ಲಕ್ಷ ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡ
ಕೊಪ್ಪಳ: ವಂಚಕಿ ಚೈತ್ರಾ ಕುಂದಾಪುರ & ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ ಕೋಟಿ ಕೋಟಿ ಪಂಗನಾಮ ಹಾಕಿರುವ ಘಟನೆ ಹೊರ ಬಂದ ಬೆನ್ನಲ್ಲೇ ಇದೀಗ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ನಡೆದ ಪ್ರಕರಣಗಳು ಒಂದರ ಮೇಲೊಂದರಂತೆ ಹೊರಗೆ ಬರುತ್ತಿದೆ.
ಉಡುಪಿಯ ಉದ್ಯಮಿ ಗೋವಿಂದ ಪೂಜಾರಿಗೆ ಆದ ಮೋಸದ ರೀತಿಯಲ್ಲೇ ಕೊಪ್ಪಳದ ಕನಕಗಿರಿಯ ಬಿಜೆಪಿ ಕಾರ್ಯಕರ್ತನಿಗೆ ಲಕ್ಷ ಲಕ್ಷ ಟೋಪಿ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಭಾರೀ ಪ್ರಯತ್ನ ಮಾಡಿದ್ದ ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಎಂಬ ವ್ಯಕ್ತಿ ಲಕ್ಷ ಲಕ್ಷ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. ಗಾಯತ್ರಿ ತಿಮ್ಮಾರೆಡ್ಡಿ ಎಂಬ ಮಹಿಳೆ ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರ ಪತಿ ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ತನ್ನ ಪತ್ನಿಗೆ ಬಿಜೆಪಿ ಟಿಕೆಟ್ ಕೊಡಿಸಲು ಭಾರಿ ಪೈಪೋಟಿ ಮಾಡಿದ್ದರು. ಇದನ್ನೇ ಗುರಾಣಿಯನ್ನಾಗಿಸಿಕೊಂಡ ಮೂವರು ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ವಂಚಿಸಿದ್ದು ಯಾರು?
ಕೊಪ್ಪಳದಲ್ಲಿ ಕೂಡ ವಂಚಕಿ ಚೈತ್ರಾ ಕುಂದಾಪುರ & ಗ್ಯಾಂಗ್ ರೀತಿಯಲ್ಲೇ ಮೋಸ ಮಾಡಲಾಗಿದ್ದು, ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರು ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಅವರಿಂದ ಬರೋಬ್ಬರಿ 21 ಲಕ್ಷ ಹಣ ಪಡೆದುಕೊಂಡು ಪಂಗನಾಮ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂದ ಜುಲೈ 19 ರಂದು ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಅವರು ಮೂವರ ವಿರುದ್ದ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಮಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪರಿಚಯವೆಂದು ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ನಂಬಿಸಿದ ವಂಚಕರು, ರಾಜ್ಯದಲ್ಲಿ ಸಮೀಕ್ಷೆ ಮಾಡ್ತಿದ್ದೇವೆ, ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರ್ತೀವಿ ಅಂದಿದ್ದರು. ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ ಅಂತ ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್‌ನನ್ನು ನಂಬಿದ ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ 21 ಲಕ್ಷ ಹಣವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ದೂರು ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಅವರು ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ರೀತಿ ಬಹಳ ಜನರಿಗೆ ಮೋಸ ಮಾಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.