ಗಾಜಾ ನರಮೇಧದ ವಿರುದ್ಧ ಯು.ಎಸ್  ಮತ್ತು ಜಗತ್ತಿನ ನೂರಾರು ವಿ.ವಿ ಗಳಲ್ಲಿ ಬೃಹತ್ ವಿದ್ಯಾರ್ಥಿ ಚಳುವಳಿ

– ವಸಂತರಾಜ ಎನ್.ಕೆ

 ಯು.ಎಸ್ ನ (ಪ್ರತಿಷ್ಟಿತ ಕೊಲಂಬಿಯ, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಸೇರಿದಂತೆ ) ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಕಳೆದ ಕೆಲವು ವಾರಗಳಿಂದ ಗಾಜಾ ನರಮೇಧ-ವಿರೋಧಿ ಪ್ರದರ್ಶನಗಳು, ಪ್ರತಿಭಟನೆಗಳು ನಡೆಯುತ್ತಿದ್ದು, ಈಗ ಅದು ಪೋಲಿಸರ ದಮನದಿಂದ ತಾರಕಕ್ಕೆ ಹೋಗಿದೆ.  1968ರ ವಿಯೇಟ್ನಾಂ ಯುದ್ಧ-ವಿರೋಧಿ ಮತ್ತು 1980ರ ದಶಕದ ದ.ಆಫ್ರಿಕಾದ ವರ್ಣಬೇಧದ ಸರಕಾರದ ವಿರುದ್ಧ ದೇಶದಾದ್ಯಂತ ನಡೆದ ಭಾರೀ ವಿದ್ಯಾರ್ಥಿ ಚಳುವಳಿಗಳ ನಂತರ ಇದು ಅತಿ ದೊಡ್ಡ ವಿದ್ಯಾರ್ಥಿ ಚಳುವಳಿ ಎನ್ನಲಾಗಿದೆ. ಚಳುವಳಿಯ ವ್ಯಾಪಕತೆ ಹಿಂದಿನ ಈ ಎರಡು ಚಳುವಳಿಗೆ ಹೋಲುವಂತಿದ್ದರೂ, ಸರಕಾರ ಈ ಚಳುವಳಿಯ ವಿರುದ್ಧ ಹರಿಯ ಬಿಟ್ಟಿರುವ ಪೋಲಿಸ್ ದಮನ ಅವನ್ನೂ ಮೀರಿಸಿದೆ ಎನ್ನಲಾಗಿದೆ.

