ಮುಂಬಯಿ: ನಾನು ಬಿಜೆಪಿ ಪಕ್ಷದ ಸಂಸದನಾಗಿರುವ ಕಾರಣ ನನ್ನ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸುವುದಿಲ್ಲ ಎಂದು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಜಯ್ ಪಾಟೀಲ್ ಹೇಳಿದ್ದಾರೆ.
ನಾನು ಬಿಜೆಪಿ ಪಕ್ಷಕ್ಕೆ ಸೇರಿದ ನಂತರ ಯಾವ ತನಿಖೆಗಳ ಭಯವೂ ಇಲ್ಲದ ಕಾರಣ ನೆಮ್ಮದಿಯಾಗಿ, ಗೊರಕೆ ಹೊಡೆಯುತ್ತಾ ನಿದ್ರೆ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಕೆಲವು ದಿನಗಳ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಸಂಸದ ಸಂಜಯ್ ಪಾಟೀಲ್ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿ: ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ತೆರಿಗೆ ದರ ಕಾರಣವೇ?
ಸಂಜಯ್ ಪಾಟೀಲ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಾನು ಬಿಜೆಪಿ ಸಂಸದನಾಗಿರುವುದರಿಂದ ಇಡಿ ನನ್ನ ಮೇಲೆ ದಾಳಿ ಮಾಡುವುದಿಲ್ಲ. 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಲು ನಾವು ಸಾಲ ತೆಗೆದುಕೊಳ್ಳಬೇಕಾಗಿದೆ. ನಮ್ಮಲ್ಲಿರುವ ಸಾಲದ ಮೊತ್ತವನ್ನು ನೋಡಿದರೆ ಇಡಿ ಆಶ್ಚರ್ಯವಾಗುತ್ತದೆ ಎಂದು ಅವರು ಎಂದು ಹೇಳಿದ್ದಾರೆ.
ಎನ್‌ಸಿಪಿ ಹಾಗೂ ಶಿವಸೇನೆ ಪಕ್ಷಗಳು ಬಿಜೆಪಿ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿವೆ. ಎನ್‌ಸಿಪಿ ವರಿಷ್ಠ ಶರದ್ ಪವಾರ್ ಇತ್ತೀಚೆಗೆ ಆರೋಪಿಸಿದರು. ಅದೇ ದಿನ ಹರ್ಷವರ್ಧನ್ ಪಾಟೀಲ್ ಕೂಡ ಹೇಳಿಕೆಯೊಂದನ್ನು ನೀಡಿ ʻಕೇಸರಿ ಪಕ್ಷದಲ್ಲಿರುವ ಕಾರಣದಿಂದಾಗಿ ನನ್ನ ವಿರುದ್ಧ ಯಾವುದೇ ವಿಚಾರಣೆ, ಕೇಸ್ಗಳು ಇರುವುದಿಲ್ಲ, ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇನೆʼ ಎಂದು ಹರ್ಷವರ್ಧನ್ ಪಾಟೀಲ್ ಹೇಳಿದ್ದರು.
ಇದನ್ನು ಓದಿ: ಬಿಜೆಪಿ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಬುಡಮೇಲು ಹಿಂದುತ್ವ ಸರ್ವಾಧಿಕಾರಶಾಹಿಗೆ ಹಕ್ಕುಗಳ ಆಯೋಗವೂ ಬಲಿ
ಪುಣೆ ಜಿಲ್ಲೆಯ ಇಂದಾಪುರದ ಮಾಜಿ ಶಾಸಕರಾಗಿದ್ದ ಹರ್ಷವರ್ಧನ್ ಪಾಟೀಲ್ ಅವರು 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಕೆಲವರು ನಾನು ಯಾಕೆ ಬಿಜೆಪಿಗೆ ಸೇರಿದೆ ಎಂದು ಕೇಳುತ್ತಾರೆ. ನಾನು ಯಾಕೆ ಕಾಂಗ್ರೆಸ್ ತೊರೆದೆ ಎಂದು ನಿಮ್ಮ ನಾಯಕರನ್ನೇ ಕೇಳಿ. ಬಿಜೆಪಿಯಲ್ಲಿ ಎಲ್ಲವೂ ಸುಲಭವಾಗಿ ಆಗುತ್ತದೆ. ಇಲ್ಲಿ ಯಾವುದೇ ವಿಚಾರಣೆ ಇಲ್ಲದ ಕಾರಣ ನಾನೀಗ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇನೆ ಎಂದು ಹರ್ಷವರ್ಧನ್ ಪಾಟೀಲ್ ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದರು.
ಇಡಿ ತನಿಖಾ ಸಂಸ್ಥೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಇಬ್ಬರು ನಾಯಕರುಗಳ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.