ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‍ಐ) ನೇಮಕಾತಿಯಲ್ಲಿ ಅಕ್ರಮ ಬಗ್ಗೆ ತನಿಖೆಯನ್ನು ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಅಲ್ಲದೆ, ಇಂದು(ಏಪ್ರಿಲ್ 17) ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಮುಖಂಡೆ ದಿವ್ಯಾ ಹಾಗರಗಿ ಮನೆ ದಾಳಿ ಮಾಡಿದೆ.
ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಬಿಜೆಪಿ ಮುಖಂಡೆ ಹಾಗೂ ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಅವರ ಮನೆಯನ್ನು ಶೋಧಿಸಲು ಸಿಐಡಿ ಡಿವೈಎಸ್‌ಪಿ ಶಂಕರಗೌಡ ನೇತೃತ್ವದ ತಂಡ ಭೇಟಿ ನೀಡಿದೆ.
ಇದನ್ನು ಓದಿ: ಪಿಎಸ್ಐ ನೇಮಕಾತಿಯಲ್ಲಿ ಭಾರೀ ಅಕ್ರಮ: ಸಿಐಡಿ ತನಿಖೆಗೆ ಸರ್ಕಾರ ಆದೇಶ
ರಾಜ್ಯದಲ್ಲಿ 545 ಪಿಎಸ್‍ಐ ಹುದ್ದೆ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಇರುವ ಕಾರಣಕ್ಕೆ ಸಿಐಡಿ ತನಿಖೆ ಚುರುಕುಗೊಳಿಸಿದೆ. ದಿವ್ಯಾ ಹಾಗರಗಿಗೆ ಸೇರಿದ್ದ ಜ್ಞಾನಜೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು. ಇದೇ ಶಾಲೆಯ ಮೂವರು ಮಹಿಳಾ ಕೊಠಡಿ ಮೇಲ್ವಿಚಾರಕರು, ಇದೇ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ನಾಲ್ವರು ಅಭ್ಯರ್ಥಿಗಳು ಸೇರಿ ಒಟ್ಟು ಏಳು ಜನರನ್ನು ಈಗಾಗಲೇ ಸಿಐಡಿ ತಂಡ ಬಂಧಿಸಿದೆ.
ದಿವ್ಯಾ ಹಾಗರಗಿ ಅವರು ಬಿಜೆಪಿ ಮುಖಂಡೆ ಹಾಗೂ ಹಿಂದುಪರ ಕಾರ್ಯಕರ್ತೆ. ಕಳೆದ ಮೂರು-ನಾಲ್ಕು ದಿನಗಳಿಂದ ದಿವ್ಯಾ ಅವರು ನಾಪತ್ತೆಯಾಗಿದ್ದಾರೆ. ಹೀಗಾಗಿ ದಿವ್ಯಾ ಪತಿ ರಾಜೇಶ್ರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಿವ್ಯಾ ಅವರು ವಿಜಯಪುರಕ್ಕೆ ಹೋಗಿರುವುದಾಗಿ ವಿಚಾರಣೆ ವೇಳೆ ರಾಜೇಶ್ ಹಾಗರಗಿ ಮಾಹಿತಿ ನೀಡಿದ್ದಾರೆ.