ಇಂದು (ಮೇ 1) ಯು.ಎಸ್ ನ ಹಲವು ವಿಶ್ವವಿದ್ಯಾಲಯ (ವಿವಿ) ಕ್ಯಾಂಪಸುಗಳಲ್ಲಿ ಗಾಜಾ ನರಮೇಧದ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಧರಣಿ ಕ್ಯಾಂಪುಗಳಿಂದ ಹೊರಗೆ ಹಾಕಲು ಸಶ್ತಸ್ತ್ರ ಪೋಲಿಸ್ ತುಕಡಿಗಳನ್ನು ಕಳಿಸಲಾಯಿತು. ಅದನ್ನು ಪ್ರತಿರೋಧಿಸಿದ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಯು.ಎಸ್ ನ ಹಲವು ವಿವಿಗಳಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು  ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.  ಹಲವು ವಿವಿ ಕ್ಯಾಂಪಸುಗಳಲ್ಲಿ ಇಸ್ರೇಲಿ-ಪರ ಮತ್ತು ಪ್ಯಾಲೆಸ್ಟೈನ್-ಪರ ವಿದ್ಯಾರ್ಥಿಗಳ ಗುಂಪುಗಳ ನಡುವೆ ಘರ್ಷಣೆಯಾಯಿತು. ಹಲವು ಕಡೆ ಪ್ಯಾಲೆಸ್ಟೈನ್-ಪರ ವಿದ್ಯಾರ್ಥಿ ನಾಗರಿಕರ ಗುಂಪನ್ನು ತಡೆದ ಪೋಲೀಸರು, ತಥಾಕಥಿತ ‘ಇಸ್ರೇಲಿ-ಪರ’ ಗ್ಯಾಂಗುಗಳನ್ನು ತಡೆಯಲಿಲ್ಲ. ಕೆಲವು ವಿವಿಗಳಲ್ಲಿ ಅದೇ ಕ್ಯಾಂಫಸ್ಸಿನ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳಾದರೆ ಹಲವು ಕಡೆ ಇಸ್ರೇಲಿ-ಪರ ಗ್ಯಾಂಗುಗಳು ಹೊರಗಿಂದ ಬಂದವು. ಇವು ಸರಕಾರಿ ಬೆಂಬಲಿತ ಗುಂಪುಗಳು, ಈ ಗುಂಪುಗಳು ಲಾಠಿ ಇತರ ಭಾರಿ ವಸ್ತುಗಳಿಂದ ದಾಳಿ ಮಾಢಿದ್ದಲ್ಲದೆ ಕ್ಯಾಂಪುಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು ಎಂದು ಪ್ಯಾಲೆಸ್ಟೈನ್-ಪರ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.  ಯು.ಎಸ್ ನ ಹೆಚ್ಚಿನ ಪ್ರತಿಷ್ಟಿತ (ಕೊಲಂಬಿಯ, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಸೇರಿದಂತೆ ) ವಿವಿಗಳಲ್ಲಿ ಕಳೆದ ಕೆಲವು ವಾರಗಳಿಂದ ಪ್ರದರ್ಶನಗಳು, ಪ್ರತಿಭಟನೆಗಳು ನಡೆಯುತ್ತಿದ್ದು, ಈಗ ಅದು ತಾರಕಕ್ಕೆ ಹೋಗಿದೆ.  ಹಲವು ವಿವಿ ಗಳು ಹೆಚ್ಚು ಕಡಿಮೆ ರಣರಂಗವಾಗಿವೆ.

ಯು.ಎಸ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ಬಂಧನ

ಕಳೆದ ಎರಡು ವಾರಗಳಲ್ಲಿ, ಇಸ್ರೇಲಿನ  ನರಮೇಧದ ಆಕ್ರಮಣ ಏಳನೇ ತಿಂಗಳಿಗೆ ಪ್ರವೇಶಿಸುತ್ತಿದ್ದಂತೆ ಯು.ಎಸ್ ನಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಪ್ಯಾಲೇಸ್ಟಿನಿಯನ್ ಜನತೆಗೆ ಸೌಹಾರ್ದ ಬೆಂಬಲ ಘೋಷಿಸಿ ತಮ್ಮ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸ್ ಗಳಲ್ಲಿ ಶಿಬಿರ (ಕ್ಯಾಂಪು)ಗಳನ್ನು ಪ್ರಾರಂಭಿಸಿದ್ದಾರೆ. ಗಾಜಾ ನರಮೇಧ ನಿಲ್ಲಬೇಕು, ಇದಕ್ಕಾಗಿ ಯು.ಎಸ್ ಸರಕಾರ ಇಸ್ರೇಲಿಗೆ ಎಲ್ಲಾ ಮಿಲಿಟೆರಿ ನೆರವು/ಪೂರೈಕೆ ನಿಲ್ಲಿಸಬೇಕು ಎಂದು ಯು.ಎಸ್ ಸರಕಾರವನ್ನು ಒತ್ತಾಯಿಸಲು ಮಾತ್ರ ವಿದ್ಯಾರ್ಥಿಗಳು ಪ್ರತಿಭಟನಾ ಪ್ರದರ್ಶನ ಮಾಡುತ್ತಿಲ್ಲ. ತಮ್ಮ ವಿಶ್ವವಿದ್ಯಾನಿಲಯಗಳು ಇಸ್ರೇಲಿನೊಂದಿಗೆ ಎಲ್ಲಾ ಶೈಕ್ಷಣಿಕ ಪಾಲುದಾರಿಕೆಯನ್ನು ಕಡಿತಗೊಳಿಸಬೇಕು ಹಾಗೂ ಇಸ್ರೇಲ್ ಮತ್ತು ಇಸ್ರೇಲಿನೊಂದಿಗೆ ವ್ಯಾಪಾರ ಮಾಡುವ ಮತ್ತು ಪ್ಯಾಲೆಸ್ಟೈನ್/ಗಾಜಾ ಮೇಲೆ  ಅಕ್ರಮ ಆಕ್ರಮಣದಿಂದ ಪ್ರಯೋಜನ ಪಡೆಯುವ ಎಲ್ಲ ಕಂಪನಿಗಳ ದತ್ತಿ ನಿರಾಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಶಿಬಿರಗಳಲ್ಲಿ ಉಳಿಯುವುದಾಗಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳು ಕ್ಯಾಂಪಸ್ ಗಳನ್ನು ಹೆಚ್ಚು ಕಡಿಮೆ ವಶಪಡಿಸಿಕೊಂಡಿದ್ದಾರೆ.

