ಮೈಸೂರು : ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ಸುಳ್ಳು ಸುದ್ದಿ ಹಿಂದೆಯೇ .ಡಿಕೆ ಶಿವಕುಮಾರ್ ಮತ್ತು ಸೋಮಣ್ಣ ಒಟ್ಟಿಗೆ ಕುಳಿತು ಮಾತನಾಡುತ್ತಿರುವ ಫೋಟೊ ಇದೀಗ ವೈರಲ್ ಆಗಿದ್ದು ಈ ವಿಚಾರ ಸಂಬಂಧ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರ ಹಿನ್ನೆಲೆ ಸಚಿವ ಸೋಮಣ್ಣ, ಮಾತನಾಡಿ ಡಿಕೆ ಶಿವಕುಮಾರ್ ಮತ್ತು ನಾನು ಇರುವ ಆ ಫೋಟೊ ಹಳೆಯದ್ದು ಈಗ ಆ ಫೋಟೊ ವೈರಲ್ ಆಗಿದ್ದು ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ನಾನು ಬಿಜೆಪಿ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ. ನನಗೆ ಇತಿಮಿತಿ ಗೊತ್ತಿದೆ. ಬಿಜೆಪಿ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ, ಅಮಿತ್ ಶಾ ಸಿಎಂ ಬೊಮ್ಮಾಯಿ ನಾಯಕತ್ವ ಇದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಕೆಲವು ದಿನಗಳ ಹಿಂದೆ ನಾನು ನಿಂತ ನೀರಲ್ಲ. ಹರಿಯೋ ನೀರು. ಮನೆ ಮಗನಾಗಿ ಕ್ಷೇತ್ರದ ಜನರು ನೋಡಿದ್ದಾರೆ. ನಾನು ಯಾರ ಬಗ್ಗೆಯೂ ಒಂದು ಅಕ್ಷರವೂ ಮಾತನಾಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮತ್ತೆ ಬಿಜೆಪಿ ಮುಖಂಡರ ವಿರುದ್ದವೇ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ಅವರು ರಾಜ್ಯಾಧ್ಯಕ್ಷರು, ಸಿಎಂ ಜೊತೆ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೇನೆ. ಕ್ಷೇತ್ರದ ಜನರು ನನ್ನನ್ನ ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನನಗೆ ಈಗ 72 ವರ್ಷ, ನನಗೆ ಈಗ ಆಗಬೇಕಿದ್ದು ಏನು ಇಲ್ಲ, ಸೋಮಣ್ಣ ಮಾತ್ರ ಹರಿಯುವ ನೀರು ಎಂಬುದರ ಬಗ್ಗೆ ಎಚ್ಚರಿಕೆಯಿರಬೇಕು ಎಂದು ಹೇಳಿರುವ ಅವರು, ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ನಾನು ಏನು ಮಾತಾನಾಡುವುದಿಲ್ಲ ಎಂದು ಹೇಳಿದ್ದರು.
ಕಳೆದ ಹಲವು ದಿನಗಳಿಂದ ವಿ.ಸೋಮಣ್ಣ ಬಿಜೆಪಿ ಬಿಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಇತ್ತೀಚಿನ ಬೆಳವಣಿಗೆ ಕುರಿತಂತೆ ಅಸಮಾಧಾನಗೊಂಡಿರುವ ಅವರು, ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳು ಮುಂದುವರೆದಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಸೇರಿದಂತೆ ಸೋಮಣ್ಣನವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದೀಗ ಸಚಿವ ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.