ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ಲಂಚ ಕೊಟ್ಟಿರುವೆ: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​

ಬೆಂಗಳೂರು: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್‌ ಮಂಜುನಾಥ್‌, ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಶಾಸಕ ತಿಪ್ಪಾರೆಡ್ಡಿ ಅವರಿಂದ, ತಿಪ್ಪಾರೆಡ್ಡಿ ಕ್ಷೇತ್ರದಲ್ಲಿ ಸುಮಾರು 700 ರಿಂದ 800 ಕೋಟಿ ರೂ. ಕಾಮಗಾರಿ ನಡೆದಿದೆ. ಕೈ ಬೆರಳುಗಳ ಮೂಲಕ ಕಮಿಷನ್ ಅನ್ನು ಶಾಸಕರು ಕೇಳುತ್ತಿದ್ದರು. 2019 ರಿಂದ ಇಲ್ಲಿಯವರೆಗೂ 90 ಲಕ್ಷ ರೂ.ಗಳನ್ನು ಕಮಿಷನ್ ಹಣದ ರೂಪದಲ್ಲಿ ತಿಪ್ಪಾರೆಡ್ಡಿ ಅವರಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಕಮಿಷನ್‌ ಆರೋಪದ ತನಿಖೆ ನಡೆಸಿದರೆ 25ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ: ಡಿ.ಕೆಂಪಣ್ಣ

ಚಾಮರಾಜಪೇಟೆಯಲ್ಲಿರುವ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿಯೇ ಇದೆ. 4 ಮಂದಿ ಸಚಿವರು ಹಾಗೂ 13 ರಿಂದ 14 ಮಂದಿ ಶಾಸಕರು ಈ ಆರೋಪಕ್ಕೆ ಗುರಿಯಾಗಿದ್ದಾರೆ. ಅವರು ಲಂಚ ಪಡೆದಿರುವ ಬಗ್ಗೆ ದಾಖಲೆಗಳು ಇವೆ. ಆದರೆ, ಅವರ ಹೆಸರುಗಳನ್ನು ಈಗ ಬಹಿರಂಗಗೊಳಿಸಲ್ಲ. ಏಕೆಂದರೆ ದಾಖಲೆ ಬಿಡುಗಡೆಗೊಳಿಸಿದರೆ, ಗುತ್ತಿಗೆದಾರರ ಕುಟುಂಬಸ್ಥರಿಗೆ ತೊಂದರೆ ಆಗುತ್ತದೆ ಎಂದರು.

ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಹಾಗೂ ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಆಗಿರುವ ಆರ್. ಮಂಜುನಾಥ್, ಎರಡೂವರೆ ಕೋಟಿ ಕಾಮಗಾರಿಗೆ ಎರಡೂವರೆ ಲಕ್ಷ ಲಂಚ ಕೊಟ್ಟಿದ್ದೀನಿ. ಸಾಲ ಮಾಡಿ ಲಂಚ ನೀಡುವ ಸ್ಥಿತಿ ಬಂದಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಡಿಯೋ, ವಿಡಿಯೋ ಇದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಶಾಸಕ ತಿಪ್ಪಾರೆಡ್ಡಿ ಅವರಿಂದ ಎಂದು ಆರೋಪಿಸಿದರು.

ಇದನ್ನು ಓದಿ: ಶೇ. 40 ಕಮಿಷನ್ ವಿಚಾರದ ಬಗ್ಗೆ ಯಡಿಯೂರಪ್ಪಗೆ ಪತ್ರ ಬರೆದರೂ ಸ್ಪಂದಿಸಲಿಲ್ಲ: ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ

ಶಾಸಕ ತಿಪ್ಪಾರೆಡ್ಡಿ ಅವರು, ಮೊದಲ ಕೋವಿಡ್ ಸಮಯದಲ್ಲಿ ಶೇ.10 ರಷ್ಟು ಕಮಿಷನ್ ಪಡೆದರು. ನಂತರ ಎರಡನೇ ಕೋವಿಡ್ ಅಲೆಯಲ್ಲೂ ಶೇ.10 ರಷ್ಟು ಕಮಿಷನ್ ಪಡೆದುಕೊಂಡಿದ್ದಾರೆ. ಮೆಡಿಕಲ್ ಆಕ್ಸಿಜನ್‌ ರೂಂ ನಿರ್ಮಾಣಕ್ಕೆ 4 ಲಕ್ಷ, ಲೇಔಟ್ ನಿರ್ಮಾಣಕ್ಕೆ 4 ಲಕ್ಷ, ಲೇಔಟ್ ಅನುಮತಿಗಾಗಿ 18 ಲಕ್ಷ, ಆಸ್ಪತ್ರೆ ರಿಪೇರಿಗೆ 12.5 ಲಕ್ಷ ಹೀಗೆ ವಿವಿಧ ಹಂತಗಳಲ್ಲಿ ಲಂಚ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮೂರು ವರ್ಷ ಕಳೆದರೂ ಕಾಮಗಾರಿ ಗುತ್ತಿಗೆ ಮೊತ್ತ ಪಾವತಿಯಾಗಿಲ್ಲ. ಸಚಿವ ಸಿ.ಸಿ. ಪಾಟೀಲ್ ಅವರನ್ನು ಕೇಳಿದರೆ ನೀತಿ ಪಾಠ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *