದಲೂ ಬೃಹತ್ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.
ಉಮೇಶ್ ಮೂಲತಃ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು. ಆದರೆ ಅವರು ಬಿಎಂಟಿಸಿಯಲ್ಲಿ ಕೆಲಸ ಮಾಡಿದ್ದೇ ಕಡಿಮೆ ಎಂಬ ಮಾಹಿತಿಯಿದೆ. ಇಂದು ಬೆಳಗ್ಗೆ ಉಮೇಶ್ ಅವರಿಗೆ ಸೇರಿದ ನಾಲ್ಕೈದು ಆಸ್ತಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರಿನ ಯಲಹಂಕದ ಪುಟ್ಟೇನಹಳ್ಳಿಯ ಬಿಎಂಟಿಸಿ ಡಿಪೋದಲ್ಲಿ ವ್ಯಾಪ್ತಿಗೆ ಒಳಪಟ್ಟಿದ್ದು, ಬಿಎಂಟಿಸಿ ನಿರ್ವಾಹಕ ಕಂ ಚಾಲಕರಾಗಿ ನೇಮಕಗೊಂಡಿದ್ದ ಉಮೇಶ್ ಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸಲಿಲ್ಲ. ಅವರು ಹೆಚ್ಚಾಗಿ ಕೆಲಸ ಮಾಡಿದ್ದು ಯಡಿಯೂರಪ್ಪ ಅವರೊಂದಿಗೆ ಎನ್ನಲಾಗುತ್ತಿದೆ.
ಇದನ್ನು ಓದಿ: ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಬಹುದೆಂದು ವರಿಷ್ಠರ ಗಮನಕ್ಕೆ ತಂದಿರುವೆ: ಹೆಚ್ ವಿಶ್ವನಾಥ್
ಬಿಎಂಟಿಸಿ ನೌಕರನಾಗಿದ್ದುಕೊಂಡು ಉಮೇಶ್ ವೃತ್ತಿ ಆರಂಭಿಸಿದ್ದು ಬಿಜೆಪಿ ನಾಯಕರ ಆಯನೂರು ಮಂಜುನಾಥ್ ಅವರೊಂದಿಗೆ, ನಂತರ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಾಗಲೂ ಅವರೊಂದಿಗೆ ಉಮೇಶ್ ಇದ್ದರು. ಅವರ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಈಗ ಲಭ್ಯವಾಗುತ್ತಿದೆ.
ಉಮೇಶ್ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ ಎಂಬ ಆರೋಪಗಳಿವೆ. ಜೊತೆಗೆ ಬೆಂಗಳೂರಿನ ವಿಜಯನಗರದಲ್ಲಿಯೂ 60×120 ವಿಸ್ತೀರ್ಣದಲ್ಲಿ ಒಂದು ಭವ್ಯ ಮನೆಯನ್ನು ಉಮೇಶ್ ನಿರ್ಮಾಣ ಮಾಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.
ಕಳೆದ ಎರಡು ವರ್ಷಗಳಲ್ಲಿ ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆಯಾಗಿದ್ದು, ಇದರ ಆಧಾರದಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಶೇಕಡಾ 300 ರಷ್ಟು ಆದಾಯ ಒಮ್ಮೆಲೆ ಹೆಚ್ಚಾಗಿದ್ದು, ಕಳೆದ ಆರು ತಿಂಗಳುಗಳಿಂದ ಮಾಹಿತಿ ಕಲೆ ಹಾಕಿ ಅಂತಿಮವಾಗಿ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಅಲ್ಲದೆ, ಶಿವಮೊಗ್ಗ ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಅಪ್ತರಾಗಿದ್ದ ಉಮೇಶ್ ಅವರ ಬಹುತೇಕ ಎಲ್ಲಾ ಕೆಲಸಗಳನ್ನು ಉಮೇಶ್ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಉಮೇಶ್ ಸರ್ಕಾರದ ಕೆಲಸಗಳನ್ನು ಮಾಡಿಸುವಲ್ಲಿ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಿದ್ದರು.
ಈ ಹಿಂದೆ ಭದ್ರಾ ಮೇಲ್ಡಂಡೆ ಯೋಜನೆ ಟೆಂಡರ್ ವಿಚಾರವಾಗಿ ನಡೆದ ಅವ್ಯವಹಾರದ ಬಗ್ಗೆ ಯಡಿಯೂರಪ್ಪ ಕುಟುಂದವರ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಐಟಿ ದಾಳಿ ತೀವ್ರ ಕುತೂಹಲ ಮೂಡಿಸಿದೆ.