1968ರ ವಿಯೇಟ್ನಾಂ ಯುದ್ಧ-ವಿರೋಧಿ ಮತ್ತು 1980ರ ದಶಕದ ದ.ಆಫ್ರಿಕಾದ ವರ್ಣಬೇಧದ ಸರಕಾರದ ವಿರುದ್ಧ ದೇಶದಾದ್ಯಂತ ನಡೆದ ಭಾರೀ ಚಳುವಳಿಗಳ ನಂತರ ಇದು ಅತಿ ದೊಡ್ಡ ವಿದ್ಯಾರ್ಥಿ ಚಳುವಳಿ ಎನ್ನಲಾಗಿದೆ. ಚಳುವಳಿಯ ವ್ಯಾಪಕತೆ ಹಿಂದಿನ ಈ ಎರಡು ಚಳುವಳಿಗೆ ಹೋಲುವಂತಿದ್ದರೂ, ಸರಕಾರ ಈ ಚಳುವಳಿಯ ವಿರುದ್ಧ ಹರಿಯ ಬಿಟ್ಟಿರುವ ಪೋಲಿಸ್ ದಮನ ಮಾತ್ರ ಅವೆರಡನ್ನೂ ಮೀರಿಸಿವೆ ಎನ್ನಲಾಗಿದೆ.

ಹಲವು ವಾರಗಳಿಂದ ನಡೆಯುತ್ತಿದ್ದು ಯು.ಎಸ್ ನ ಹೆಚ್ಚೆಚ್ಚು ವಿ.ವಿಗಳಿಗೆ ಕಾಲೇಜುಗಳಿಗೆ ವ್ಯಾಪಿಸುತ್ತಿರುವ ಈ ಚಳುವಳಿಯನ್ನು ಹತ್ತಿಕ್ಕಲು ವಿವಿ ಆಡಳಿತ ಪೋಲಿಸ್ ಕರೆಸಲು ಆರಂಭಿಸಿದಂತೆ ಪರಿಸ್ಥಿತಿ ಬಿಗಡಾಯಿಸಿದೆ.

ಗಾಜಾ ನರಮೇಧದ ವಿರುದ್ಧ ಯು.ಎಸ್  ಮತ್ತು ಜಗತ್ತಿನ ನೂರಾರು ವಿ.ವಿ ಗಳಲ್ಲಿ ಬೃಹತ್ ವಿದ್ಯಾರ್ಥಿ ಚಳುವಳಿ

