ಮೈಸೂರು: ನನಗೆ ಸ್ಥಾನಮಾನ ನೀಡುವಲ್ಲಿ ಬಿಜೆಪಿ ಪಕ್ಷ ನಿರ್ಲಕ್ಷ್ಯ ವಹಿಸಿದೆ ಎಂದು ಸ್ವಪಕ್ಷದ ಬಗ್ಗೆಯೇ ಬಿಜೆಪಿ ಮುಖಂಡ ಗಿರಿಧರ್ ಅಸಮಾಧಾನ ತೋಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೆದುರು ಕಣ್ಣೀರಿಟ್ಟು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಗಿರಿಧರ್, ಪಕ್ಷವನ್ನು ಯಾರೂ ಗುರುತಿಸದ ಕಾಲದಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದೇನೆ. ಬಹಳಷ್ಟು ಜನ ದಲಿತರನ್ನು ಬಿಜೆಪಿಗೆ ಕರೆ ತಂದಿದ್ದೇನೆ, ಬಹಳಷ್ಟು ಜನ ಮುಸ್ಲಿಮರನ್ನು ಎದುರು ಹಾಕಿಕೊಂಡಿದ್ದೇನೆ. ಪಕ್ಷ ಕಟ್ಟಿಲು, ಬೆಳೆಯಲು ನನ್ನನ್ನು ಬಳಸಿಕೊಂಡು ಈಗ ನನಗೆ ಯಾವ ಸ್ಥಾನಮಾನವನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2009ರಲ್ಲಿ ನಡೆದ ಕೋಮು ಗಲಭೆಯಲ್ಲಿ ಬಿಜೆಪಿಗಾಗಿ ರಕ್ತ ಹರಿಸಿದ್ದೇನೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದೇನೆ. ನನಗಾಗಿದ್ದ ಹಲ್ಲೆ ಬೇರೆಯವರಿಗೆ ಆಗಿದ್ದರೆ ಪಕ್ಷ ತೊರೆಯುತ್ತಿದ್ದರು. ಒಬ್ಬ ದಲಿತ ನಾಯಕನಿಗೆ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ಪರಿಷತ್ ಟಿಕೆಟ್ ನೀಡಿದ್ದಾರೆ, ನನಗೆ ನಿಗಮ ಮಂಡಳಿಯ ಸ್ಥಾನಮಾನವನ್ನಾದರೂ ಕೊಡಿ ಎಂದು ಕೇಳಿದರು ನನ್ನ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ 10 ದಿನ ಕಾಯುವೆ, ಯಾವುದೇ ಸ್ಥಾನಮಾನ ನೀಡದಿದ್ರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಅದಕ್ಕೂ ಜಗ್ಗದೆ ಹೋದರೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಸರಿಯಾದ ಪೆಟ್ಟು ಕೊಡುತ್ತೇನೆ ಎಂದು ಬಿಜೆಪಿ ಮುಖಂಡ ಗಿರಿಧರ್ ಹೇಳಿದ್ದಾರೆ.