ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಾಕಿ ಇರುವ ಸಂದರ್ಭದಲ್ಲಿಯೇ ಬಿಜೆಪಿ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ತಮ್ಮ ಮತದಾರರ ವಿವರವನ್ನು ಸೇರಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠಕ್ಕೆ ಕಾಂಗ್ರೆಸ್ನ ಪಾಲಿಕೆ ಸದಸ್ಯರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ವಿಧಾನಪರಿಷತ್ ಸದಸ್ಯರಿಗೆ ಖುದ್ದು ನೋಟಿಸ್ ನೀಡಲು ಸೂಚನೆ ನೀಡಿದೆ.
ಇದನ್ನು ಓದಿ: ಕಲಬುರ್ಗಿ, ಬಳ್ಳಾರಿ ಮೇಯರ್- ಉಪಮೇಯರ್ ಚುನಾವಣೆ ಮುಂದೂಡಿಕೆ
ಕಲಬುರಗಿ ಪಾಲಿಕೆ ಸದಸ್ಯೆ ವರ್ಷಾ ಜಾನೆರಿಂದ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದೆ.
ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಜೆಪಿ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ರಘುನಾಥ ಮಲ್ಕಾಪುರೆ, ಡಾ. ತಳವಾರ ಸಾಬಣ್ಣ ಅವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ವಾದ ಮಂಡಿಸಿದರು. ನವೆಂಬರ್ 29ಕ್ಕೆ ರಿಟ್ ಅರ್ಜಿ ವಿಚಾರಣೆ ಮುಂದೂಡಲಾಗಿದೆ.