ಗಾಜಾ ಸೌಹಾರ್ದ ಕ್ಯಾಂಪುಗಳ ಮೇಲೆ ‘ಇಸ್ರೇಲ್-ಪರ ‘ ಗ್ಯಾಂಗ್ ಗಳ ದಾಳಿ

ಏಪ್ರಿಲ್ 29 ರಂದು, ಕೊಲಂಬಿಯಾ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ತಮ್ಮ ಶಿಬಿರವನ್ನು ಖಾಲಿ ಮಾಡಲು ಮಧ್ಯಾಹ್ನ 2 ಗಂಟೆಯವರೆಗೆ ಗಡುವು ನೀಡಿದ ನಂತರ, ಹಾಸ್ಟೆಲುಗಳಿಂದ ಹೊರಹಾಕಲ್ಪಟ್ಟ  ಮತ್ತು ಅಮಾನತುಗೊಳಿಸಿದ ನಂತರ, ಅಧ್ಯಾಪಕರು ವಿದ್ಯಾರ್ಥಿಗಳನ್ನು ರಕ್ಷಿಸಲು ಶಿಬಿರದ ಸುತ್ತಲೂ ಮಾನವ ಸರಪಳಿಯನ್ನು ರಚಿಸಿದರು. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಮುದಾಯದ ಸಾಮೂಹಿಕ ಬೆಂಬಲದ ಕಾರಣ, ವಿದ್ಯಾರ್ಥಿಗಳು ಆಡಳಿತದ ಗಡುವನ್ನು ಧಿಕ್ಕರಿಸಲು ಮತ್ತು ಶಿಬಿರದಲ್ಲಿ ಉಳಿಯಲು ಸಾಧ್ಯವಾಯಿತು. ಕೊಲಂಬಿಯಾದಲ್ಲಿ ಝಿಯೋನಿಸ್ಟ್ (ಜ್ಯೂ ಮೂಲಭೂತವಾದಿ ಇಸ್ರೇಲ್-ಪರ) ಚಳವಳಿಗಾರರು ಮತ್ತು ಪ್ರತಿಭಟನಕಾರರು ಮತ್ತು ಪೊಲೀಸರಿಂದ ಶಿಬಿರವನ್ನು ರಕ್ಷಿಸುವಲ್ಲಿ ಅಧ್ಯಾಪಕರು ಪ್ರಮುಖ ಪಾತ್ರ ವಹಿಸಿದರು.

ಶಿಬಿರಗಳನ್ನು ನಡೆಸುವ ವಿದ್ಯಾರ್ಥಿಗಳು ಝಿಯೋನಿಸ್ಟರಿಂದ ಬೆದರಿಕೆಗೆ ಒಳಗಾಗಿದ್ದಾರೆ, ಅವರು ಪ್ಯಾಲೆಸ್ಟೈನ್ ಪರ ಕಾರ್ಯಕರ್ತರು ಎದುರಿಸುತ್ತಿರುವ ಅದೇ ಮಟ್ಟದ ಪೊಲೀಸ್ ದಮನವಿಲ್ಲದೆ ಬೃಹತ್ ರ್ಯಾಲಿಗಳನ್ನು ನಡೆಸಲು ಸಮರ್ಥರಾಗಿದ್ದಾರೆ. ಇದು ಏಪ್ರಿಲ್ 28 ರಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ – ಲಾಸ್ ಏಂಜಲೀಸ್ ನಲ್ಲಿ ಝಿಯೋನಿಸ್ಟರ ದೊಡ್ಡ ರ್ಯಾಲಿಯನ್ನು ಒಳಗೊಂಡಿದೆ, ಇದರ ಪರಿಣಾಮವಾಗಿ ಬಲಪಂಥೀಯ ಝಿಯೋನಿಸ್ಟರು  ಕಪ್ಪು ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ವಾಗ್ವಾದಗಳು ಮತ್ತು ಜನಾಂಗೀಯ ಟೀಕೆಗಳನ್ನು ಮಾಡಿದರು. ಝಿಯೋನಿಸ್ಟರು ತಮ್ಮ ಶಿಬಿರದ ಹೊರಗೆ ಇಲಿಗಳಿಂದ ತುಂಬಿದ ಹೊರೆಯನ್ನು ಬೀಳಿಸಿದರು. ಪೋಲಿಸರು ವಿದ್ಯಾರ್ಥಿಗಳನ್ನು ಚದುರಿಸಲು ಕ್ಯಾಂಪುಗಳನ್ನು ತೆರವುಗೊಳಿಸಲು ಮಾರಕವಲ್ಲದ ರಾಸಾಯನಿಕಗಳು ಮತ್ತು ಮೆಣಸಿನ ಪುಡಿ ಪ್ರಹಾರ  ಮಾಡಿದರು ಎಂದು ವಿದ್ಯಾರ್ಥಿ ಸಂಘಟಕರು ಹೇಳುತ್ತಾರೆ.

