ಬೆಂಗಳುರು: ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ನಿರ್ಬಂಧ ವಿಚಾರವಾಗಿ ಮಾತನಾಡುವ ವೇಳೆ, ಪ್ರತಿಪಕ್ಷದ ಉಪ ನಾಯಕ ಯು. ಟಿ. ಖಾದರ್ ‘ನಕಲಿ ಸರ್ಟಿಫಿಕೇಟ್ ಪಡೆದುಕೊಂಡು ಇಲ್ಲಿ ಮಾತನಾಡುತ್ತೀರಾ’ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ಗರಂ ಆದರು.
ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಬೇಡ ಜಂಗಮ ಸರ್ಟಿಫಿಕೇಟ್ ಪಡೆದ ಬಗ್ಗೆ ರೇಣುಕಾಚಾರ್ಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಧರಣಿ ನಡೆಸಿದ್ದಾರೆ. ಈ ವೇಳೆ ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಗಿದೆ.
ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ಮೇಲ್ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಪಿ. ರಾಜೀವ್ ಸದನದಲ್ಲಿ ನೆನ್ನೆ(ಮಾ.22) ಆರೋಪಿಸಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ಗೂಳಿಹಟ್ಟಿ ಶೇಖರ್, ಎಂ ಪಿ ರೇಣುಕಾಚಾರ್ಯ ಹೆಸರನ್ನು ಉಲ್ಲೇಖ ಮಾಡಿದ್ದರು.ಇದೇ ವಿಚಾರವನ್ನು ಯು. ಟಿ. ಖಾದರ್ ಸದನದಲ್ಲಿ ಉಲ್ಲೇಖಿಸಿ ರೇಣುಕಾಚಾರ್ಯ ವಿರುದ್ಧ ಆರೋಪ ಮಾಡಿದ್ದರು.
ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪುತ್ರಿ ಎಸ್.ಸಿ. ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ ನಡೆದಿದೆ. ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ನಿನ್ನೆ ಚರ್ಚೆ ಮಾಡಿದ್ದಾರೆ, ಇಂದು ಮತ್ತೆ ಚರ್ಚೆ ಏಕೆ ಎಂದು ಇದಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಎಂ.ಪಿ.ರೇಣುಕಾಚಾರ್ಯ ಲಿಂಗಾಯಿತರು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ’ಲಿಂಗಾಯಿತ’ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ, ಅವರ ಪುತ್ರಿ ಎಂ.ಆರ್. ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರ ನವೆಂಬರ್ 17ರಂದು ಬೆಂಗಳೂರಿನ ಉತ್ತರ ತಾಲೂಕು ತಹಸೀಲ್ದಾರ್ ಅವರಿಂದ ಪಡೆದಿದ್ದಾರೆ. ಆ ಜಾತಿ ಪ್ರಮಾಣಪತ್ರವನ್ನು ಯಾರೂ ಪ್ರಶ್ನಿಸಿಲ್ಲ. ಅದನ್ನು ಜಿಲ್ಲಾಧಿಕಾರಿಗಳು ಸರಿ ಇದೆಯೇ ಇಲ್ಲವೇ ಎಂದು ಪರಿಶೀಲನೆಯನ್ನೂ ನಡೆಸಿಲ್ಲ ಎನ್ನಲಾಗಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ರೇಣುಕಾಚಾರ್ಯ ಪುತ್ರಿ ಎಸ್.ಸಿ. ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ತಪ್ಪು. ಅದರ ಬಗ್ಗೆ ಮತ್ತೆ ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ. ರೇಣುಕಾಚಾರ್ಯ, ನಾನು ಸೌಲಭ್ಯ ಪಡೆದಿಲ್ಲ ಎಂದು ಹೇಳುವ ಅಗತ್ಯ ಇರಲ್ಲ. ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ಅದು ಅಪರಾಧ ಎಂದು ಪುನರುಚ್ಛರಿಸಿದರು.
ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ, ನಾನು ಯಾವುದೇ ಸವಲತ್ತು ಪಡೆದಿಲ್ಲ. ಈ ಹಿಂದೆ ಗುಲ್ಬರ್ಗಾದಲ್ಲಿ ಉಮೇಶ್ ಜಾಧವ್ ಸ್ಪರ್ಧಿಸಿದಾಗ ನನ್ನ ಸಹೋದರ ಸ್ಪರ್ಧೆ ಮಾಡಿದ್ದರು. ನನ್ನ ಸಹೋದರ ಹಾಗೂ ನಾನು ಮನೆಯಿಂದ ಇಬ್ಭಾಗವಾಗಿ 25 ವರ್ಷ ಆಯ್ತು. ನಾನು ಹೊನ್ನಾಳ್ಳಿ ಕ್ಷೇತ್ರದ ಜಾತ್ಯತೀತ ವ್ಯಕ್ತಿ. ಎರಡು ಸಾವಿರ ಜಾತಿ ಮತಗಳು ಇಲ್ಲ. ಎಲ್ಲಾ ಸಮುದಾಯದವರು ನನ್ನ ಗೌರವಿಸುತ್ತಾರೆ. ನನ್ನನ್ನು ಪ್ರೀತಿ ಮಾಡ್ತಾರೆ. ನನ್ನ ನಕಲಿ ಸರ್ಟಿಫಿಕೇಟ್ ಇದ್ದರೆ ಬಿಡುಗಡೆ ಮಾಡಬೇಕು. ಗುಲ್ಬರ್ಗಾದಲ್ಲಿ ಸಹೋದರ ಸ್ಪರ್ಧೆ ಮಾಡಿದಾಗ ನಾನೇ ಹೇಳಿದ್ದೆ. ನಾಮಪತ್ರ ವಾಪಸ್ ಪಡೆಯಬೇಕು. ನನ್ನ ಗೌರವ ಹೋಗುತ್ತೆ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡರು.
ಪುತ್ರಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದ ರೇಣುಕಾಚಾರ್ಯ, ನಾನು ಜಾತ್ಯತೀತ ವ್ಯಕ್ತಿ, ಯಾವುದೇ ಸವಲತ್ತು ಪಡೆದಿಲ್ಲ. ನನ್ನ ಸಹೋದರ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದಾನೆ. ನನ್ನ ಮಗಳಿಗೂ ಜಾತಿ ಪ್ರಮಾಣ ಪತ್ರ ಸೋದರ ಕೊಡಿಸಿದ್ದ. ಜಾತಿ ಪ್ರಮಾಣ ಪತ್ರವನ್ನ ನಾನೇ ವಾಪಸ್ ಮಾಡಿಸಿರುವೆ. ನಾನು ಯಾವುದೇ ಸವಲತ್ತು ಪಡೆದಿದ್ದರೆ ಗಲ್ಲಿಗೆ ಬೇಕಿದ್ದರೆ ಏರಿಸಿ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಈ ವೇಳೆ ವಿರೋಧ ಸಿದ್ದರಾಮಯ್ಯ ಮಾತನಾಡಿ, ರೇಣುಕಾಚಾರ್ಯ ವಿರುದ್ಧ ಕ್ರಮತೆಗೆದುಕೊಳ್ಳುವ ಅವಶ್ಯಕತೆ ಇದೆ. ಬೇರೆ ರೂಪದಲ್ಲಿ ಯಾರೇ ನಕಲಿ ಸರ್ಟಿಫಿಕೇಟ್ ತೆಗೆದುಕೊಂಡರೆ ಅದು ಅಪರಾಧ. ನಾನು ಏನು ಸೌಲಭ್ಯ ತೆಗೆದುಕೊಂಡಿಲ್ಲ, ತೆಗೆದುಕೊಂಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಅವರ ಸಹೋದರ ಚುನಾವಣೆಗೆ ನಿಂತಿದ್ದರು ಎಂದು ಅವರೇ ಹೇಳಿದ್ದಾರೆ. ಇದು ಅಪರಾಧ. ಅವರ ಸಹೋದರ ತೆಗೆದುಕೊಂಡರೂ ಒಕೆ, ಅವರು ಬೇರೆ ಬೇರೆ ಆಗಿದ್ದಾರೆ ಒಕೆ. ಆದರೆ ನಿಮ್ಮ ಮಗಳು ನಕಲಿ ಜಾತಿ ಸರ್ಟಿಫಿಕೇಟ್ ತೆಗೆದುಕೊಂಡರೆ ಅದು ಅಪರಾಧ, ಅದಕ್ಕೆ ನೀವೇ ಜವಾಬ್ದಾರರು ಎಂದರು.
ಇನ್ನು ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ರೇಣುಕಾಚಾರ್ಯ ಪುತ್ರಿ ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಕಾನೂನು ಪ್ರಕಾರ ಏನು ನಡೆಯಬೇಕೋ ಅದು ಆಗಲಿ. ಅದಕ್ಕೆ ಸರ್ಕಾರ ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ. ಅವರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗಾಗಿ ಈ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದರು.