ಮಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನಂತರ ಮತ್ತೀಗ ಕೆಂಪು ಕೋಟೆ ಮತ್ತು ಭಗವಧ್ವಜ ಬಗ್ಗೆ ಹೇಳಿಕೆಯೊಂದನ್ನು ಬಿಜೆಪಿ ಶಾಸಕ ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತುಳುವಿನಲ್ಲಿ ಮಾಡಿದ ಭಾಷಣದ ತುಣುಕುಗಳು ಈಗ ವೈರಲ್ ಆಗಿವೆ.
ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಹರೀಶ್ ಪೂಂಜಾ “ಕೆಂಪು ಕೋಟೆಯಲ್ಲಿ ಭಗವಧ್ವಜವನ್ನು ಹಿಂದೂ ಸಮಾಜ ಹಾರಿಸಿಯೇ ತೀರುತ್ತದೆ, ಆದರೆ ಅದು ರಾಷ್ಟ್ರಧ್ವಜದ ಕೆಳಗೆ ಭಗವಧ್ವಜವನ್ನು ಹಾರಿಸುತ್ತೇವೆ. ಇದನ್ನು ತಪ್ಪಿಸಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ, ಬಿಜೆಪಿ ಆ ಕೆಲಸವನ್ನು ಮಾಡುತ್ತದೆ”ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಹರೀಶ್ ಪೂಂಜಾ, ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಧ್ವಜ ಎದುರಿಟ್ಟು ಹೋರಾಟ ಮಾಡಿದರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಧ್ವಜ ಆಗಿದೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯಿಂದಾಗಿ ವಿಧಾನ ಮಂಡಲದ ಅಧಿವೇಶನ ನಿಗದಿತವಾಗಿ ನಡೆಯದೆ ನುಂಗಿ ಹಾಕಿತು. ಅಲ್ಲದೆ, ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಛೀಮಾತಿ ಹಾಕಿದ್ದರು. ಈಗ ಬಿಜೆಪಿಯ ಮತ್ತೊಬ್ಬ ಶಾಸಕ ವಿವಾದೀತ ಹೇಳಿಕೆ ನೀಡಿದ್ದಾರೆ.