ಇದನ್ನು ನೋಡಿ : ಹಳಸಲು ಹಿಂದುತ್ವ ಮಿಥ್ಯೆಗಳ ಹೊಸ ಮೋದಿ ಆವೃತ್ತಿ

ಇಂಡಿಯಾನಾ ವಿವಿ ಬ್ಲೂಮಿಂಗ್ಟನ್ ಸೇರಿದಂತೆ ವಿದ್ಯಾರ್ಥಿಗಳ ವಿರುದ್ಧ ಕ್ಯಾಂಪಸ್ ಗಳಲ್ಲಿ ಸ್ನೈಪರ್ (ಅಡಗುತಾಣದಿಂದ ದೂರದಿಂದ ನಿಖರವಾಗಿ ಶೂಟ್ ಮಾಡಬಲ್ಲ ಪರಿಣತರು) ಗಳನ್ನು ನಿಯೋಜಿಸಲಾಗಿದೆ, ವಿವಿ ಆಡಳಿತ ಶಿಬಿರವನ್ನು ನಡೆಸುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿ, ಅಶ್ರುವಾಯು, ಶಸ್ತ್ರಸಜ್ಜಿತ ವಾಹನಗಳು, ಗಲಭೆ ಗೇರ್ ಮತ್ತು ಆಕ್ರಮಣಕಾರಿ ರೈಫಲ್ ಸಜ್ಜಿತ, ಜೊತೆಗೆ ಸ್ನೈಪರ್ ಗಳನ್ನು ಹೊಂದಿದ  SWAT ತಂಡವನ್ನು ತರಿಸಿದೆ.   ಆದಾಗ್ಯೂ, ಸಮುದಾಯದ ಬೆಂಬಲದ ಬೃಹತ್ ಹೊರಹರಿವಿನ ನಂತರ, ಪೊಲೀಸರನ್ನು ಶಿಬಿರದಿಂದ ಯಶಸ್ವಿಯಾಗಿ ಹೊರಹಾಕಲಾಯಿತು. ಏಪ್ರಿಲ್ 26 ರಂದು ಓಹಿಯೋ ಸ್ಟೇಟ್ ವಿವಿಯ ಗಾಜಾ ಸಾಲಿಡಾರಿಟಿ ಶಿಬಿರದ ಬಳಿ ಸ್ನೈಪರ್  ಗಳು ಕಾಣಿಸಿಕೊಂಡರು.

ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ  ರಾಸಾಯನಿಕ ಸ್ಪ್ರೇ ಸಿಂಫಡಿಸುತ್ತಿರುವುದು

ಟೆಕ್ಸಾಸ್ ವಿವಿ – ಆಸ್ಟಿನ್  ನಲ್ಲಿ ವಿದ್ಯಾರ್ಥಿಗಳು ದಮನವನ್ನು ಧಿಕ್ಕರಿಸಿದ್ದಾರೆ, ಅಲ್ಲಿ ಕಳೆದ ವಾರ, ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಗಾಜಾ ಸಾಲಿಡಾರಿಟಿ ಶಿಬಿರವನ್ನು ನಡೆಸುವ ವಿದ್ಯಾರ್ಥಿಗಳ ವಿರುದ್ಧ ರಾಜ್ಯ ಸೈನಿಕರನ್ನು ನಿಯೋಜಿಸಿದರು. ಏಪ್ರಿಲ್ 29 ರಂದು, ಸೈನಿಕರನ್ನು ಮತ್ತೊಮ್ಮೆ ಕ್ಯಾಂಪಸ್ ಗೆ  ಕಳುಹಿಸಲಾಯಿತು, ಅಲ್ಲಿ ಅವರು ಬಂಧಿಸಲು ಪ್ರಯತ್ನಿಸಿದರು ಆದರೆ ಸೈನಿಕರು ವಿದ್ಯಾರ್ಥಿಗಳಿಗೆ ಮೆಣಸು ಸಿಂಪಡಿಸುತ್ತಿದ್ದರೂ ವಿದ್ಯಾರ್ಥಿಗಳು ಮತ್ತು ಬೆಂಬಲಿಗರಿಂದ ಯಶಸ್ವಿಯಾಗಿ ಪ್ರತಿರೋಧ ಒಡ್ಡಲಾಯಿತು.

ಯುಎಸ್ ಮತ್ತು ವಿಶ್ವದಾದ್ಯಂತದ ಗಾಜಾ ಸಾಲಿಡಾರಿಟಿ ಶಿಬಿರಗಳಲ್ಲಿನ ವಿದ್ಯಾರ್ಥಿಗಳು ಗಾಜಾದಲ್ಲಿ 200 ದಿನಗಳನ್ನು ದಾಟಿ  ಮುಂದುವರೆಯುತ್ತಿರುವ  ನರಮೇಧದ ಮೇಲೆ ಬೆಳಕು ಚೆಲ್ಲುವುದನ್ನು ಮುಂದುವರೆಸಿದ್ದಾರೆ.  ಪ್ಯಾರೀಸ್, ಆಕ್ಸ್ಟ್ ಫರ್ಡ್, ಟೋಕಿಯೊ, ಟರ್ಕಿ, ಮೆಕ್ಸಿಕೊ, ಇಟಲಿ, ಹಾಗೆಯೇ ಕುವೈತ್, ಜೋರ್ಡಾನ್ ಮತ್ತು ಅಲ್ಜೀರಿಯಾ ಸೇರಿದಂತೆ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಪ್ಯಾಲೆಸ್ಟೈನ್-ಪರ ಚಳುವಳಿಗೆ ಸೇರಿಕೊಂಡಿದ್ದಾರೆ. ಪ್ರಸ್ತುತ ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ಶಿಬಿರಗಳಲ್ಲಿ ಧರಣಿ ಮುಂದುವರೆದಿದೆ.

ಈ ದಮನವು ಒಂದು ಕಡೆ ಚಳುವಳಿಯನ್ನು ಮುಗಿಸುವ ಪ್ರಯತ್ನದಲ್ಲಿದ್ದರೆ, ಇನ್ನೊಂದು ಕಡೆ ಚಳುವಳಿಯ ದಮದ ಸುದ್ದಿ ಚಳುವಳಿಯನ್ನು ಬಲಪಡಿಸಲು ಮತ್ತು ಅದರ ಗೋಚರತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ, US ನಲ್ಲಿ ಮಾತ್ರವಲ್ಲದೆ ಕೆನಡಾ, ಫ್ರಾನ್ಸ್, UK, ಆಸ್ಟ್ರೇಲಿಯಾ ಮತ್ತು ಹೆಚ್ಚಿನವುಗಳಲ್ಲಿ ತಮ್ಮದೇ ಆದ ವಿಶ್ವವಿದ್ಯಾಲಯಗಳಲ್ಲಿ ಅದೇ ರೀತಿ ಮಾಡಲು ಇತರರನ್ನು ಪ್ರೇರೇಪಿಸಿದೆ. ದಮನದಿಂದ ಆಕ್ರೋಶಗೊಂಡು ಹೆಚ್ಚೆಚ್ಚು ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಗಾಜಾ ನರಮೇಧದ ವಿರುದ್ಧ ಯು.ಎಸ್  ಮತ್ತು ಜಗತ್ತಿನ ನೂರಾರು ವಿ.ವಿ ಗಳಲ್ಲಿ ಬೃಹತ್ ವಿದ್ಯಾರ್ಥಿ ಚಳುವಳಿ
ಗಾಜಾ ನರಮೇಧದ ವಿರುದ್ಧ  ಪ್ಯಾರೀಸ್ ವಿವಿ ಯಲ್ಲಿವಿದ್ಯಾರ್ಥಿ ಚಳುವಳಿ

ಪ್ಯಾಲೆಸ್ಟೈನ್ ಗೆ  ಬೆಂಬಲವಾಗಿ ಮತ್ತು ಗಾಜಾದಲ್ಲಿ ಇಸ್ರೇಲ್  ನಡೆಸುತ್ತಿರುವ ನರಮೇಧದ ವಿರುದ್ಧ ಯುಎಸ್ ನಾದ್ಯಂತ ಸಮರಶೀಲ ಚಳುವಳಿಯ ಅಲೆಯು ಪ್ರಪಂಚದಾದ್ಯಂತ ಹರಡುವ ಲಕ್ಷಣಗಳಿವೆ  ಮತ್ತು ಅಂತರರಾಷ್ಟ್ರೀಯ ಸುದ್ದಿಗಳಲ್ಲಿ  ಮರೆಮಾಚಲು ಅಸಾಧ್ಯವಾಗುವಂತೆ ಕಾಣಿಸಿಕೊಂಡಿದೆ.  ‘ಪ್ಯಾಲೇಸ್ಟಿನಿಯನ್ ಎಜುಕೇಷನಲ್ ಕಲೆಕ್ಟಿವ್’ ಈ ಚಾರಿತ್ರಿಕ ಚಳುವಳಿಯನ್ನು ಸ್ವಾಗತಿಸುತ್ತಾ ಅಭಿನಂದಿಸುತ್ತಾ ನೀಡಿದ  ಹೇಳಿಕೆಯ ಆಯ್ದ ಭಾಗಗಳು ಹೀಗಿವೆ :

