ಕಲಬುರಗಿ: ಜನರು ಆರ್ಥಿಕ ಸಮಾನತೆ ಸಾಧಿಸುವುದು, ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಬಿಜೆಪಿಯವರಿಗೆ ಬೇಕಿಲ್ಲ. ಹಾಗಾಗಿ, ಆರ್ಥಿಕ ಸಬಲೀಕರಣ ಸಾಧಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಅನುಭವಿಸಿದ್ದರಿಂದ ಅಭಿವೃದ್ದಿಯಲ್ಲಿ ಕುಂಠಿತ ಕಂಡಿದ್ದು ಈ ಭಾಗ ದಶಕಗಳ ಕಾಲ ಹಿಂದೆ ಬಿದ್ದಿದೆ. ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರ ವಿರುದ್ದ ಗೋ ಬ್ಯಾಕ್ ಅಭಿಯಾನ ಪ್ರಾರಂಭವಾಗಿದೆ. ಸಾರ್ವಜನಿಕರು ಕೇಳುವ ಅಭಿವೃದ್ದಿಯ ಲೆಕ್ಕ ಕೊಡಲು ಅವರು ವಿಫಲರಾಗಿದ್ದಾರೆ ಎಂದರು.
ಇದನ್ನೂ ಓದಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಬ್ಲಿಂಕ್ ಮಾಡಿದ ಆಕ್ಷೇಪಾರ್ಹ ಫೋಟೋ: ದೂರು ದಾಖಲು
“ಉಮೇಶ ಜಾಧವನ ಒಂದೇ ಒಂದು ಸಾಧನೆ ಎಂದರೆ ಅದು ವಂದೇ ಭಾರತ್ ಟ್ರೇನ್ ಓಡಿಸಿರುವುದು. ವಂದೇ ಭಾರತ್ ಟ್ರೇನ್ ಓಡಿದ್ದು ಒಂದೇ ವಾರ ಮಾತ್ರ. ಈಗ ಮತ್ತೆ ಪ್ರಾರಂಭ ಮಾಡಿದ್ದಾರಂತೆ. ಈ ಜಾಧವ ಮೊದಲು ನಮ್ಮಲ್ಲೆ ಇದ್ದವರು. ಓದಿದ್ದು, ಉದ್ಯೋಗ ಗಿಟ್ಟಿಸಿಕೊಂಡಿದ್ದು, ರಾಜಕೀಯ ನೆಲೆ ಕಂಡುಕೊಂಡಿದ್ದು, ಟಿಕೇಟ್ ಪಡೆದು ಗೆದ್ದಿದ್ದಿ ಕೂಡಾ ನಮ್ಮ ಕಾಂಗ್ರೆಸ್ ನಿಂದಲೇ. ಆದರೆ ಕಾಂಗ್ರೆಸ್ ಏನು ಮಾಡಿದ್ದು ಅಂತಾನೆ. ಇದು ಉಂಡ ತಟ್ಟೆಯಲ್ಲೇ ಹೊಲಸು ಮಾಡಿದಂತೆ” ಎಂದು ಖರ್ಗೆ ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳ ಲಾಭ ಜಾಸ್ತಿ ಹೋಗುತ್ತಿರುವುದೇ ಮಹಿಳೆಯರಿಗಾಗಿ ಯಾಕೆಂದರೆ ನಮಗೆ ಮಹಿಳೆಯರ ಮೇಲೆ ಜಾಸ್ತಿ ವಿಶ್ವಾಸವಿದೆ, ಭರವಸೆ ಇದೆ. ಪುರುಷರಿಗೆ ಹಣ ಕೊಟ್ಟರೆ ವ್ಯರ್ಥ ಖರ್ಚು ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
ಆನೇಕಲ್ ಶಾಸಕ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಮಹೇಬೂಬ್ ಸಾಹೇಬ, ನಾಗರೆಡ್ಡಿ ಪಾಟೀಲ, ಶಿವಾನಂದ ಪಾಟೀಲ, ರಮೇಶ ಮರಗೋಳ, ಮುಕ್ತಾರ್ ಪಟೇಲ್ ಮತ್ತಿತ್ತರರು ಇದ್ದರು.
ಇದನ್ನೂ ನೋಡಿ: ರಾಯಚೂರು ಲೋಕಸಭೆ : ಬಿಜೆಪಿಯೊಳಗೆ ಬಂಡಾಯ, ಕಾಂಗ್ರೆಸ್‌ನೊಳಗೆ ಬೇಗುದಿ Janashakthi Media