ಬಿಜೆಪಿ-ಆರ್‌ಎಸ್‌ಎಸ್‌ ಅನ್ನು ಸೈದ್ಧಾಂತಿಕವಾಗಿ ಎದುರಿಸಬೇಕಿದೆ: ರಾಹುಲ್‌ ಗಾಂಧಿ

ನವದೆಹಲಿ: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಸೈದ್ಧಾಂತಿಕವಾಗಿ ವಿರೋಧಿಸುವ ವಿಪಕ್ಷಗಳ ಧ್ವನಿ ಗಟ್ಟಿಯಾಗಬೇಕಾದ ಸಮಯ ಬಂದಿದೆ. ದೇಶದ ಜ್ವಲಂತ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ಮೋದಿ ಸರ್ಕಾರ, ಜನರನ್ನು ಒಡೆದು ಆಳುವ ಆರ್‌ಎಸ್‌ಎಸ್‌ನ ದುಷ್ಟ ನೀತಿಯಂತೆ ನಡೆದುಕೊಳ್ಳುತ್ತಿದೆ. ಕೋಮುವಾದಿ ರಾಜಕಾರಣವನ್ನು ಸೋಲಿಸಲು ಜಾತ್ಯಾತೀತ ಮನೋಭಾವದ ಎಲ್ಲಾ ಪಕ್ಷಗಳು ಒಂದಾಗಬೇಕಾಗಿದೆ ಎಂದು ರಾಹುಲ್‌ ಗಾಂಧಿ ಕರೆ ನೀಡಿದರು.

ರಾಹುಲ್ ಗಾಂಧಿ ನಿವಾಸದಲ್ಲಿ ವಿರೋಧ ಪಕ್ಷದ ನಾಯಕರಿಗೆ ಉಪಾಹರ ಕೂಟ ಏರ್ಪಡಿಸಿದರು. 17 ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ಮೋದಿ ಪ್ರಜಾಪ್ರಭುತ್ವ ನೀತಿಗಳನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.

“ನನ್ನ ದೃಷ್ಟಿಯಲ್ಲಿ ಒಂದೇ ಒಂದು ಮುಖ್ಯವಾದ ವಿಷಯವೆಂದರೆ ನಾವು ಆಡಳಿತ ಪಕ್ಷದ ಅನ್ಯಾಯದ ವಿರುದ್ದ ಬಲಗೊಳ್ಳುವುದು ಹಾಗೂ ಎಲ್ಲರನ್ನು ಒಂದುಗೂಡಿಸುವುದು. ಈ ಧ್ವನಿಯು ಜನರ ಮಧ್ಯೆಯೂ ಹೆಚ್ಚು ಹೆಚ್ಚು ಒಗ್ಗೂಡಬೇಕಾಗಿದೆ. ಆಗ ಮತ್ತಷ್ಟು ಶಕ್ತಿಯುತವಾಗಲಿದೆʼʼ ಎಂದು ಹೇಳಿದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಹಾಗೂ ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ಸಾಕಷ್ಟು ಸದ್ದು ಮಾಡುತ್ತಿದ್ದು, ವಿರೋಧ ಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಈ ಮಧ್ಯೆ ರಾಹುಲ್ ಗಾಂಧಿ ವಿಪಕ್ಷ ನಾಯಕರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದು, ಅದರಂತೆ ಪ್ರಮುಖ ನಾಯಕರು ಸಭೆಯಲ್ಲಿ  ಭಾಗವಹಿಸಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಪ್ರಮುಖ ವಿರೋಧ ಪಕ್ಷ ಸದಸ್ಯರು ಭಾಗವಹಿಸಿದ್ದರು. ಆದರೆ ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಭಾಗವಹಿಸದಿರುವುದು ಕೂಡ ಗಮನ ಸೆಳೆದಿದೆ.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಸರ್ಕಾರ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ನಮ್ಮ ಪ್ರತಿಭಟನೆ ರಸ್ತೆಯಿಂದ ಸಂಸತ್ ವರೆಗೂ ನಡೆಯಬೇಕು. ಅದೇ ರೀತಿ ಸದನದಲ್ಲಿ ಕೊರೊನಾ ಮತ್ತು ಪೆಗಾಸಸ್ ಸಂಬಂಧ ಸುಧೀರ್ಘ ಚರ್ಚೆ ನಡೆಯಬೇಕಿದೆ  ಎಂದು ಹೇಳಿದರು.

ಈ ಅನೌಪಚಾರಿಕ ಸಭೆಯ ನೇತೃತ್ವ ವಹಿಸಿದ್ದ ರಾಹುಲ್​ಗಾಂಧಿ, ಪೆಗಾಸಸ್ ವಿವಾದ ಮತ್ತು ರೈತರ ಆಂದೋಲನಗಳ ವಿರುದ್ಧ ಉಭಯ ಸದನಗಳಲ್ಲಿ ಆಡಳಿತ ಪಕ್ಷದವರಿಂದ ಸಮರ್ಪಕವಾಗಿ ಉತ್ತರ ಸಿಗದೆ ಇರುವ ಕಾರಣ ಹಾಗೂ ಜೋರು ಪ್ರತಿಭಟನೆಗಳನ್ನು ಎದುರಿಸುತ್ತಿರುವುದರಿಂದ ಸಂಸತ್ತಿನ ಆವರಣದಲ್ಲಿ ‘ಅಣಕು ಸಂಸತ್ತು’ ನಡೆಸುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಂದು ಆರಂಭವಾಗಿದ್ದು, ಮೊದಲ ಎರಡು ವಾರಗಳಲ್ಲಿ 107 ಗಂಟೆಗಳಲ್ಲಿ ಕೇವಲ 18 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ಪ್ರತಿಪಕ್ಷಗಳ ಅಡಚಣೆಗಳಿಂದಾಗಿ 133 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

 

Donate Janashakthi Media

Leave a Reply

Your email address will not be published. Required fields are marked *