ಬೆಳಗಾವಿ(ಸುವರ್ಣಸೌಧ): ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿಷಯವನ್ನು ನಿಯಮ 69 ರಡಿ ಚರ್ಚಿಸಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸದನದಲ್ಲಿ ಪಟ್ಟು ಹಿಡಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದಿದೆ.
ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಸಬೇಕೆಂದು ಸಿದ್ದರಾಮಯ್ಯ ಪ್ರಸ್ತಾವನೆ ಇಟ್ಟ ಕೂಡಲೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ನಿಯಮ 69ರಡಿ ಚರ್ಚಿಸಲು ಬರುವುದಿಲ್ಲ. ಇದನ್ನು ಬೇರೊಂದು ನಿಯಮದಡಿ ಚರ್ಚಿಸಲು ಅವಕಾಶ ಕೊಡುತ್ತೇನೆ ಎಂದರು.
ಇದನ್ನು ಓದಿ: ವಿಧಾನಮಂಡಲ ಅಧಿವೇಶನ; ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆ ಎಂದು?
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇದು ಅತ್ಯಂತ ಮಹತ್ವದ ಮತ್ತು ತುರ್ತಾಗಿರುವ ವಿಷಯ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತಂತೆ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಪ್ರತಿದಿನ ಸರ್ಕಾರದ ಮೇಲೆ ಒಂದಲ್ಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಹೀಗಾಗಿ ಸಾರ್ವಜನಿಕ ಮಹತ್ವದ ವಿಷಯವಾಗಿದ್ದು ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ನಾನು ಈ ಹಿಂದೆಯೂ ಪ್ರಸ್ತಾಪಿಸಿದ್ದೆ. ಆಗಲೂ ಸರ್ಕಾರ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಪ್ರತಿಬಾರಿಯೂ ಒಂದಲ್ಲಾ ಒಂದು ಸಬೂಬು ಹೇಳಿ ಸರ್ಕಾರ ನುಣುಚಿಕೊಳ್ಳುತ್ತಿದೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಇಷ್ಟವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಬಜೆಟ್ ಅಧಿವೇಶನ ವೇಳೆ ರೈತ-ಕಾರ್ಮಿಕರು-ಕೂಲಿಕಾರರ ಸಂಸತ್ ಚಲೋ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಾವು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಿಯಮ 69ರಡಿ ಚರ್ಚೆ ಆರಂಭಿಸಿದರೆ ಕೇವಲ ಪ್ರತಿಪಕ್ಷದ ಸದಸ್ಯರಷ್ಟೇ ಚರ್ಚೆಗೆ ಭಾಗಿಯಾಗಲು ಅವಕಾಶವಿದೆ. ಎಲ್ಲ ಸದಸ್ಯರೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಇಚ್ಚೆ. ಸರ್ಕಾರ ಎಲ್ಲಿಯೂ ಕೂಡ ಚರ್ಚೆಗೆ ಹೆದರುತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರು, ಪ್ರತಿ ಬಾರಿಯೂ ನಾವು ಚರ್ಚೆಗೆ ಹೆದರುತ್ತಿದ್ದೇವೆ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾವು ಚರ್ಚೆಗೆ ಸಿದ್ದವಿದ್ದೇವೆ. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಬೇಕಾದರೆ ಅದು ಇತ್ತೀಚಿನ ಘಟನೆಯಾಗಬೇಕು. ನಿಯಮಗಳನ್ನು ಗಾಳಿಗೆ ತೂರಿ ಸದನ ನಡೆಸಲು ಅವಕಾಶವಿಲ್ಲ ಎಂದು ಪ್ರತ್ಯೂತ್ತರ ನೀಡಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