..ಈ ಪ್ರತಿಭಟನೆಗಳು ನಮ್ಮ ಸಾಮೂಹಿಕ ವಿಮೋಚನೆಯ ಹೋರಾಟದಲ್ಲಿ ನಿರ್ಣಾಯಕ ತಿರುವನ್ನು ಪ್ರತಿನಿಧಿಸುತ್ತವೆ. ವಸಾಹತುಶಾಹಿ ಮತ್ತು ತುಳಿತಕ್ಕೊಳಗಾಗಿರುವ ಜನರ ಸ್ವಾತಂತ್ರ್ಯಕ್ಕಾಗಿ, ಜಾಗತಿಕ ಹೋರಾಟಗಳ ಸುದೀರ್ಘ ಸಂಪ್ರದಾಯದಿಂದ ಹೊರಹೊಮ್ಮಿರುವ ಮತ್ತು ಮುಂದುವರೆಯುತ್ತಿರುವ  ಈ ಪ್ರತಿಭಟನೆಗಳು, ಪ್ಯಾಲೇಸ್ಟಿನಿಯನ್ ಜನರ ವಿರುದ್ಧ ನಡೆಯುತ್ತಿರುವ 76 ವರ್ಷಗಳ ನರಮೇಧ ಮತ್ತು ಶಾಶ್ವತ ಯುದ್ಧವನ್ನು ಕೊನೆಗಾಣಿಸಲು,  ವಿಶ್ವದಾದ್ಯಂತದ ಜನರು ತಮ್ಮಪ್ರಾಣ, ಸ್ವಾತಂತ್ರ್ಯ ಮತ್ತು ಭವಿಷ್ಯವನ್ನು ಬಲಿಗೊಡಲು ತಯಾರಾಗಿರುವುದು  ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕ್ಷಣ.

ನೀವು ಕ್ಯಾಂಪಸ್  ಗಳಲ್ಲಿ ಶಿಬಿರಗಳನ್ನು ನಿರ್ಮಿಸುತ್ತಿರುವಾಗ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ನರಮೇಧದಿಂದ ಲಾಭ ಪಡೆಯುವ ಕಂಪನಿಗಳಿಂದ ದೂರವಿರಬೇಕೆಂದೂ, ಇಸ್ರೇಲಿ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೊನೆಗೊಳಿಸಬೇಕೆಂದೂ ನೀವು ಒತ್ತಾಯಿಸುತ್ತಿರುವಾಗ  ನೀವು ಇತಿಹಾಸವನ್ನು ರಚಿಸುತ್ತಿದ್ದೀರಿ! ಪ್ಯಾಲೇಸ್ಟಿನಿಯನ್ ವಿಮೋಚನೆಗಾಗಿ ನಿಮ್ಮ ಕೂಗು ಜೋರಾಗಿ ಕೇಳುತ್ತಿದೆ ಮತ್ತು ವಿಶ್ವದಾದ್ಯಂತ ನಿಧಾನವಾಗಿ ಆದರೆ ಬಲವಾಗಿ ಮಾರ್ದನಿಸುತ್ತಿದೆ.

ಮೇ 1, 2024

ಇದನ್ನು ನೋಡಿ : ರಾಯಚೂರು ಲೋಕಸಭೆ : ಬಿಜೆಪಿಯೊಳಗೆ ಬಂಡಾಯ, ಕಾಂಗ್ರೆಸ್‌ನೊಳಗೆ ಬೇಗುದಿ Janashakthi Media

Donate Janashakthi Media

Leave a Reply

Your email address will not be published. Required fields are marked *