ಹೈದರಾಬಾದ್: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಹೈದರಾಬಾದ್‌ನಲ್ಲಿ ನೆನ್ನೆ(ಆಗಸ್ಟ್ 22) ರಾತ್ರಿ ಶಾಸಕ ರಾಜಾ ಸಿಂಗ್ ಪ್ರವಾದಿ ಮಹಮ್ಮದ್ ಕುರಿತು ಮಾತನಾಡುವ ವಿಡಿಯೋವೊಂದು ಬಿಡುಗಡೆಯಾಗಿದ್ದು, ತದ ನಂತರ ಶಾಸಕನ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಬಶೀರ್ ಬಾಗ್‌ನಲ್ಲಿರುವ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನಾಕಾರರು, ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ.
ತದ ನಂತರ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ವೀಡಿಯೊವನ್ನು ಬಿಡುಗಡೆಗೊಂಡಿದೆ. ಇದನ್ನು “ಕಾಮಿಡಿ” ಎಂದು ಕರೆದು, ಹಾಸ್ಯನಟ ಮುನಾವರ್ ಫರುಕಿ ಮತ್ತು ಅವರ ತಾಯಿಯನ್ನು ನಿಂದಿಸಿದ್ದರು.
‘ಅವನು ಭಗವಾನ್ ರಾಮ ಮತ್ತು ಸೀತೆಯನ್ನು ನಿಂದಿಸುತ್ತಿದ್ದಾನೆ’ ಎಂದು ನನಗೆ ಅನಿಸಿದ್ದರಿಂದ ನಾನು ಅವನ ಮತ್ತು ಮುಸ್ಲಿಮರು ಧರಿಸಿರುವ ವೃತ್ತಾಕಾರದ ಟೋಪಿಗಳ ಬಗ್ಗೆ ಸಂಶೋಧನೆ ಮಾಡಬೇಕು ಎಂದು ಹೇಳಿದೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ 10 ನಿಮಿಷ 27 ಸೆಕೆಂಡುಗಳ ವೀಡಿಯೊದಲ್ಲಿ ಹೇಳಿದ್ದಾರೆ. ಅದರ ಕೊನೆಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ. ನಂತರ ರಾಜಾ ಸಿಂಗ್ ತಾವು ಏನು ಹೇಳಿದರೂ ಅದು ಹಾಸ್ಯವೆಂದು ಹೇಳಿದ್ದಾರೆ. ತೆಲಂಗಾಣದ ಶ್ರೀರಾಮ್ ಚಾನೆಲ್ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
ಇದಕ್ಕೂ ಮೊದಲು, ರಾಜಾ ಸಿಂಗ್ ಅವರು ನನ್ನ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದರು. ಅಲ್ಲದೆ, ಕಾರ್ಯಕ್ರಮದ ಸ್ಥಳದಲ್ಲಿದ್ದ ಸೆಟ್ ಅನ್ನು ಸುಟ್ಟುಹಾಕುವುದಾಗಿ ಹೇಳಿದ್ದರು ಎಂದು ಮುನಾವರ್ ಫರುಕಿ ತಿಳಿಸಿದ್ದಾರೆ.
ತೆಲಂಗಾಣ ಪೊಲೀಸರು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಟಿ.ರಾಜಾ ಸಿಂಗ್ ಮೇಲಿನ ದಾಳಿಯ ಭೀತಿಯಿಂದ ಪೊಲೀಸರು ಮಂಗಲ್‌ಹಟ್ ಮತ್ತು ಧೂಲ್‌ಪೇಟ್ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಂತೆ ‘ಚಲೋ ಗೋಶಾಮಹಲ್’ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿರುವುದರಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.