ಹಾಸನ: ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಬೆಳಗುಂಬ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ತಮ್ಮ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಬಂದಿದ್ದ ವೇಳೆ ಸೊಸೈಟಿ ವಿಚಾರವಾಗಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸಹಕಾರ ಸಂಘದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಅಲ್ಲದೆ, ಗ್ರಾಮದಲ್ಲಿ ಗೊಂದಲ, ಗಲಾಟೆ ಹುಟ್ಟು ಹಾಕಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ತಿರುಗಿಬಿದಿದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಮಾಜಿ ಕಾರ್ಯದರ್ಶಿಯಾಗಿದ್ದ ಎನ್.ಆರ್.ಸಂತೋಷ್‌ನನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನಮ್ಮೂರ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು, ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ ಒಂದು ಕೋಟಿ ದುಡ್ಡು ಹಾಕಿಸಿದ್ದೀವಿ. ಗ್ರಾಮಕ್ಕೆ ಬಂದಿದ್ದೀಯಾ ಮತಯಾಚನೆ ಮಾಡಿ ಇಲ್ಲಿಂದ ಜಾಗ ಖಾಲಿ ಮಾಡು ಎಂದು ಗ್ರಾಮಸ್ಥರು ಮುಗಿ ಬಿದಿದ್ದಾರೆ.
ಇದನ್ನು ಓದಿ: ಶಿಲ್ಪಕಲೆಗಳ ನಾಡು ಹಾಸನ ಜಿಲ್ಲೆಯಲ್ಲಿ ಕೋಮುವಾದದ ಮೋಡ ಮುಸುಕುತ್ತಿದೆ
ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ? ನಿನಗೆ ನಮ್ಮ ಸೊಸೈಟಿ ಬಗ್ಗೆ ಆಸಕ್ತಿ ಇದ್ದರೆ ನಿನ್ನ ಸ್ವಂತ ಜಾಗ ಕೊಡು. ನಾವ್ಯಾಕೆ ನಿನ್ನ ಜೊತೆ ಬರಬೇಕು, ನಿನ್ನಂತಹವರನ್ನು ಬಹಳ ಜನ ನೋಡಿದ್ದೀವಿ. ಎಲ್ಲಿಂದಲೂ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರ್ತಿಯಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುಣಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿವಾರು ಮಹಿಳೆಯರಿಗೆ ಮಡಿಲಕ್ಕಿ ತುಂಬುವ ಹಾಗೂ ಅರಿಶಿಣ ಕುಂಕುಮ ವಿತರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ/ ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಸಮಾವೇಶದ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ.
ಎನ್.ಆರ್. ಸಂತೋಷ್ ಹಾಗೂ ಗ್ರಾಮಸ್ಥರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಎನ್.ಆರ್ ಸಂತೋಷ್ ಮೇಲೆ ಹಲ್ಲೆ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿದ ಎನ್.ಆರ್.ಸಂತೋಷ್ ಸ್ಥಳದಿಂದ ಕಾಲ್ಕಿತ್ತರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