ತುಮಕೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೊನೆಗೂ ಬಂಧಿಸಲ್ಪಿಟ್ಟಿದ್ದಾರೆ. ಬಂಧನದ ಭೀತಿಯಿಂದ ಕಾರಿನಲ್ಲಿ ಬೇರೆಡೆಗೆ ತೆರಳುತ್ತಿದ್ದ ಅವರನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಬಂಧಿಸಲಾಗಿದೆ.
ತುಮಕೂರಿನ ಕ್ಯಾತಸಂದ್ರ ಟೋಲ್ ಗೇಟ್ ಬಳಿ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪರನ್ನು ಬಂಧಿಸಿದ್ದು, ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಶಾಸಕ ಮಾಡಾಳ್ ಚಿತ್ರದುರ್ಗದಿಂದ ಬೆಂಗಳೂರಿನತ್ತ ಕೆಎ 17 ಝಡ್ 7929 ನಂಬರಿನ ಬಿಳಿ ಇನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಮಾಡಾಳ್ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿ ಇಂದು ವಜಾಗೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕ ಕಾರ್ಯಕ್ರಮದಲ್ಲಿದ್ದ ಮಾಡಾಳ್, ಅದನ್ನು ಅರ್ಧಕ್ಕೇ ಮೊಟಕುಗೊಳಿಸಿ ನಾಪತ್ತೆಯಾಗಿದ್ದರು. ಕೊನೆಗೂ ಲೋಕಾಯುಕ್ತ ಪೊಲೀಸರು ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದರು. ಅವರ ಪುತ್ರ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಚೀಫ್ ಅಕೌಂಟೆಂಟ್ ಆಗಿದ್ದು, ತಂದೆಯ ನಿಗಮದಲ್ಲಿ ಟೆಂಡರ್ ನೀಡಲು ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಬರೋಬ್ಬರಿ 6 ಕೋಟಿ ನಗದು ಹಣದೊಂದಿಗೆ ಮಾಡಾಳ್ ಪ್ರಶಾಂತ್‌ನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು.
ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಎ1 ಆರೋಪಿ ಅಂತ ಹೆಸರಿಸಲಾಗಿತ್ತು. ಇಷ್ಟೆಲ್ಲಾ ಆಗುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೇ ಮಾಡಾಳ್ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದರು. ಬಳಿಕ ಕೋರ್ಟ್ ಜಾಮೀನು ನೀಡುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ದರು. ಇದಾಗುತ್ತಿದ್ದಂತೆ ಚನ್ನಗಿರಿಯ ಮಾಡಾಳು ಗ್ರಾಮದಿಂದ ಬೆಂಗಳೂರಿಗೆ ಬಂದಿದ್ದ ಮಾಡಾಳು ವಿರೂಪಾಕ್ಷಪ್ಪ, ಸಿಎಂ ಕಚೇರಿಗೆ ತೆರಳಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಾಪತ್ತೆಯಾಗಿದ್ದರು.